

ಸೊರಬ: ಕುಷ್ಠರೋಗ ಶಾಪವಲ್ಲ. ಇದೊಂದು ಬ್ಯಾಕ್ಟೀರಿಯಾದಿಂದ ಬರುವ ರೋಗ. ಪ್ರತಿಯೊಬ್ಬರೂ ಆರೋಗ್ಯ ಇಲಾಖೆ ಜತೆ ಸಹಕರಿಸಿದಾಗ ಮುಕ್ತಗೊಳಿಸಲು ಸಾಧ್ಯ ಎಂದು ಸರ್ಕಾರಿ ಆಸ್ಪತ್ರೆಯ ಚರ್ಮರೋಗ ತಜ್ಞೆ ಡಾ. ಎಲ್.ಎನ್.ಅಮಿತಾ ಹೇಳಿದರು.
ಸೊರಬ ತಾಲೂಕು ಆಸ್ಪತ್ರೆಯಿಂದ ಆಯೋಜಿಸಿದ್ದ ಕುಷ್ಠರೋಗ ನಿರ್ಮೂಲನೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಳಿ ಮಚ್ಚೆಯಂತೆ ಚರ್ಮ ಮತ್ತು ನರಗಳ ಮೇಲೆ ಸ್ಪರ್ಶ ಇಲ್ಲದಾಗುವುದು ಕುಷ್ಠರೋಗದ ಲಕ್ಷಣ. ಇದು ಕಾಣಿಸಿಕೂಂಡ ಮೊದಲ ಹಂತದಲ್ಲೇ ಚಿಕಿತ್ಸೆ ನೀಡಿದರೆ ನಿರ್ಮೂಲನೆ ಮಾಡಬಹುದು ಎಂದರು.
ರೋಗ ಬಾಧಿತರು ಮುಜುಗರಕ್ಕೆ ಒಳಗಾಗದೆ ಸಮೀಪದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಬೇಕು. ಸಮಾಜದಲ್ಲಿ ಪ್ರತಿಯೊಬ್ಬರೂ ಕುಷ್ಠರೋಗಿಗಳನ್ನು ಪ್ರೀತಿ, ವಿಶ್ವಾಸದಿಂದ ನೋಡಿಕೊಳ್ಳಬೇಕು. ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಆಗಬೇಕು. ಕುಷ್ಠರೋಗಮುಕ್ತ ಭಾರತವನ್ನು ಒಟ್ಟಾಗಿ ನಿರ್ಮಿಸುತ್ತೇವೆ ಎಂದು ಪ್ರತಿಜ್ಞೆಯೊಂದಿಗೆ ಗಾಂಧೀಜಿ ಕನಸನ್ನು ನನಸು ಮಾಡಬೇಕು ಎಂದು ಹೇಳಿದರು.
ಶುಶ್ರೂಷಾಧಿಕಾರಿ ಶಿಲ್ಪಾ ಎಂ. ಬೋರಕರ್ ಪ್ರತಿಜ್ಞೆ ವಿಧಿ ಬೋಧಿಸಿದರು. ಶಸ ಚಿಕಿತ್ಸಕ ಡಾ. ಎಸ್.ಎಸ್.ಅಭಿಷೇಕ್, ಆಯುಷ್ ವೈದ್ಯ ಡಾ. ಸತೀಶ್ ನಾಯ್ಕ, ಶುಶ್ರೂಷ ವೀಕ್ಷಕಿ ಎಚ್.ಆರ್.ಸರೋಜಾ ದೇವಿ, ಹಿರಿಯ ಆರೋಗ್ಯ ನಿರೀಕ್ಷಕ ಶಬ್ಬಿರ್ ಖಾನ್, ಶುಶ್ರೂಷಕರಾದ ಟಿ.ನೂತನಾ, ಆಶಾ, ಹಿಮಾಮಣಿ, ಡಿ.ಎ.ಮಂಜುಳಾ, ಸುಲೋಚನಾ, ಎ.ಆಶಾ, ಅಮೃತಾ ಇತರರಿದ್ದರು.