

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಅಪರಾಧ ಪ್ರಕರಣಗಳಲ್ಲಿ ಸ್ಥಳ ಮಹಜರು ವೇಳೆ ಪೊಲೀಸರಾಡುವ ಕಳ್ಳಾಟಕ್ಕೆ ಬ್ರೇಕ್ ಹಾಕಲು ಗೃಹ ಇಲಾಖೆ ‘ಇ-ಸಾಕ್ಷ್ಯ ಮೊಬೈಲ್ ಅಪ್ಲಿಕೇಷನ್’ ಪರಿಚಯಿಸಿದೆ. ಸ್ಥಳ ಪಂಚನಾಮೆ ವೇಳೆ ತನಿಖಾಧಿಕಾರಿಗಳು ಇ-ಸಾಕ್ಷ್ಯ ತಂತ್ರಾಂಶದಲ್ಲಿ ಜಿಯೋ ಟ್ಯಾಗಿಂಗ್ ಜತೆಗೆ ಪ್ರತಿ ಸಾಕ್ಷ್ಯ ಸಂಗ್ರಹವನ್ನು ಅಪ್‌ಲೋಡ್ ಮಾಡಬೇಕು. ಇದು ಸ್ಥಳೀಯ ಮತ್ತು ಹೈಕೋರ್ಟ್ ದತ್ತಾಂಶಕ್ಕೆ ಲಿಂಕ್ ಆಗಲಿದೆ. ಇದರಿಂದ ಪಂಚನಾಮೆ ವೇಳೆ ಆಗುತ್ತಿದ್ದ ಲೋಪಗಳಿಗೆ ತಡೆಬಿದ್ದಂತೆ ಆಗುವ ಜತೆಗೆ ಸುಳ್ಳು ಸಾಕ್ಷ್ಯ ಸೇರಿಸುವುದೂ ನಿಲ್ಲಲಿದೆ.
ಮೊದಲು ಕೃತ್ಯ ನಡೆದ ಸ್ಥಳಕ್ಕೆ ಪೊಲೀಸರು ಹೋಗಿ ಸ್ಥಳ ಮಹಜರು ಮಾಡಿ ಸಾಕ್ಷಿದಾರರ ಹೇಳಿಕೆ ಪಡೆದುಕೊಳ್ಳುತ್ತಿದ್ದರು. ಸ್ಥಳದ ಫೋಟೋ ಪಡೆದು ಮತ್ತು ರೇಖಾಚಿತ್ರ ಬಿಡಿಸಿಕೊಂಡು ಪಂಚನಾಮೆಗೆ ಸ್ಥಳೀಯರ ಅಥವಾ ಅಧಿಕಾರಿಗಳ ಸಹಿ, ಹೇಳಿಕೆ ಪಡೆಯುತ್ತಿದ್ದರು. ಕೆಲವೊಮ್ಮೆ ತನಿಖಾಧಿಕಾರಿ ಸ್ಥಳಕ್ಕೆ ಹೋಗದೆ ಮಹಜರು ಮಾಡುವುದು ಅಥವಾ ಖಾಲಿ ಕಾಗದದ ಮೇಲೆ ಸಹಿ ಪಡೆದು ತಮಗೆ ಬೇಕಾದ ರೀತಿ ಹೇಳಿಕೆ ಮತ್ತು ಮಹಜರು ಸಾಕ್ಷಿದಾರರ ಹೇಳಿಕೆ ಬರೆದುಕೊಳ್ಳುತ್ತಿದ್ದ ಪ್ರಕರಣಗಳೂ ನಡೆಯುತ್ತಿದ್ದವು. ಆಗ ಕೋರ್ಟ್‌ಗಳಲ್ಲಿ ವಿಚಾರಣೆ ವೇಳೆ ತನಿಖಾಧಿಕಾರಿಗಳ ಕರ್ತವ್ಯಲೋಪದಿಂದ ಬಂಧಿತ ಆರೋಪಿಗಳು ಮುಕ್ತರಾಗುತ್ತಿದ್ದರು.
ಇದೀಗ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರಡಿ ಇ-ಸಾಕ್ಷ್ಯ ಅಪ್ಲಿಕೇಷನ್ ಪರಿಚಯಿಸಲಾಗಿದೆ. ಅಪರಾಧ ಮತ್ತು ಅಪರಾಧಿ ಟ್ರ್ಯಾಕಿಂಗ್ ಜಾಲ ಮತ್ತು ವ್ಯವಸ್ಥೆ (ಸಿಸಿಟಿಎನ್‌ಎಸ್) ಮತ್ತು ಪೊಲೀಸ್ ಐಟಿಯೊಂದಿಗೆ ಸಂಯೋಜನೆ ಮಾಡಲಾಗಿದೆ.
ಅಪರಾಧ ಕೃತ್ಯ ನಡೆದ ಸ್ಥಳದಲ್ಲಿ ಪಂಚನಾಮೆ ಮಾಡುವಾಗ ತನಿಖಾಧಿಕಾರಿ, ಇ-ಸಾಕ್ಷ್ಯ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಡಿಜಿಟಲ್ ಸಾಕ್ಷ್ಯ ಅಪ್‌ಲೋಡ್ ಮಾಡಬೇಕು. ಅದಕ್ಕೆ ಕಾನೂನಿನಲ್ಲಿ ಮಾನ್ಯತೆ ನೀಡಲಾಗಿದೆ. ವಿಡಿಯೋ ರೆಕಾರ್ಡಿಂಗ್, ಪೋಟೋ, ಸಾಕ್ಷಿಯ ಛಾಯಾಚಿತ್ರ, ತನಿಖಾಧಿಕಾರಿ ಫೋಟೋ, ಹೇಳಿಕೆ ಸಂಗ್ರಹಿಸಿ ಅಪ್‌ಲೋಡ್ ಮಾಡಬೇಕು. ಅಪ್ಲಿಕೇಷನ್ ಮುಚ್ಚುವ ಮೊದಲು ಬೆರಳಚ್ಚು, ಜಿಯೋ ಲೋಕೇಷನ್‌ನೊಂದಿಗೆ ಅಕ್ಷಾಂಶ ಮತ್ತು ರೇಖಾಂಶವನ್ನು ಅಪ್‌ಲೋಡ್ ಮಾಡಬೇಕು. ಒಮ್ಮೆಅಪ್‌ಲೋಡ್ ಮಾಡಿದರೆ ನೇರ ಕೋರ್ಟ್ ದತ್ತಾಂಶದೊಂದಿಗೆ ಲಿಂಕ್ ಆಗಲಿದ್ದು, ಸುರಕ್ಷಿತವಾಗಿ ಉಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಮಾಣಪತ್ರ ಸೃಜನೆ
ಇ-ಸಾಕ್ಷ್ಯದಲ್ಲಿ ತನಿಖಾಧಿಕಾರಿಯ ಪ್ರಮಾಣಪತ್ರ ಸಹ ಸೃಜನೆಯಾಗಲಿದೆ. ಭಾರತೀಯ ಸಾಕ್ಷ್ಯ ಅಧಿನಿಯಮ 2023 (2023ರ ಕೇಂದ್ರ ಕಾಯ್ದೆ 47) ಪ್ರಮಾಣ ಪತ್ರ 63(4)(ಸಿ) ಸಿದ್ಧವಾಗಲಿದೆ. ಈ ಎಲ್ಲ ಪ್ರಮಾಣ ಪತ್ರಗಳಿಗೆ ತನಿಖಾಧಿಕಾರಿಯ ಇ-ಸಹಿ ಮುದ್ರೆ ಬೀಳಲಿದೆ.
ಕೋರ್ಟ್ ಪೋರ್ಟಲ್‌ಗೆ ಲಿಂಕ್
ಪ್ರತಿ ತನಿಖಾಧಿಕಾರಿ ಎಸ್‌ಐಡಿ (ಸಾಕ್ಷ್ಯ ಐಡಿ ನಂಬರ್) ಸೃಷ್ಟಿಸಿಕೊಳ್ಳಬೇಕು ಅಥವಾ ಸಿಸಿಟಿಎನ್‌ಎಸ್‌ನಲ್ಲಿ ಜಿಡಿ ನಂಬರ್ ಪಡೆದು ಎ್ಐಆರ್‌ನೊಂದಿಗೆ ಲಿಂಕ್ ಮಾಡಬೇಕು. ಈ ಮೂಲಕ ಇ-ಸಾಕ್ಷ್ಯ ಮ್ಯಾಜಿಸ್ಟ್ರೇಟ್‌ಗೆ ರವಾನಿಸಬೇಕು. ಆಯಾ ಕೋರ್ಟ್‌ಗಳು ಎಲ್ಲ ಸಿಐಎಸ್ (ಪ್ರಕರಣ ಮಾಹಿತಿ ವ್ಯವಸ್ಥೆ) ಅಥವಾ ಐಸಿಜೆಎಸ್‌ನಲ್ಲಿ (ಆಂತರಿಕ ಕಾರ್ಯಾಚರಣ ಅಪರಾಧ ನ್ಯಾಯ ವ್ಯವಸ್ಥೆ) ಇ-ಸಾಕ್ಷಿ ಪೋರ್ಟಲ್‌ನಲ್ಲಿ ವೀಕ್ಷಿಸಬಹುದು. ಡಿಜಿಟಲ್ ಸಾಕ್ಷ್ಯವನ್ನು ಆರೋಪಿಗೆ ಮತ್ತು ಆತನ ಪರ ವಕೀಲರಿಗೆ ಹಂಚಿಕೆ ಮಾಡಲು ಅನುಮತಿಸಬಹುದು.
ಇ-ಸಾಕ್ಷ್ಯ ತಂತ್ರಾಂಶ ವಿವರ
-ತನಿಖಾಧಿಕಾರಿಗಳು ಕಡ್ಡಾಯವಾಗಿ ಕೃತ್ಯ ನಡೆದ ಸ್ಥಳಕ್ಕೆ ಹೋಗಬೇಕು
-ಸ್ಥಳದ ವಿಡಿಯೋ, ಫೋಟೋ ನ್ಯಾಯಾಧೀಶರ ವೀಕ್ಷಣೆಗೆ ಅವಕಾಶ
-ಪಂಚನಾಮೆ ವೇಳೆ ಲೋಪಕ್ಕೆ, ತನಿಖಾಧಿಕಾರಿಗಳ ಕಳ್ಳಾಟಕ್ಕೆ ಬ್ರೇಕ್
-ಸಂತ್ರಸ್ತರಿಗೆ ನ್ಯಾಯದಾನದಲ್ಲಿ ಮತ್ತಷ್ಟು ಪಾರದರ್ಶಕತೆಗೆ ಅನುಕೂಲ