

ಕೋಲಾರ: ಡಿಸಿಸಿ ಬ್ಯಾಂಕ್ ಚುನಾವಣೆಗೆ ಟಿಎಪಿಸಿಎಂಸ್ ಕ್ಷೇತ್ರದಿಂದ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಶಾಸಕ ವೈ.ಸಂಪಂಗಿ ಪುತ್ರ ಪ್ರವಿಣ್ ಯಾರ ಗಮನಕ್ಕೂ ತಾರದೆ ನಾಮಪತ್ರ ವಾಪಸ್ ಪಡೆದು ಪಕ್ಷದ್ರೋಹ ಮಾಡಿದ್ದಾರೆ ಎಂದು ಮಾಜಿ ಸಚಿವ ವರ್ತೂರು ಆರ್. ಪ್ರಕಾಶ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರವಿಣ್ ಸುಮ್ ಸುಮ್ನೆ ಉಮೇದುವಾರಿಕೆ ವಾಪಸ್ ಪಡೆದಿಲ್ಲ. ಬಿಜೆಪಿಯ ದೊಡ್ಡವರೇ ಸೇರಿ ಕೊತ್ತೂರು ಮಂಜುನಾಥ್ ಬಳಿ ಕೆಮ್ಮಣ್ಣು ತಿಂದು ನಾಮಪತ್ರ ವಾಪಸ್ ಪಡೆಯುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಟಿಎಪಿಸಿಎಂಎಸ್ಗಳಿಂದ ಎರಡೂ ಜಿಲ್ಲೆಯಲ್ಲಿ ಬಿಜೆಪಿಯ ತಂಬಿಹಳ್ಳಿ ಮುನಿಯಪ್ಪ, ಪ್ರವಿಣ್ ಸೇರಿ 9 ಮತದಾರರಿದ್ದರು. ಚುನಾವಣೆ ನಡೆಯುವ 15 ದಿನಗಳ ಹಿಂದೆ ವೈ.ಸಂಪಂಗಿ ನನಗೆ ಕರೆ ಮಾಡಿ ಮಗನಿಗೆ ಸಹಕರಿಸುವಂತೆ ಕೋರಿದ್ದರು. ಆಗ ನಾನು, ತಂಬಿಹಳ್ಳಿ ಮುನಿಯಪ್ಪರಿಗೆ ನೀವು ಸಹಾಯ ಮಾಡಿ ಎಂದು ಹೇಳಿದ್ದೆ. ಗೌರಿಬಿದನೂರಿನಲ್ಲಿ ಒಬ್ಬ ಸೂಚಕರನ್ನು ಸಿದ್ಧಪಡಿಸಿದ್ದೆವು. ಅಲ್ಲದೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಬಳಿಯೂ ಚರ್ಚಿಸಿದ್ದೆವು. ಅವರೂ ಸಹ ತಂಬಿಹಳ್ಳಿ ಮುನಿಯಪ್ಪರಿಗೆ ಸಹಾಯ ಮಾಡುವಂತೆ ಹೇಳಿದ್ದರು ಎಂದರು.
ಕಡೆ ಪ್ರಯತ್ನದ ವರೆಗೂ ಯಶಸ್ವಿಯಾಗಲಿಲ್ಲ. ಹೀಗಾಗಿ ನಾಮಪತ್ರ ಸಲ್ಲಿಸಲು ಸಾಧ್ಯವಾಗಲಿಲ್ಲ. ಸಂಪಂಗಿ ಪುತ್ರ ನಾಮಪತ್ರ ಸಲ್ಲಿಸಿದರು. ಅದಾದ ಬಳಿಕ ನಮಗೆ ಒಂದು ಕರೆ ಸಹ ಮಾಡಿಲ್ಲ. ಆದರೆ, ವರ್ತೂರು ಪ್ರಕಾಶ್ ನಮಗೆ ಸಹಕಾರ ನೀಡದ ಹಿನ್ನೆಲೆಯಲ್ಲಿ ವಾಪಸ್ ಪಡೆದಿದ್ದೇವೆ ಎಂದು ನನ್ನ ಮೇಲೆ ಆರೋಪ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಮುಖಂಡರಾದ ತಂಬಿಹಳ್ಳಿ ಮುನಿಯಪ್ಪ, ಚಿಕ್ಕಹಸಾಳ ಮಂಜುನಾಥ್, ಸಿ.ಎಸ್.ವೆಂಕಟೇಶ್, ಬಂಕ್ ಮಂಜು, ಅರುಣ್ ಪ್ರಸಾದ್, ಸಿ.ಡಿ.ರಾಮಚಂದ್ರ, ಸೂಲೂರು ಆಂಜಿನಪ್ಪ, ಕಾಶಿ ವಿಶ್ವನಾಥ್ ಇದ್ದರು.
* ನೂರಕ್ಕೆ ನೂರು ಗೆಲ್ಲುತ್ತಿದ್ದರು
ಕೊತ್ತೂರು ಮಂಜುನಾಥ್ ಮೇಲೆ ಸದಸ್ಯರಿಗೆ ಅವಿಶ್ವಾಸವಿತ್ತು. ಹೀಗಾಗಿ ನೂರಕ್ಕೆ ನೂರರಷ್ಟು ಪ್ರವಿಣ್ ಗೆಲ್ಲುತ್ತಿದ್ದರು. ಆದರೂ ಅವಿರೋಧ ಆಯ್ಕೆಗೆ ಸಹಕಾರ ನೀಡಿರುವುದು ತಲೆತಗ್ಗಿಸುವ ವಿಚಾರವಾಗಿದೆ. ಎಂಎಲ್ಸಿ ಅನಿಲ್ ಕುಮಾರ್ ಬಲಗೈ ಬಂಟ ಮೈಲಾಂಡಹಳ್ಳಿ ಮುರಳಿ ಸಂಪಂಗಿ ಮಗನನ್ನು ಬೆಂಗಳೂರಿನಿಂದ ಕರೆದುಕೊಂಡು ಬಂದು ವಾಪಸ್ ತೆಗೆಸಿದ್ದಾರೆ ಎಂದು ಆರೋಪಿಸಿದರು.
* ತಾಯಿಗೆ ಮೋಸ
ಸಂಪಂಗಿ ಮಗನ ಪರ ಚುನಾವಣೆ ನಡೆಸಬೇಕು, ಕೊತ್ತೂರು ಮಂಜುನಾಥ್ಗೆ ಮಾಡಬಾರದು ಎಂದು ರ್ನಿಣಯ ತೆಗೆದುಕೊಂಡಿದ್ದೆವು. ಆದರೆ, ಶಾಸಕ ಸ್ಥಾನ ಅನುಭವಿಸಿದ್ದ, ತಾಯಿಗೆ ಶಾಸಕ ಸ್ಥಾನ ಕಲ್ಪಿಸಿದ್ದ, ಮಗಳಿಗೆ ಅವಕಾಶ ನೀಡಿದ್ದ ಪಕ್ಷಕ್ಕೇ ವೈ.ಸಂಪಂಗಿ ಮೋಸ ಮಾಡಿ ಯಾವುದೋ ಆಸೆಗೆ ಕಾಂಗ್ರೆಸ್ ಶಾಸಕರೊಂದಿಗೆ ಕೈಜೋಡಿಸಿ ನಾಮಪತ್ರ ವಾಪಸ್ ಪಡೆದಿದ್ದು, ಪಕ್ಷಕ್ಕೆ ಮೋಸ ಮಾಡುವುದು ಒಂದೇ, ಹೆತ್ತ ತಾಯಿಗೆ ಮೋಸ ಮಾಡುವುದೂ ಒಂದೆ. ಇವರ ಪಕ್ಷ ವಿರೋಧಿ ಚಟುವಟಿಕೆ ಬಗ್ಗೆ ನಾನೂ ಹಾಗೂ ಪಕ್ಷದ ಜಿಲ್ಲಾಧ್ಯಕ್ಷರೂ ಸಹ ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿದ್ದೇವೆ ಎಂದು ವರ್ತೂರು ತಿಳಿಸಿದರು.
* ಕೈಗೆ ಸಿಗದೆ ಓಡಾಟ
ಕೋಲಾರಮ್ಮ ಪಾದ ಸಾಕ್ಷಿಯಾಗಿ ಸಂಪಂಗಿಗೆ ಕರೆ ಮಾಡಿದ್ದೆ, ಆದರೆ ಅವರು ಸ್ವೀಕರಿಸಲಿಲ್ಲ. ಮಾಜಿ ಸಂಸದ ಎಸ್.ಮುನಿಸ್ವಾಮಿಗೆ ಕರೆ ಮಾಡಿದರೆ ಸಂಜೆ ಮಾತನಾಡುವೆ ಎಂದು ಹೇಳಿದವರು ಅವರೂ ಸಿಗಲಿಲ್ಲ. ಗೋವಿಂದಗೌಡರು ಸಹಿತ ಸಂಪಂಗಿ ಮಗನಿಗೆ ಕೆಲಸ ಮಾಡೋಣ ಎಂದು ಹೇಳಿದ್ದರು. ಯಾವ ಜಾಗದಲ್ಲಿ ಸೇರಿ ಮಾತನಾಡೋಣ ಎನ್ನುವ ಉತ್ತರಕ್ಕೆ ಸಂಜೆ, ಬೆಳಗ್ಗೆ ಎಂದು ಹೇಳಿದರೇ ಹೊರತು ಕೈಗೆ ಸಿಗಲಿಲ್ಲ ಎಂದು ಹಿರಿಯ ಮುಖಂಡ ಬೆಗ್ಲಿ ಸೂರ್ಯಪ್ರಕಾಶ್ ಹೇಳಿದರು.