

ನವದೆಹಲಿ: ಒಂದೆಡೆ ಭಾರತ ಕರೊನಾ ಪಿಡುಗಿನ ವಿರುದ್ಧ ಹೋರಾಡುತ್ತಿರುವಾಗಲೇ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಭಾನುವಾರ ಸಂಜೆ 5.45ರಲ್ಲಿ ಲಘು ಭೂಕಂಪ ಸಂಭವಿಸಿದೆ.
ರಿಕ್ಟರ್ ಮಾಪದಲ್ಲಿ 3.5ರ ತೀವ್ರತೆ ದಾಖಲಾಗಿದೆ. ಭೂಕಂಪದಿಂದ ಹಾನಿಯಾಗಿರುವ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ.
ಭೂಮಿ ನಡಗುತ್ತಿರುವಂತೆ ಲಾಕ್ಡೌನ್ನಿಂದಾಗಿ ಮನೆಯಲ್ಲೇ ಇದ್ದ ಜನರು ಭಯಭೀತರಾಗಿ ಹೊರಗೋಡಿ ಬಂದರು ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಭೂಮಿ ಕೆಲವು ಸೆಕೆಂಡ್ಗಳವರೆಗೆ ನಡುಗಿತು ಎನ್ನಲಾಗಿದೆ. ಜೋರಾದ ಸದ್ದು ಕೇಳಿತು. ನಾನು ಕುಳಿತಿದ್ದ ಕುರ್ಚಿ ಅಲ್ಲಾಡಲಾರಂಭಿಸಿತು. ಆ ಅನುಭವ ತುಂಬಾ ಭಯಾನಕವಾಗಿತ್ತು ಎಂದು ಪೂರ್ವ ದೆಹಲಿಯ ನಿವಾಸಿ ಎಸ್. ದಾಮ್ಲೆ ಹೇಳಿದ್ದಾರೆ.
ಕಂಪನದ ಅನುಭವ ಹಂಚಿಕೊಂಡಿರುವ ಲಾಜ್ಪತ್ ನಗರದ 1ರ ನಿವಾಸಿ ಆರೇಫಾ ಸುಲ್ತಾನ, ನಾವಿ ಟಿವಿ ನೋಡುತ್ತಿದ್ದೆವು. ಭೂಮಿ ಅಲುಗಾಡಿದ ಅನುಭವವಾಯಿತು. ತಕ್ಷಣವೇ ಮನೆಯಿಂದ ಹೊರಗೋಡಿ ಬಂದೆವು. ಅದಾಗಲೇ ನೆರೆಹೊರೆಯ ಕೆಲವರು ಮನೆಯಿಂದ ಹೊರಗೆ ಬಂದು ನಿಂತಿದ್ದರು. ಅವರೆಲ್ಲರನ್ನೂ ದೂರದಿಂದಲೇ ಮಾತನಾಡಿಸಿ ಮನೆಯೊಳಗೆ ಬಂದೆವು ಎಂದು ತಿಳಿಸಿದ್ದಾರೆ.
ಭೂಕಂಪನವಾದ ಬಗ್ಗೆ ಟ್ವೀಟ್ ಮಾಡಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಎಲ್ಲರೂ ಸುರಕ್ಷಿತವಾಗಿದ್ದೀರಿ ಎಂದು ಭಾವಿಸಿದ್ದೇನೆ. ನಿಮ್ಮೆಲ್ಲರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.