

ಕೋಲಾರ: ಜಿಲ್ಲೆಯಾದ್ಯಂತ ಪೂರ್ವ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಕಳೆದ ಎರಡ್ಮೂರು ದಿನಗಳಿಂದ ಸತತವಾಗಿ ಮಳೆಯಾಗುತ್ತಿದೆ.
ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮವಾಗಿ ಮಳೆಯಾಗುತ್ತಿದ್ದು, ಭಾನುವಾರ ಶುರುವಾದ ಮಳೆಯು ನಿರಂತರವಾಗಿ ಸುರಿಯಿತು. ಸೋಮವಾರ ಬೆಳಗ್ಗೆ ಬಿಡುವು ಕೊಟ್ಟ ಮಳೆರಾಯ ರಾತ್ರಿ 11 ಮತ್ತೆ ಶುರುವಾಗಿ, ಮಂಗಳವಾರ ಬೆಳಗ್ಗೆ 9 ಗಂಟೆವರೆಗೆ ಸುರಿಯಿತು. ಇದುವರೆಗೂ ಜಿಲ್ಲೆಯಾದ್ಯಂತ 236.3 ಎಂಎಂ ಮಳೆಯಾಗಿದೆ.
ಸತತ ಮಳೆಯ ಪರಿಣಾಮ ಅಪಾರ ಪ್ರಮಾಣದ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದ್ದು, ಪಾರ್ಕ್ಗಳು, ರಸ್ತೆಗಳು ಜಲಾವೃತಗೊಂಡಿದ್ದವು. ತಗ್ಗು ಪ್ರದೇಶದ ಮನೆ, ಅಂಗಡಿ ಮುಂಗಟ್ಟು, ರಸ್ತೆಗಳತ್ತ ನುಗ್ಗಿದ ನೀರು ಜನ ಸಾಮಾನ್ಯರನ್ನು ಪರದಾಡುವಂತೆ ಮಾಡಿತು.
ಅಂತರಗಂಗೆ ಬೆಟ್ಟದ ತಪ್ಪಲಿನಿಂದ ಕೋಲಾರಮ್ಮ ಅಮಾನಿಕೆರೆಗೆ ಹಾದು ಹೋಗುವ ರಾಜ ಕಾಲುವೆಯಲ್ಲಿ ಗಿಡ&ಗಂಟಿ, ತ್ಯಾಜ್ಯ ತುಂಬಿಕೊಂಡಿದ್ದು, ಮಳೆಯ ನೀರು ಸರಾಗವಾಗಿ ಕೆರೆಗೆ ಹಾದು ಹೋಗಲು ಅವಕಾಶವಿಲ್ಲದಂತಾಗಿದೆ. ಇದರಿಂದ ಚರಂಡಿ ನೀರು ರಸ್ತೆಯ ಮೇಲೆ ಹರಿಯುವಂತಾಯಿತು.
ಕೀಲುಕೋಟೆ ಬಡಾವಣೆಯಲ್ಲಿರುವ ಕುವೆಂಪು ಪಾರ್ಕ್, ಕಾಲೇಜು ವೃತ್ತದಲ್ಲಿನ ಸರ್ವಜ್ಞ ಪಾರ್ಕ್, ಕೋಟೆ, ಪಾಲಸಂದ್ರ ಬಡಾವಣೆಯಲ್ಲಿ ಪಾರ್ಕ್ಗಳಲ್ಲಿ ಮಳೆಯ ನೀರು ತುಂಬಿಕೊಂಡು ಜಲಾವೃತಗೊಂಡಿದ್ದವು. ಯುಜಿಡಿ ಮ್ಯಾನ್ ಹೋಲ್ಗಳಲ್ಲೂ ತ್ಯಾಜ್ಯ ತುಂಬಿಕೊಂಡಿರುವುದರಿಂದ ನೀರು ಹಾದು ಹೋಗಲಾಗದೆ ರಸ್ತೆಯ ಮೇಲೆ ನಿಂತು ಸಂಚಾರಕ್ಕೆ ಅಡಚಣೆಯಾಯಿತು.
ನಗರದ ಬಸ್ ನಿಲ್ದಾಣ, ಗೌರಿಪೇಟೆ, ಕ್ಲಾಕ್ ಟವರ್, ಕುರುಬರ ಪೇಟೆ, ಕೀಲುಕೋಟೆ ಬಡಾವಣೆಯಲ್ಲಿ ಯುಜಿಡಿ ಅವಾಂತರವೇ ಸೃಷ್ಟಿಯಾಗಿತ್ತು. ತ್ಯಾಜ್ಯ ನೀರು ರಸ್ತೆಯ ಮೇಲೆ ಹರಿದು ದುರ್ವಾಸನೆ ಬೀರಿತು. ಕೆಎಸ್ಆರ್ಟಿಸಿ ಸಬ್ ನಿಲ್ದಾಣದ ಸಮೀಪ ಪೌರಕಾರ್ಮಿಕರು ಸಕ್ಕಿಂಗ್ ಯಂತ್ರದ ಮೂಲಕ ಮ್ಯಾನ್ಹೋಲ್ ಸ್ವಚ್ಛಗೊಳಿಸಿದರು.
* ರೈಲ್ವೆ ಸೇತುವೆ ಕೆಳಗೆ ನೀರು ಶೇಖರಣೆ
ಕೋಲಾರ ನಗರದ ವ್ಯಾಪ್ತಿಯಲ್ಲಿ ಅಂತರಗಂಗೆ ರಸ್ತೆ, ಖಾದ್ರಿಪುರ ರಸ್ತೆ ಹಾಗೂ ಚಿಕ್ಕಬಳ್ಳಾಪುರ ಮುಖ್ಯರಸ್ತೆಯ ಸಂಗೋಂಡಹಳ್ಳಿ, ಅರಹಳ್ಳಿ ರೈಲ್ವೆ ಮೇಲ್ಸೆತುವೆ ಕೆಳಗೆ ಮಳೆ ನೀರು ನಿಂತು ವಾಹನ ಸಂಚಾರ ಸ್ಥಗಿತಗೊಂಡಿತು. ಮಳೆ ನಿಂತು 2&3 ತಾಸು ಕಳೆದರೂ ನೀರು ಖಾಲಿಯಾಗಲಿಲ್ಲ. ಮನೆಗಳಿಂದ ಕೆಲ ಕಾರ್ಯಗಳಿಗೆ ಹೋಗುವವರು ಪರ್ಯಾಯ ಮಾರ್ಗ ಹುಡುಕಿಕೊಳ್ಳುವಂತಾಯಿತು.
ಖಾದ್ರಿಪುರ ರೈಲ್ವೆ ಸೇತುವೆ ಕೆಳಗೆ ನೀರು ಶೇಖರಣೆಯಾಗಿದ್ದ ಪರಿಣಾಮ ನಗರಕ್ಕೆ ಸಂಚಾರ ಮಾರ್ಗ ಬಂದ್ ಆಗಿತ್ತು. ಗ್ರಾಮಸ್ಥರು ಪರ್ಯಾಯವಾಗಿ ಅಂತರಗಂಗೆ ರಸ್ತೆ ಮೂಲಕ ನಗರಕ್ಕೆ ಆಗಮಿಸಬೇಕಾಯಿತು. ಈ ಮಾರ್ಗದಲ್ಲಿ ಹಳ್ಳಗಳು ಹೆಚ್ಚಾಗಿರುವುದರಿಂದ ವಾಹನ ಸವಾರರಿಗೆ ರಸ್ತೆ ಯಾವುದು, ಗುಂಡಿಯಾಗುವುದು ಎಂಬುದು ಗೊತ್ತಾಗದೆ ಹರಸಹಾಸ ಪಡುವಂತಾಯಿತು.
* ನೆಲಕ್ಕುರುಳಿದ ಮರ
ಕೋಲಾರ ತಾಲೂಕಿನ ನುಕ್ಕನಹಳ್ಳಿಯಲ್ಲಿ ಲಕ್ಷ$್ಮಣ್ ಎಂಬುವರ ಮನೆ ಮತ್ತು ಕುರಿಶೆಡ್ ಮೇಲೆ ಮರ ಬಿದ್ದು ಮನೆ&ಶೆಡ್ ಜಖಂಗೊಂಡು ಹಾನಿಯಾಗಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ ಅನಾಹುತ ಸಂಭವಿಸಿಲ್ಲ.
* ಬೆಳೆಗಳಿಗೆ ರೋಗ ಹರಡುವ ಆತಂಕ
ಗ್ರಾಮೀಣ ಭಾಗದಲ್ಲೂ ಮಳೆಯು ನಿರಂತರವಾಗಿ ಸುರಿದಿದ್ದು, ಮಾವು, ಟೊಮ್ಯಾಟೊ, ಪಪ್ಪಾಯ, ಬೀನ್ಸ್, ಕ್ಯಾಪ್ಸಿಕಂ, ಹೂವು ಬೆಳೆಗಳ ತೋಟಗಳಲ್ಲಿ ನೀರು ನಿಂತು ತೇವಾಂಶ ಹೆಚ್ಚಾಗಿದೆ. ಇದರಿಂದಾಗಿ ಕಾಂಡ ಕೋರಕ, ನುಸಿ ರೋಗ, ಹುಳ ಬಾಧೆ ರೋಗಗಳು ಹರಡುವ ಭೀತಿ ರೈತರಲ್ಲಿ ಎದುರಾಗಿದೆ.
ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಮಾವು ಹಾನಿಯಾಗುವ ಆತಂಕ ಬೆಳೆಗಾರರಲ್ಲಿ ಎದುರಾಗಿತ್ತು. ಶ್ರೀನಿವಾಸಪುರ, ಕೋಲಾರ, ಮುಳಬಾಗಿಲು, ಬಂಗಾಪೇಟೆ ತಾಲೂಕುಗಳ ಭಾಗದಲ್ಲೂ ಮಳೆಯಾಗಿದ್ದು, ಗಾಳಿ ಇರಲಿಲ್ಲ. ಇದರಿಂದಾಗಿ ಮಾವು ಬೆಳೆಯು ಹಾನಿ ಆಗಿಲ್ಲ.
* ಕೈಗೊಳ್ಳಬೇಕಾದ ಮುಂಜಾಗ್ರತೆಯೇನು
ಈ ವರ್ಷದ ಮುಂಗಾರು ಮಳೆಯು ಮೇ 27ಕ್ಕೆ ಕೇರಳ ರಾಜ್ಯವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಎರಡು ದಿನಗಳಲ್ಲಿ ದಕ್ಷಿಣ ಒಳನಾಡು ಪ್ರದೇಶದಲ್ಲಿ ಗುಡುಗು ಮಿಂಚು, ಬಿರುಗಾಳಿ ಸಹಿತ ಹಗುರದಿಂದ ಸಾಧಾರಣವಾಗಿ ಸಾಕಷ್ಟು ಮಳೆಯಾಗುವ ಸಾಧ್ಯತೆಯಿದೆ. ಜಿಲ್ಲೆಯಲ್ಲಿ ಬೆಳೆದಿರುವ ತೋಟಗಾರಿಕಾ ಬೆಳೆಗಳಲ್ಲಿ ಪೋಷಕಾಂಶಗಳು ಮತ್ತು ರೋಗಗಳ ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೋಲಾರ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ.ಶಿವಾನಂದ ಹೊಂಗಲ ತಿಳಿಸಿದ್ದಾರೆ.
ಮುಂಗಾರು ಚುರುಕಾಗಿರುವ ಹಿನ್ನೆಲೆಯಲ್ಲಿ ರೈತರು ತಮ್ಮ ಜಮೀನಿನಲ್ಲಿ ಬಸಿಗಾಲುವೆ ವ್ಯವಸ್ಥೆ ಕಲ್ಪಿಸುವುದು ಸೂಕ್ತ. ತರಕಾರಿ ಬೆಳೆಗಳು ಮೊದಲ ಬೆಳವಣಿಗೆ ಹಂತದಲ್ಲಿದ್ದರೆ, 19:19:19 ರಸಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 2-5 ಗ್ರಾಂ. ನಂತೆ ಬೆರೆಸಿ ಸಿಂಪಡಿಸಿ ಅಥವಾ ನ್ಯಾನೋ ಯೂರಿಯಾವನ್ನು 4 ಮಿ. ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವ ಮೂಲಕ ಹರಡುವ ರೋಗವನ್ನು ಹತೋಟಿಗೆ ತರಬಹುದು ಎಂದು ಸಲಹೆ ನೀಡಿದ್ದಾರೆ.
ತರಕಾರಿ ಬೆಳೆಗಳು ಹೂವು ಬಿಡುವ ಹಂತದ ಬೆಳೆಯಾದರೆ, ಕ್ಯಾಲ್ಸಿಯಂ ನೈಟ್ರೆೃಟ್ ಅನ್ನು 5 ಗ್ರಾಂ. ಪ್ರತಿ ಲೀಟರ್ ನೀರಿಗೆ ಮತ್ತು ಬೋರಿಕ್ ಆಮ್ಲ 2 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೇರಿಸಿ ಸಿಂಪರಣೆ ಮಾಡಿ. ಇದರಿಂದ ಕಾಯಿ ಕಚ್ಚುವ ಪ್ರಮಾಣ ಹೆಚ್ಚಾಗುವುದಲ್ಲದೇ ಹಣ್ಣಿನಲ್ಲಿ ಕಂಡುಬರುವ ಬಿರುಕುಗಳನ್ನು ಕಡಿಮೆಮಾಡುತ್ತದೆ ಜೊತೆಗೆ, ಶೇಕರಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.
ಪ್ಲಾಸ್ಟಿಕ್ ಹೋದಿಕೆಯನ್ನು ಬಳಸದೇ ಇರುವ ಬೆಳೆಗಳಲ್ಲಿ ಮಣ್ಣನ್ನು ಏರಿಸಿ. ಇದರಿಂದ ಬೆಳೆಗಳಲ್ಲಿ ಹೊಸ ಬೇರುಗಳ ಬೆಳವಣಿಗೆಗೆ ಸಹಾಯವಾಗುತ್ತದೆ. ಟೊಮ್ಯಾಟೊ ಮತ್ತು ಬಳ್ಳಿ ತರಕಾರಿಗಳನ್ನು ಎತ್ತಿ ಕಟ್ಟುವಾಗ ಗಿಡಗಳ ಮಧ್ಯ ಸಾಕಷ್ಟು ಗಾಳಿ ಮತ್ತು ಬೆಳಕು ಹರಡುವಂತೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ತರಕಾರಿ ಬೆಳೆಗಳಲ್ಲಿ ನೆಲಕ್ಕೆ ಅಥವಾ ಪ್ಲಾಸ್ಟಿಕ್ ಹೋದಿಕೆಗೆ ತಾಕುವ ಹಳೆಯ ಎಲೆಗಳನ್ನು ಗಿಡಕ್ಕೆ ಹಾನಿಯಾಗದಂತೆ ತೆಗೆಯುವುದರಿಂದ ರೋಗಗಳ ಹಾವಳಿ ಅಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ಸೇವಂತಿಗೆ ಬೆಳೆಯಲ್ಲಿ ಗಿಡಗಳನ್ನು ನಾಟಿಮಾಡಿದ ನಂತರ 30, 45 ಮತ್ತು 60ನೇ ದಿನಗಳಲ್ಲಿ ಜಿಬ್ಬರಲಿಕ್ ಆಮ್ಲವನ್ನು (50 ಪಿಪಿಎಂ) ಸಿಂಪಡಿಸುವುದರಿಂದ ಹೂವಿನ ಇಳುವರಿ ಹೆಚ್ಚಿಸಬಹುದು ಎಂದು ತಿಳಿಸಿದ್ದಾರೆ.