

ಕೋಲಾರ: ವೈಜ್ಞಾನಿಕವಾಗಿ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಸ್ಥಾಪನೆಯಿಂದ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವಿಸ್ತರಣಾ ನಿರ್ದೇಶಕ ಡಾ.ವೆಂಕಟೇಶಲು ಹೇಳಿದರು.
ಕೃಷಿ ಇಲಾಖೆಯಿಂದ ಕೆವಿಕೆಯಲ್ಲಿ ಸೋಮವಾರ ಪಿಎಂಎಫ್ಎಂಇ ಯೋಜನೆಯ ಫಲಾನುಭವಿಗಾಗಿ ಉದ್ಯಮ ಸ್ಥಾಪನೆ, ಉದ್ಯಮಶೀಲತೆ, ಹಣಕಾಸು ನಿರ್ವಹಣೆ, ಬ್ಯಾಂಕಿಗ್ ಮತ್ತು ಸಾಲದ ಬಗ್ಗೆ ತಿಳುವಳಿಕೆ, ಮಾರುಕಟ್ಟೆ ಮತ್ತು ಮಾರಾಟ, ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳು, ವ್ಯಾಪಾರ ನೋಂದಣಿ ಮತ್ತು ಇತರ ಕಾನೂನು ಅನುಸರಣೆಗಳ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ತರಬೇತಿ ಬಹಳ ಪ್ರಮುಖವಾಗಿದ್ದು ಪಿಎಂಎಫ್ಎಂಇ ಯೋಜನೆಯಿಂದ ಅನುಕೂಲತೆ ಪಡೆದ ಫಲಾನುಭವಿಗಳು, ಪೌಷ್ಠಿಕಾಂಶಭರಿತ ಆಹಾರ ಪದಾರ್ಥಗಳನ್ನು ತಯಾರಿಸಬೇಕು. ಶುಚಿ ಹಾಗೂ ರುಚಿ ಆಹಾರ ಪದಾರ್ಥಗಳನ್ನು ತಯಾರು ಮಾಡಿದಾಗ ಮಾರುಕಟ್ಟೆಯಲ್ಲಿ ಬೇಡಿಕೆ ತನಾಗಿಯೇ ಸಿಗುತ್ತದೆ ಎಂದು ತಿಳಿಸಿದರು.
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಬಿ.ಫಕ್ರುದ್ದೀನ್ ಮಾತನಾಡಿ, ಎಫ್ಎಸ್ಎಸ್ಐ, ಆಹಾರ ಪ್ರಯೋಗಾಲಯದಲ್ಲಿ ಉತ್ಪನ್ನಗಳನ್ನು ಪರಿಕ್ಷೀಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕು. ಗ್ರಾಹಕರಿಗೆ ಬೇಕಾದ ಬೇಡಿಕೆಯ ಪ್ರಕಾರ ಪದಾರ್ಥಗಳನ್ನು ತಯಾರಿಸಿ ಎಂದು ಸಲಹೆ ನೀಡಿದರು.
ಕೆವಿಕೆಯ ಗೃಹ ವಿಜ್ಞಾನದ ವಿಜ್ಞಾನಿ ಡಾ.ಜಿ.ಎಸ್.ಚಿಕ್ಕಣ್ಣ ಮಾತನಾಡಿ, ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯನ್ನು ಕೇಂದ್ರ ಸರ್ಕಾರ ಒಂದು ವರ್ಷದ ಅವಧಿಗೆ ರಾಜ್ಯದಲ್ಲಿ ವಿಸ್ತರಿಸಿದ್ದು, 5000 ಫಲಾನುಭವಿಗಳಿಗೆ ಸಹಾಯಧನ ಕಲ್ಪಿಸುವ ಗುರಿ ನೀಡಿದೆ. ಕೃಷಿಕರು, ಕೃಷಿಕರ ಮಕ್ಕಳು, ಜನ ಸಾಮಾನ್ಯರನ್ನು ಕೃಷಿ ಉದ್ಯಮಿಗಳನ್ನಾಗಿ ಪರಿವರ್ತಿಸಲು ಪ್ರಯತ್ನ ಇದಾಗಿದೆ ಎಂದು ಹೇಳಿದರು.
ಎಫ್ಪಿಒಗಳಿಗೆ ಯೋಜನೆಯಡಿ ಶೇ.50 ಗರಿಷ್ಠ 15 ಲಕ್ಷ ರೂ. ವರೆಗೆ ಸಹಾಯಧನ ಸಿಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರವು 60:40ರ ಅನುಪಾದಲ್ಲಿ ಸಹಾಯಧನ ಭರಿಸಲಿವೆ ಎಂದರು.
ಮಹಾವಿದ್ಯಾಲಯದ ಹಣಕಾಸು ನಿಯಂತ್ರಣಾಧಿಕಾರಿ ಎಂ.ಪಿ.ಶೆಲ್ಲಿಕೇರಿ, ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಆರ್.ಕೆ.ಮೆಸ್ತಾ, ಮುಖ್ಯಸ್ಥ ಡಾ.ವಿ.ಶಿವಾನಂದ ಹೊನಗಲ್, ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಡಾ.ಪಿ.ಅಭಿಷೇಕ್, ಕೆನರಾ ಬ್ಯಾಂಕ್ನ ಹಣಕಾಸು ಸಲಹೆಗಾರ ವಿಶಾಲಕ್ಷ್ಮಮ್ಮ, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ರಾಜು, ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಕೃಷ್ಣ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಜೋಶಿ ಇದ್ದರು.