

Myanmar: ಮ್ಯಾನ್ಮಾರ್, ಬ್ಯಾಂಕಾಕ್ ದೇಶಗಳಲ್ಲಿ ಸಂಭವಿಸಿರುವ ಭಾರೀ ಭೂಕಂಪನ ಜನರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಬೃಹತ್ ಕಟ್ಟಡಗಳು, ರಸ್ತೆ, ಸೇತುವೆಗಳ ಕುಸಿತ, ಸಾವು-ನೋವು ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ಮ್ಯಾನ್ಮಾರ್ನಲ್ಲಿ ಸಂಭವಿಸಿದ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ ಇದೀಗ 3 ಸಾವಿರ ಗಡಿದಾಟಿದ್ದು ಕುಸಿದ ಕಟ್ಟಡಗಳಡಿ ಮೃತಪಟ್ಟವರನ್ನು ಹೊರತರುವುದು ರಕ್ಷಣಾ ಪಡೆಗೆ ಹರಸಾಹಸವಾಗಿದೆ. ಇದನ್ನೂ ಓದಿ: ಯತ್ನಾಳ ಉಚ್ಛಾಟನೆ ಹಿಂಪಡೆಯಲು ಏ.10ರ ಗಡವು; ಬಸವರಾಜ ಹಾಲಪ್ಪನವರ
ಕಳೆದ ವಾರವಷ್ಟೇ ಭೀಕರ ಭೂಕಂಪಕ್ಕೆ ಒಳಗಾಗಿ, ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದ ಮ್ಯಾನ್ಮಾರ್ನಲ್ಲಿ ಮತ್ತೊಂದು ಭೂಕಂಪನ ಸಂಭವಿಸಿದೆ. ಬುಧವಾರ (ಏ.02) ಸಂಭವಿಸಿದ ಈ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.3 ಆಗಿರುವುದು ವರದಿಯಾಗಿದೆ. ಈ ಕಂಪನದ ಕೇಂದ್ರ ಬಿಂದು ಹತ್ತು ಕಿಲೋಮೀಟರ್ನಷ್ಟು ಆಳದಲ್ಲಿದ್ದು, ಸಾವು-ನೋವು ಅಥವಾ ಹಾನಿಗಳ ಕುರಿತು ಇನ್ನೂ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ನ್ಯಾಷನಲ್ ಸೆಂಟರ್ ಆಸಿಸ್ಸ್ಮಾಲಜಿ ತಿಳಿಸಿದೆ.
ಮ್ಯಾನ್ಮಾರ್ನಲ್ಲಿ ಕಳೆದ ವಾರ ಮಾ.28ರ ಶುಕ್ರವಾರ ಭಾರಿ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 7.7 ತೀವ್ರತೆಯ ಈ ಭೂಕಂಪದಿಂದಾಗಿ ನೆರೆಯ ಥಾಯ್ಲೆಂಡ್ನಲ್ಲೂ ಗಗನಚುಂಬಿ ಕಟ್ಟಡಗಳು ಅಲುಗಾಡಿದ್ದು, ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡ ಕುಸಿದು ಸಾವು-ನೋವು ಸಂಭವಿಸಿತ್ತು.
ಇತ್ತೀಚೆಗಿನ ಮಾಹಿತಿ ಪ್ರಕಾರ, ಈ ಭೀಕರ ಭೂಕಂಪದಿಂದ 3000ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, 4,639 ಜನರು ಗಾಯಗೊಂಡಿದ್ದಾರೆ. ಅಲ್ಲದೆ 30 ಲಕ್ಷಕ್ಕೂ ಅಧಿಕ ಜನರು ಸ್ಥಳಾಂತರಗೊಂಡಿದ್ದಾರೆ ಎನ್ನಲಾಗಿದೆ.