

ಮೈಸೂರು: ಮೈಸೂರು ನಗರದ ಸುತ್ತಮುತ್ತಲ ಪ್ರದೇಶಗಳಾದ ಕೆ.ಆರ್. ನಗರ, ಸಾಲಿಗ್ರಾಮ, ಹೊಸೂರು ಹೋಬಳಿ ವ್ಯಾಪ್ತಿಯ ಗ್ರಾಮಗಳು, ಹುಣಸೂರು ತಾಲೂಕು ಹಿರಿಕ್ಯಾತನಹಳ್ಳಿ, ಪಿರಿಯಾಪಟ್ಟಣ ಬೆಟ್ಟದಪುರ ಸೇರಿ ಹಲವು ಭಾಗಗಳಲ್ಲಿ ಶುಕ್ರವಾರ ಸಂಜೆ ಲಘು ಭೂಕಂಪನವಾಗಿದೆ. 5 ಸೆಕೆಂಡ್ ಕಾಲ ಭೂಮಿ ನಡುಗಿತು ಎನ್ನಲಾಗಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲೇ ಇದ್ದ ಜನರು ಇದರಿಂದ ಆತಂಕಗೊಂಡು ಹೊರಗೋಡಿ ಬಂದರು ಎನ್ನಲಾಗಿದೆ.
ಸೋಮವಾರಪೇಟೆ ಮತ್ತು ಕುಶಾಲನಗರ ಬಳಿಯಿರುವ ಹಾರಂಗಿ ಜಲಾಶಯದಲ್ಲಿ ಇರುವ ಸಿಸ್ಮೋಗ್ರಾಫ್ನಲ್ಲಿ 2.6 ತೀವ್ರತೆ ದಾಖಲಾಗಿರುವುದಾಗಿ ಹಾರಂಗಿ ವಿಭಾಗದ ಇಂಜಿನಿಯರ್ ನಾಗರಾಜು ಹೇಳಿದ್ದಾರೆ.
ಮುಂಜನಹಳ್ಳಿ ಗ್ರಾಮದಲ್ಲಿ ಪಾತ್ರೆಗಳು ಮತ್ತು ಮನೆಯ ಹೆಂಚುಗಳು ನೆಲಕ್ಕೆ ಬಿದ್ದಿವೆ. ಹೀಗಾಗಿ ಬೆಚ್ಚಬಿದ್ದಿರುವ ಜನರು ಮನೆಯೊಳಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.