ಇ-ಸ್ಟಾಂಪಿಂಗ್ ಕಡ್ಡಾಯ, ಡಿಜಿಟಲ್ ಸಹಿಗೆ ಕಾನೂನು ಬಲ

Krishnabairegowda
Published on

ಬೆಂಗಳೂರು: ಸ್ಟಾಂಪ್ ಪೇಪರ್‌ನಲ್ಲಿ ನಡೆಯುತ್ತಿದ್ದ ನಕಲಿ ದಂಧೆ ಮತ್ತು ರಾಜಸ್ವ ಸೋರಿಕೆ ತಪ್ಪಿಸಲು ಕಂದಾಯ ಇಲಾಖೆ ಡಿಜಿಟಲ್ ಇ-ಸ್ಟಾಂಪಿಂಗ್ ಮತ್ತು ಸ್ಟಾಂಪು ಸುಂಕವನ್ನು ಡಿಜಿಟಲ್ ಪಾವತಿ ಮೂಲಕ ಸ್ವೀಕರಿಸುವುದನ್ನು ಕಡ್ಡಾಯ ಮಾಡಿದೆ.

ಬುಧವಾರ ವಿಧಾನಸಭೆಯಲ್ಲಿ 2025ನೇ ಸಾಲಿನ ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ ಪರ್ಯಾಲೋಚನೆ ನಡೆದು ಅಂಗೀಕಾರವಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಕಂದಾಯ ಇಲಾಖೆಯಲ್ಲಿ ಸಂಪೂರ್ಣ ಡಿಜಿಟಲೀಕರಣಕ್ಕೆ ನಿರ್ಧರಿಸಲಾಗಿದೆ. ಅದರ ಭಾಗವಾಗಿ ಡಿಜಿಟಲ್ ಇ-ಸ್ಟಾಂಪಿಂಗ್‌ಗೆ ಕಾನೂನಿನಲ್ಲಿ ಅವಕಾಶ ಮಾಡಿಕೊಟ್ಟು ಕಡ್ಡಾಯಗೊಳಿಸಲಾಗಿದೆ. ಇದರ ಶುಲ್ಕ ಸಹ ಆನ್‌ಲೈನ್ ಪೇಮೆಂಟ್ ಮಾಡಬೇಕಾಗಿದೆ. ಜತೆಗೆ ವಿದ್ಯುನ್ಮಾನ (ಡಿಜಿಟಲ್) ಸಹಿ ಕಾನೂನುಬದ್ಧಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮತ್ತು ಶಾಸಕ ಸುನೀಲ್ ಕುಮಾರ್, ಡಿಜಿಟಲ್ ಸಹಿ ಕಡ್ಡಾಯ ಮಾಡಿದರೆ ಸೈಬರ್ ದಾಳಿಗೆ ತುತ್ತಾದರೆ ಏನು ಮಾಡುವುದು ಮತ್ತು ಸರ್ವರ್ ಸಮಸ್ಯೆ ದೊಡ್ಡ ತಲೆನೋವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಂದಾಯ ಇಲಾಖೆ ಸ್‌ಟಾವೇರ್‌ಗಳನ್ನು ಅಪ್‌ಗ್ರೇಡ್ ಮಾಡಲು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ತಜ್ಞರ ತಂಡದಿಂದ ಸಲಹೆ ಸೂಚನೆ ಕೇಳಲಾಗಿದೆ. ಅವರು ಕೊಡುವ ಸಲಹೆ ಮೇರೆಗೆ ಅನುಷ್ಠಾನ ಮಾಡಿ ಸರ್ವರ್ ಸಮಸ್ಯೆ ಬಗೆಹರಿಸಲಾಗುತ್ತದೆ.

ಆಸ್ತಿ ನೋಂದಣಿ ವೇಳೆ ಆಧಾರ್ ದೃಢೀಕರಣದಂತೆ ಪಾನ್ ಕಾರ್ಡ್ ಬಳಕೆದಾರರಿಂದ ಸಹ ದೃಢೀಕರಣ ಪಡೆಯಲು ಕೇಂದ್ರದಿಂದ ಡೇಟಾ ಕೋರಿ ಪತ್ರ ಬರೆದಿದ್ದು, ಒಪ್ಪಿಗೆ ಸಿಕ್ಕಿದೆ. ಪಾನ್ ಕಾರ್ಡ್ ಕೊಟ್ಟವರ ಕಡೆಯಿಂದಲೂ ದೃಢೀಕರಣ ಮಾಡಲಾಗುತ್ತದೆ. ಇದರಿಂದ ಅಕ್ರಮ ಎಸಗುವರಿಗೆ ಕಡಿವಾಣ ಬೀಳಲಿದೆ ಎಂದು ಕೃಷ್ಣಬೈರೇಗೌಡ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net