ಪಾಸ್ಕಾ ಹಬ್ಬ

xr:d:DAGBDOb6C_c:9,j:3576281475788556525,t:24033105
xr:d:DAGBDOb6C_c:9,j:3576281475788556525,t:24033105
Published on
ಈ ವಾರ ಕ್ರೖೆಸ್ತರಿಗೆ ಅತೀ ಪವಿತ್ರ ವಾರ. ಇದು ಗರಿಗಳ ಭಾನುವಾರದಿಂದ ಆರಂಭವಾಗಿ ಪವಿತ್ರ ಗುರುವಾರ ಮತ್ತು ಶುಭ ಶುಕ್ರವಾರದ ತನಕ ಮುಂದುವರಿದು ನಂತರ ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬದೊಂದಿಗೆ ಕೊನೆಗೊಳ್ಳುವುದು. ಅಸತ್ಯದಿಂದ ಸತ್ಯದೆಡೆಗೆ, ಅಂಧಕಾರದಿಂದ ಬೆಳಕಿನೆಡೆಗೆ ಹಾಗೂ ಮೃತ್ಯುವಿನಿಂದ ಅಮರ ಜೀವನದೆಡೆಗೆ ನಮ್ಮನ್ನು ಕೊಂಡೊಯ್ದ ವಾರವಿದು. ತನ್ನದೇ ಶಿಷ್ಯರ ಪಾದಗಳನ್ನು ತೊಳೆದು ಸೇವೆಯ ಹಾಗೂ ಪ್ರೀತಿಯ ಉಪದೇಶ ನೀಡಿದ ವಾರ. ಯೇಸು ಮರಣವನ್ನು ಜಯಿಸಿ ಮೃತ್ಯುಂಜಯನಾದ ವಾರವಿದು. ಪಾಪದ ಮೂಲಕ ಮಾನವ- ಘನತೆಯನ್ನು ಕಳೆದುಕೊಂಡ ಸಂದರ್ಭದಲ್ಲಿ ಪುನರುತ್ಥಾನದ ಮೂಲಕ ಗೌರವದ ಹೊಸ ಜೀವನವನ್ನು ನೀಡಿದ ವಾರವಿದು. ಇದೇ ಪಾಸ್ಕಾ ಹಬ್ಬ.

ಈ ಸಂದರ್ಭದಲ್ಲಿ ಪ್ರಖ್ಯಾತ ಗಾಯಕರಾದ ಹರಿಹರನ್ ಹಾಗೂ ಲೆಸ್ಲಿ ಇವರ ಅರ್ಥಗರ್ಭಿತ ಹಾಡೊಂದು ನೆನಪಾಗುತ್ತಿದೆ: ‘ಕೃಷ್ಣ ನೀ ಬೇಗನೆ ಬಾರೋ... ಜಗತ್ತು ತುಂಬಾ ಆಪತ್ತಿನಲ್ಲಿದೆ. ನೀನು ಯೇಸುವಾಗಿ ಬಾ ಅಥವಾ ಅಲ್ಲಾನಾಗಿ ಬಾ ಅಥವಾ ರಾಮ- ಕೃಷ್ಣರಾಗಿ ಬಾ. ಹೇಗಾದರೂ ಬಾ. ಯಾಕೆಂದರೆ ಇಲ್ಲಿ ಹೃನ್ಮನ ಪರಿವರ್ತನೆಯ ಅಗತ್ಯ ತುಂಬಾ ಇದೆ’. ನಿಜ, ಯೇಸು ಮಗದೊಮ್ಮೆ ಹುಟ್ಟಿ ಬರಬೇಕಾದ ಕಾಲವಿದು.

ಪ್ರೀತಿ, ದಯೆ, ಸೇವೆ, ಕ್ಷಮೆ, ವಿಶ್ವಾಸ, ಸಹಬಾಳ್ವೆ ಇಂತಹ ಶ್ರೇಷ್ಠ ಮೌಲ್ಯಗಳು ನಶಿಸಿ ಹೋಗುತ್ತಿರುವ ಈ ಕಾಲದಲ್ಲಿ ಯೇಸು ಕ್ರಿಸ್ತ, ಬಸವಣ್ಣ, ಕನಕದಾಸ, ಬುದ್ಧ, ಮಹಾವೀರ, ಶ್ರೀ ನಾರಾಯಣ ಗುರು ಇವರಂತಹ ಕ್ರಾಂತಿಕಾರಿ ಸಮಾಜ ಸುಧಾರಕರು ಬೇಕಾಗಿರುವಂತಹ ಕಾಲವಿದು. ಏಕೆಂದರೆ ಇಂದು ಎಲ್ಲಿ ನೋಡಿದರೂ ಯುದ್ಧ, ದ್ವೇಷ, ವಿಭಜನೆ, ದ್ರೋಹ, ಅಸತ್ಯ, ಅಸಹನೆ ರಾರಾಜಿಸುತ್ತಿದೆ. ಇಂತಹ ಸಂದರ್ಭದಲ್ಲಿ ಯೇಸು ನೀಡಿದ ಸಂದೇಶವೇನೆಂದರೆ, ಎಲ್ಲ ಪಂಥಾಹ್ವಾನಗಳ ನಡುವೆ ಭರವಸೆಯಿಂದ ಮುನ್ನಡೆಯಿರಿ ಎಂಬುದಾಗಿದೆ. ಅಂಥ ಧ್ಯೆರ್ಯ ನೀಡುವ ಹಬ್ಬವಿದು. ಈ ಸಾರ್ವತ್ರಿಕ ಸಂದೇಶವನ್ನು ಸ್ವೀಕರಿಸೋಣ. ಅಸತ್ಯದಿಂದ ಸತ್ಯದೆಡೆಗೆ, ಅಂಧ ಕಾರದಿಂದ ಬೆಳಕಿನೆಡೆಗೆ ಹಾಗೂ ಮನುಷ್ಯತ್ವದ ಜೀವನದೆಡೆಗೆ ಪುನರುತ್ಥಾನರಾಗೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net