ಪಂಚಾಯಿತಿ ವ್ಯವಸ್ಥೆಯಡಿ ಸುಗಮ, ಸರಳ ಆಡಳಿತ; ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

CM Siddaramaiah distributed to Career guidance chart to Grama Panchayat's
Published on

ಬೆಂಗಳೂರು: ಪಂಚಾಯಿತಿ ಆಡಳಿತ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಅಳವಡಿಸಿ ಮೇಲ್ದರ್ಜೆಗೇರಿಸುವ ಜತೆಗೆ ಸುಗಮ, ಸರಳ ಆಡಳಿತವನ್ನು ಅನುಷ್ಠಾನಕ್ಕೆ ತರಲು ಕ್ರಮವಾಹಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.

ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಅಭಿವೃದ್ಧಿ ಇಲಾಖೆ ಸೋಮವಾರ ಆಯೋಜಿಸಿದ್ದ ಗಾಂಧಿ ಗ್ರಾಮ ಪುರಸ್ಕಾರ, ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2023 ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಪಂಚಾಯಿತಿ ಆಡಳಿತದಲ್ಲಿ ಹೊಣೆಗಾರಿಕೆ, ಉತ್ತರದಾಯಿತ್ವ ತರಲು ಪಂಚತಂತ್ರ-2 ತಂತ್ರಾಂಶ ಬಳಸಿಕೊಳ್ಳುತ್ತಿದ್ದು, ಬಲ ತುಂಬಲಾಗುತ್ತಿದೆ. ಸಭೆಗಳು, ಅಧಿಕಾರಿಗಳು, ಸಿಬ್ಬಂದಿ ಹಾಜರಿ, ತೆರಿಗೆ ಸಂಗ್ರಹ ಪ್ರತಿಯೊಂದನ್ನೂ ಈ ತಂತ್ರಾಂಶದ ಮೂಲಕ ನಿಗಾವಹಿಸಲಾಗುತ್ತದೆ.

ಪಂಚಮಿತ್ರ ಸಹಾಯವಾಣಿ ಇನ್ನೆರಡು ತಿಂಗಳಲ್ಲಿ ಪ್ರಾರಂಭಿಸಲಿದ್ದೇವೆ. ಗ್ರಾಮಸ್ಥರ ಕುಂದುಕೊರತೆ ಆಲಿಸಿ ಸ್ಪಂದಿಸಲು ಸಹಾಯವಾಣಿ ಸೌಲಭ್ಯ ಕಲ್ಪಿಸಲಾಗುತ್ತದೆ. ಪಿಡಿಒಗಳ ವರ್ಗಾವಣೆಯಲ್ಲಿ ಪಾರದರ್ಶಕತೆ ಕಾಪಾಡಲೆಂದು ಕೌನ್ಸೆಲಿಂಗ್ ಪದ್ಧತಿ ಜಾರಿಗೆ ಸಿಎಂ ಒಪ್ಪಿಗೆ ಕೇಳಿದ್ದು, ಘನತ್ಯಾಜ್ಯ ನಿರ್ವಹಣೆಗೆ ನೀಲಿನಕ್ಷೆಗೆ ಸಿದ್ಧಪಡಿಸಲಾಗುತ್ತಿದೆ.

ಅಧಿಕಾರ ವಿಕೇಂದ್ರೀಕರಣದ ಆಶಯ, ಎಲ್ಲರ ಪಾಲ್ಗೊಳ್ಳುವಿಕೆ ಉದ್ದೇಶದಿಂದ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಸಂವಿಧಾನದ 73 ಮತ್ತು 74ನೇ ತಿದ್ದುಪಡಿ ಮಾಡಿದರು. ಈ ಕಾಯ್ದೆ ಜಾರಿ ನಂತರ ಸ್ಥಳೀಯ ಸರ್ಕಾರಗಳಿಗೆ ಹೆಚ್ಚಿನ ಬಲ ತುಂಬಿತು.

ಮೂರು ಹಂತದ ಪಂಚಾಯಿತಿ ವ್ಯವಸ್ಥೆ 30 ವರ್ಷಗಳಾಗುತ್ತಿವೆ. ಮಹಿಳೆಯರಿಗೆ ಶೇ.50, ಇತರೆ ಹಿಂದುಳಿದ ವರ್ಗಗಳಿಗೆ ಮೀಸಲು ಅವಕಾಶ ಲಭಿಸಿತು. ಕಾಯ್ದೆ ಜಾರಿಯಾಗಿ 30 ವರ್ಷಗಳಾದ ಹಿನ್ನೆಲೆಯಲ್ಲಿ ತ್ರಿದಶಮಾನೋತ್ಸವ ಆಚರಣೆ ಮುಂದಿನ ತಿಂಗಳು ಆರಂಭಿಸಲಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net