ರೈತ ಸ್ನೇಹಿಯಾಗದ ಇ-ಗೋಪಾಲ

gopala
Published on

ಭರತ್ ಶೆಟ್ಟಿಗಾರ್, ಮಂಗಳೂರು

ರೈತರಿಗೆ ತಮ್ಮ ಜಾನುವಾರುಗಳ ಸಾಕಾಣಿಕೆ ಕುರಿತು ಅಂಗೈಯಲ್ಲೇ ಸಮಗ್ರ ಮಾಹಿತಿ ಒದಗಿಸಲು ಕೇಂದ್ರ ಸರ್ಕಾರ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಿಡುಗಡೆಗೊಳಿಸಿದ್ದ ‘ಇ-ಗೋಪಾಲ’ ಆ್ಯಪ್ ಇನ್ನೂ ರೈತರಿಗೆ ಹತ್ತಿರವಾಗಿಲ್ಲ.

ಆ್ಯಪ್ ರೈತ ಸ್ನೇಹಿ ಆಗಿರದ ಹಿನ್ನೆಲೆಯಲ್ಲಿ ಬಹುತೇಕರು ಡೌನ್‌ಲೋಡ್ ಮಾಡಿಕೊಂಡಿಲ್ಲ. ಜಿಲ್ಲೆಯಲ್ಲಿ ಎಷ್ಟು ಮಂದಿ ಆ್ಯಪ್ ಹೊಂದಿದ್ದಾರೆ ಎನ್ನುವ ಮಾಹಿತಿಯಿಲ್ಲ. ಬೆರಳೆಣಿಕೆಯಷ್ಟು ಮಂದಿ ಡೌನ್‌ಲೋಡ್ ಮಾಡಿದ್ದರೂ, ಬಳಕೆ ಮಾಡುತ್ತಿರುವವರ ಸಂಖ್ಯೆ ಎಷ್ಟು ಎಂದು ತಿಳಿದಿಲ್ಲ. ಬಹುತೇಕ ರೈತರಿಗೆ ಈ ಆ್ಯಪ್ ಬಗ್ಗೆ ಮಾಹಿತಿಯೂ ಇಲ್ಲ. ಆ್ಯಪ್ ಆಂಗ್ಲ ಭಾಷೆಯಲ್ಲಿದ್ದು, ಪ್ರಾದೇಶಿಕ ಭಾಷೆ ಗಳಲ್ಲಿ ಮಾಹಿತಿ ಪಡೆಯುವ ಅವಕಾಶ ಸದ್ಯಕಿಲ್ಲ. ಇದೇ ಕಾರಣಕ್ಕೆ, ಇಲ್ಲಿಯವರೆಗೆ ದೇಶದಲ್ಲಿ ಇದನ್ನು ಡೌನ್‌ಲೋಡ್ ಮಾಡಿದವರ ಸಂಖ್ಯೆ 1 ಲಕ್ಷವಷ್ಟೇ. ಈ ಪೈಕಿ ಎಷ್ಟು ರೈತರು ಬಳಕೆ ಮಾಡುತ್ತಿದ್ದಾರೆ ಎನ್ನುವ ಕುರಿತು ಸ್ಪಷ್ಟತೆ ಇಲ್ಲ.

ಪಶುಪಾಲಕರ ಸಹಾಯವಾಣಿ: ರಾಜ್ಯದಲ್ಲಿ ಪಶುಪಾಲಕರ ಸಹಾಯವಾಣಿಯೇ ಹೆಚ್ಚು ಪ್ರಸಿದ್ಧ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಪ್ರಾಣಿ ರೋಗ ಕಣ್ಗಾವಲು ಜಾಲದ ಬಲವರ್ಧನೆ ಕಾರ್ಯಕ್ರಮದಡಿ 8277100200(ಉಚಿತ) ಸಹಾಯವಾಣಿ ಕಾರ್ಯನಿರ್ವಹಿಸುತ್ತಿದೆ. ದಿನದ 24 ಗಂಟೆಯೂ ಪಶುಪಾಲಕರಿಗೆ ಮಾಹಿತಿ ಒದಗಿಸಲಾಗುತ್ತಿದೆ. ಜಾನುವಾರು ರೋಗಗಳು, ಲಸಿಕಾ ಕಾರ್ಯಕ್ರಮ, ರೋಗ ತಡೆ ಮುನ್ನೆಚ್ಚರಿಕೆ ಕ್ರಮಗಳು, ತಳಿಗಳ ಮಾಹಿತಿ, ಮೇವಿನ ಬೆಳೆ ಮಾಹಿತಿ ಸೇರಿದಂತೆ ಸಮಗ್ರ ವಿವರ ಲಭ್ಯ. ಆದ್ದರಿಂದ ರೈತರು ಆ್ಯಪ್ ಬದಲು ಸಹಾಯವಾಣಿಯ ಮೊರೆ ಹೋಗುತ್ತಿದ್ದಾರೆ.

ಏನಿದು ಇ-ಗೋಪಾಲ ಆ್ಯಪ್?: ಇ ಗೋಪಾಲ ಆ್ಯಪ್ ಸಮಗ್ರ ತಳಿ ಸುಧಾರಣೆ, ಮಾರುಕಟ್ಟೆ ತಾಣ ಮತ್ತು ಮಾಹಿತಿ ಪೋರ್ಟಲನ್ನು ಒಳಗೊಂಡಿದೆ. 2020ರ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ಬಿಡುಗಡೆಗೊಳಿಸಿದ್ದರು. ಜಾನುವಾರು ಸಾಕುವ, ನಿರ್ವಹಿಸುವ ರೈತರಿಗೆ ಪಶುಗಳ ಗುಣಮಟ್ಟದ ಸಂತಾನೋತ್ಪತ್ತಿ ಸೇವೆಗಳು(ಕೃತಕ ಗರ್ಭಧಾರಣೆ, ಪಶುವೈದ್ಯಕೀಯ ಪ್ರಥಮ ಚಿಕಿತ್ಸೆ, ಲಸಿಕೆ, ಚಿಕಿತ್ಸೆ ಇತ್ಯಾದಿ), ಪೋಷಣೆಗೆ ಮಾರ್ಗದರ್ಶನ, ಸೂಕ್ತ ಆಯುರ್ವೇದ ಔಷಧ/ಎಥ್ನೋ ಪಶುವೈದ್ಯಕೀಯ ಔಷಧ ಬಳಸಿ ಪ್ರಾಣಿಗಳ ಚಿಕಿತ್ಸೆ ಹೇಗೆ ಮಾಡಬಹುದು ಮೊದಲಾದ ಮಾಹಿತಿಯನ್ನು ಈ ಆ್ಯಪ್ ಒದಗಿಸುತ್ತದೆ. ಲಸಿಕೆ, ಗರ್ಭಧಾರಣೆ, ರೋಗ ನಿರ್ಣಯ, ಕರು ಹಾಕುವಿಕೆ ಇತ್ಯಾದಿಗಳಿಗೆ ನಿಗದಿತ ದಿನಾಂಕ ಮತ್ತು ವಿವಿಧ ಸರ್ಕಾರಿ ಯೋಜನೆ ಮತ್ತು ಅಭಿಯಾನ ಬಗ್ಗೆಯೂ ರೈತರಿಗೆ ಮಾಹಿತಿ ನೀಡುತ್ತದೆ.

ಶೇ.90ರಷ್ಟು ರಾಸುಗಳಿಗೆ ಟ್ಯಾಗ್: ಆಧಾರ್ ಕಾರ್ಡ್ ಮಾದರಿಯಲ್ಲಿ ರಾಸುಗಳ ಕಿವಿಗೆ 12 ಅಂಕಿಗಳಿರುವ ಟ್ಯಾಗ್ ಹಾಕಿ ಅದರ ಸಂಪೂರ್ಣ ವಿವರವನ್ನು ಇನಾಫ್ (ಇನ್‌ಫಾರ್ಮೇಶನ್ ನೆಟ್‌ವರ್ಕ್ ಫಾರ್ ಅನಿಮಲ್ ಪ್ರೊಡಕ್ಟಿವಿಟಿ ಆಂಡ್ ಹೆಲ್ತ್) ಪೋರ್ಟಲ್‌ನಲ್ಲಿ ಆಪಲೋಡ್ ಮಾಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.90 ಜಾನುವಾರುಗಳಿಗೆ ಟ್ಯಾಗ್ ಹಾಕಲಾಗಿದೆ. ಜಾನುವಾರ ವಯಸ್ಸು, ತಳಿ, ಮಾಲೀಕರ ಹೆಸರು, ಮೊಬೈಲ್ ಸಂಖ್ಯೆ, ಸರ್ಕಾರದಿಂದ ಪಡೆದಿರುವ ಸೌಲಭ್ಯ, ವಿಮೆ ಮೊದಲಾದವುಗಳ ಜತೆ ಲಸಿಕೆ, ಗರ್ಭಧಾರಣೆ, ಕಾಲುಬಾಯಿ ಲಸಿಕೆ ಮೊದಲಾದ ಮಾಹಿತಿ ಇದೆ. ಇಲಾಖೆ ಮತ್ತು ಗೋಪಾಲಕರ ನಡುವೆ ಸಂಪರ್ಕ ಸಾಧಿಸಲು ಅನುಕೂಲ.

ಇ-ಗೋಪಾಲ ಆ್ಯಪ್ ಬಗ್ಗೆ ರೈತರು ಅಷ್ಟಾಗಿ ಆಸಕ್ತಿ ವಹಿಸಿಲ್ಲ. ಬಹುತೇಕ ರೈತರು ರಾಜ್ಯದ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯುತ್ತಾರೆ. ಆ್ಯಪ್ ಆರಂಭಿಕ ಹಂತದಲ್ಲದೆ. ಹಲವು ರೀತಿಯಲ್ಲಿ ಅಭಿವೃದ್ಧಿಯಾದ ಬಳಿಕ ಮುಂದಿನ ವರ್ಷಗಳಲ್ಲಿ ಜನಪ್ರಿಯ ವಾಗುವ ನಿರೀಕ್ಷೆ ಇದೆ.

ಡಾ.ಪ್ರಸನ್ನ ಕುಮಾರ್

ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ, ದ.ಕ ಜಿಲ್ಲೆ

ಜಾನುವಾರು ಸಾಕಣೆ ಮಾಹಿತಿ, ಮತ್ತಿತರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ರೂಪಿಸಿದ ಇ-ಗೋಪಾಲ ಆ್ಯಪನ್ನು ಬೆರಣಿಕೆಯಷ್ಟು ಮಂದಿ ಮಾತ್ರ ನೋಂದಣಿ ಮಾಡಿ ಉಪಯೋಗಿಸುತ್ತಿದ್ದಾರೆ. ಪ್ರತಿ ಗ್ರಾಮಸಭೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆ್ಯಪ್ ಬಗ್ಗೆ ಮಾಹಿತಿ ನೀಡಿ, ನೋಂದಣಿ ಮಾಡಿಕೊಳ್ಳಲು ಸೂಚನೆ ನೀಡಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಪಶುಪಾಲಕರು ಇ-ಗೋಪಾಲ ಆ್ಯಪ್ ಬಗ್ಗೆ ಆಸಕ್ತಿ ತೋರಿಲ್ಲ.

ಡಾ.ಹರೀಶ್ ತಾಮನ್ಕರ್

ಉಪ ನಿರ್ದೇಶಕ, ಪಶುಸಂಗೋಪನಾ ಇಲಾಖೆ. ಉಡುಪಿ ಜಿಲ್ಲೆ.

ಫೋಟೋ..........................ಎಂಎನ್‌ಜಿ-ಜುಲೈ 6- ಇ-ಗೋಪಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net