ಶೈಕ್ಷಣಿಕ ದಾಖಲಾತಿಗಳ ಪರಿಶೀಲನೆಗೆ ಬರಲಿದೆ ಇ-ಸಹಮತಿ; ರಾಜ್ಯ ಸರ್ಕಾರದಿಂದ ವೇದಿಕೆ ಅಭಿವೃದ್ಧಿ

E Sahamathi
Published on

ಬೆಂಗಳೂರು: ಉದ್ಯೋಗ ನೇಮಕಾತಿಗಾಗಿ ಶೈಕ್ಷಣಿಕ ದಾಖಲಾತಿಗಳ ಪರಿಶೀಲನೆಗೆ ಉದ್ಯೋಗಾಕಾಂಕ್ಷಿಗಳು ಹಾಗೂ ಉದ್ಯೋಗದಾತ ಸಂಸ್ಥೆಗಳು ಅಲೆದಾಡುವ ಪರಿಸ್ಥಿತಿ ಶ್ರೀಘ್ರವೇ ಅಂತ್ಯವಾಗಲಿದೆ. ದೇಶದಲ್ಲೆ ಮೊದಲ ಬಾರಿಗೆ ರಾಜ್ಯ ಸರ್ಕಾರ ಅಭಿವೃದ್ಧಿಪಡಿಸಿರುವ ‘ಇ-ಸಹಮತಿ’ ಒಪ್ಪಿಗೆ ನಿರ್ವಹಣಾ ವೇದಿಕೆ ಮೂಲಕ ರಾಜ್ಯದ ಎಲ್ಲ ಶೈಕ್ಷಣಿಕ ದಾಖಲೆಗಳ ಪರಿಶೀಲನೆ ಆನ್​ಲೈನ್ ಮೂಲಕ ಕ್ಷಣಮಾತ್ರದಲ್ಲಿ ನಡೆಯಲಿದೆ. ಪರಿಶೀಲನೆಯಲ್ಲಿ ವಿಳಂಬ, ಭ್ರಷ್ಟಾಚಾರಕ್ಕೆ ಈ ವ್ಯವಸ್ಥೆಯಿಂದ ಸಂಪೂರ್ಣ ಕಡಿವಾಣ ಬೀಳಲಿದೆ. ಡಿಜಿ ಲಾಕರ್ ವ್ಯವಸ್ಥೆಗೂ ಅತ್ಯಾಧುನಿಕವಾದ ವೇದಿಕೆಗೆ ಸದ್ಯದಲ್ಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಎಂದು ಇ-ಆಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈಗಿರುವ ಸಮಸ್ಯೆ: ಸದ್ಯ ಯಾವುದೇ ವಿದ್ಯಾರ್ಥಿ ಅಥವಾ ಪದವಿ ಪೂರ್ಣಗೊಳಿಸಿರುವ ಉದ್ಯೋಗಾಕಾಂಕ್ಷಿ ಉದ್ಯೋಗದಾತ ಸಂಸ್ಥೆಯ ಸಂದರ್ಶನ ಎದುರಿಸಿ ಆಯ್ಕೆಯಾಗುತ್ತಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡುವ ಮುನ್ನ ಸಂಸ್ಥೆಗಳು ದಾಖಲೆಗಳ ಅಸಲಿಯತ್ತು ಪರೀಕ್ಷೆಗೆ ಮುಂದಾಗುತ್ತವೆ. ಈ ಸಮಯ ದಲ್ಲಿ ಎಸ್​ಎಸ್​ಎಲ್​ಸಿ ಬೋರ್ಡ್, ಪಿಯು ಮಂಡಳಿ, ವಿವಿಧ ವಿವಿಗಳನ್ನು ಸಂರ್ಪಸಿ ದೃಢೀಕರಣಕ್ಕೆ ಕೇಳುತ್ತವೆ. ಈ ಪ್ರಕ್ರಿಯೆ 15-20 ದಿನಗಳವರೆಗೆ ನಡೆಯುತ್ತದೆ, ಅನೇಕ ಬಾರಿ ಭ್ರಷ್ಟಾಚಾರಕ್ಕೂ ಎಡೆ ಮಾಡಿಕೊಡುತ್ತದೆ. ಇ-ಸಹಮತಿ ಇದಕ್ಕೆ ಪರಿಹಾರ ನೀಡಲಿದೆ.

ಕೇಂದ್ರ ಸಚಿವರ ಮೆಚ್ಚುಗೆ: ಇ-ಸಹಮತಿ ಯೋಜನೆ ಕುರಿತು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತೆಲಂಗಾಣ ರಾಜ್ಯ ಆಸಕ್ತಿ ತೋರಿದ್ದು, ರಾಜ್ಯ ಸರ್ಕಾರ ರೂಪಿಸಿರುವ ತಂತ್ರಾಂಶವನ್ನು ನೀಡುವಂತೆ ಪತ್ರ ಬರೆದಿದೆ. ಪ್ರತಿ ರಾಜ್ಯಕ್ಕೂ ಪ್ರತ್ಯೇಕ ವೇದಿಕೆ ಬದಲಿಗೆ ಎಲ್ಲ ರಾಜ್ಯಗಳಿಗೂ ಕರ್ನಾಟಕವೇ ಸೇವೆ ಒದಗಿಸುವುದು ಉತ್ತಮ ವಿಚಾರ ಎಂದು ಸಚಿವರು ಸಲಹೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ನಿರ್ಧಾರವಾಗಲಿದೆ ಎಂದು ರಾಜೀವ್ ಚಾವ್ಲಾ ಹೇಳಿದರು.

ನಾಲ್ಕು ಪಾಲುದಾರರು: ಇ-ಸಹಮತಿ ವೇದಿಕೆಯಲ್ಲಿ ನಾಲ್ಕು ಪಾಲುದಾರರಿರುತ್ತಾರೆ. 1. ದತ್ತಾಂಶ ಮಾಲೀಕರು (ಡೇಟಾ ಪ್ರಿನ್ಸಲಿಪಾಲ್ಸ್) ವಿದ್ಯಾರ್ಥಿಗಳು. 2. ದತ್ತಾಂಶ ಸಂಗ್ರಾಹಕರು (ಡೇಟಾ ಫಿಡಿಶುಯರಿ) ಎಸ್​ಎಸ್​ಎಲ್​ಸಿ ಬೋರ್ಡ್, ಪಿಯು ಮಂಡಳಿ, ವಿವಿಗಳು ಮುಂತಾದ ಸಂಸ್ಥೆಗಳು. 3. ದತ್ತಾಂಶ ಕೋರಿಕೆದಾರರು (ಡೇಟಾ ಸೀಕರ್) ವಿವಿಧ ಕಂಪನಿಗಳು ಹಾಗೂ ನೇಮಕಾತಿ ಏಜೆನ್ಸಿಗಳು. 4.ನಿರ್ವಹಣಾ ವೇದಿಕೆ (ಕನ್ಸೆಂಟ್ ಆರ್ಟಿಫ್ಯಾಕ್ಟ್) ಈ ಮೂರು ಪಾಲುದಾರರನ್ನು ಜೋಡಿಸುವ ಇ-ಸಹಮತಿ ವೇದಿಕೆ.

ಇ-ಸಹಮತಿ ವೇದಿಕೆಯಲ್ಲಿ ಸೇರ್ಪಡೆಯಾಗಲು ರಾಜ್ಯದ 65 ಸರ್ಕಾರಿ, ಖಾಸಗಿ ಹಾಗೂ ಡೀಮ್್ಡ ವಿವಗಳಲ್ಲಿ 63 ವಿವಿಗಳು ಅನುಮತಿ ನೀಡಿವೆ. ದಾಖಲೆಗಳ ಮಾಲೀಕತ್ವ ಸಂಪೂರ್ಣವಾಗಿ ಬಳಕೆದಾರರಲ್ಲೇ ಉಳಿಯಲಿದ್ದು, ಇದೊಂದು ಕ್ರಾಂತಿಕಾರಿ ಬದಲಾವಣೆ ಆಗುತ್ತದೆ. ಎಲ್ಲ ವಿದ್ಯಾರ್ಥಿಗಳೂ ನೋಂದಣಿಯಾಗಲು ಮನವಿ ಮಾಡುತ್ತೇವೆ.

| ರಾಜೀವ್ ಚಾವ್ಲಾ ಇ-ಆಡಳಿತ ಎಸಿಎಸ್

ವಿದ್ಯಾರ್ಥಿಗಳಿಗೆ ಶುಲ್ಕವಿಲ್ಲ: ವೇದಿಕೆಯನ್ನು ಬಳಸಲು ವಿದ್ಯಾರ್ಥಿಗಳು ಹಾಗೂ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ದತ್ತಾಂಶಗಳನ್ನು ಸಂಗ್ರಹಿಸಿ ಒದಗಿಸುವ ಸಂಸ್ಥೆಗಳಿಗೂ ಉಚಿತವಾಗಿರಲಿದೆ. ಆದರೆ ಉದ್ಯೋಗದಾತ ಸಂಸ್ಥೆಗಳು ವೇದಿಕೆಯನ್ನು ಬಳಕೆ ಮಾಡಲು ಒಂದು ಬಾರಿ ಮಾತ್ರ ಸುಮಾರು 50 ಸಾವಿರ ರೂ. ಶುಲ್ಕ ವಿಧಿಸಲು ಯೋಚನೆ ನಡೆಯುತ್ತಿದೆ ಎಂದು ರಾಜೀವ್ ಚಾವ್ಲಾ ತಿಳಿಸಿದರು. ಡಿಜಿ ಲಾಕರ್ ಸಹ ಉತ್ತಮ ಯೋಜನೆಯಾಗಿದೆ. ಆದರೆ ಉದ್ಯೋಗದಾತರಿಗೆ ಅದನ್ನು ಹಂಚಿಕೊಳ್ಳಲು ಅವಕಾಶ ಇರುವುದಿಲ್ಲ. ಆ ಕೊರತೆಯನ್ನು ಇ-ಸಹಮತಿ ನೀಗಿಸಲಿದೆ ಎಂದರು.

ಹೇಗೆ ಕೆಲಸ ಮಾಡುತ್ತದೆ?

  • ವಿದ್ಯಾರ್ಥಿಗಳು ಹಾಗೂ ಪದವೀಧರರು ತಮ್ಮ ಆಧಾರ್ ವಿವರ ನಮೂದಿಸಿ ಇ-ಸಹಮತಿ ವೇದಿಕೆಯಲ್ಲಿ ನೋಂದಣಿ
  • ಅಭ್ಯರ್ಥಿಯೊಬ್ಬರು ಖಾಸಗಿ ಕಂಪನಿ ಅಥವಾ ಸರ್ಕಾರಿ ಸಂಸ್ಥೆಗೆ ನೇಮಕವಾಗಲು ದಾಖಲೆ ಸಲ್ಲಿಸಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ
  • ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳು ದಾಖಲಾತಿಗಳ ಅಸಲಿಯತ್ತು ಪರಿಶೀಲನೆಗೆ ಅನುಮತಿ ನೀಡುವಂತೆ ಉದ್ಯೋಗದಾತ ಸಂಸ್ಥೆ ಸೂಚಿಸುತ್ತದೆ
  • ಅಭ್ಯರ್ಥಿಯು ಇ-ಸಹಮತಿ ವೇದಿಕೆಯಲ್ಲಿ ಲಾಗಿನ್ ಆಗಿ, ನಿರ್ದಿಷ್ಟ ಸಂಸ್ಥೆಯ ಹೆಸರನ್ನು ಆಯ್ಕೆ ಮಾಡಿ, ಅವಶ್ಯಕವಿರುವ ದಾಖಲೆಗಳನ್ನು ಮಾತ್ರ ಹಂಚಿಕೊಳ್ಳಲು ಅನುಮತಿ ನೀಡುತ್ತಾರೆ.
  • ದತ್ತಾಂಶ ಸಂಗ್ರಾಹಕ ಸಂಸ್ಥೆಗಳು ನಿರ್ದಿಷ್ಟ ದಾಖಲೆಗಳನ್ನು ಬಳಸಲು ದತ್ತಾಂಶ ಕೋರಿಕೆದಾರರ ಸಂಸ್ಥೆಗೆ ಅನುಮತಿ ನೀಡುತ್ತವೆ
  • ಮಾನವ ಹಸ್ತಕ್ಷೇಪ ಇಲ್ಲದೆಯೇ ಕ್ಷಣಮಾತ್ರದಲ್ಲಿ ದಾಖಲೆ ಅಸಲಿಯತ್ತು ಪತ್ತೆಯಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net