

| ಹರೀಶ್ ಬೇಲೂರು ಬೆಂಗಳೂರು
ಏರುತ್ತಿರುವ ಇಂಧನ ಬೆಲೆ ಹಾಗೂ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ವಿಶ್ವದೆಲ್ಲೆಡೆ ಒಲವು ಹೆಚ್ಚುತ್ತಿರುವ ಸಂದರ್ಭದಲ್ಲೇ, ರಾಜ್ಯ ಸರ್ಕಾರ ವಿವಿಧ ಇಲಾಖೆಗಳಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ವಾಹನಗಳ ಬದಲು ಎಲೆಕ್ಟ್ರಿಕ್ ಕಾರುಗಳನ್ನು ಬಳಕೆ ಮಾಡಿಕೊಳ್ಳಲು ಗಂಭೀರ ಚಿಂತನೆ ನಡೆಸಿದೆ. ಪೂರ್ಣಪ್ರಮಾಣದಲ್ಲಿ ಈ ಯೋಜನೆ ಜಾರಿಯಾದರೆ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ನೂರಾರು ಕೋಟಿ ರೂ. ಉಳಿತಾಯವಾಗಲಿದೆ.
ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ 1000 ವಿದ್ಯುತ್ ಚಾಲಿತ ಕಾರುಗಳ ಖರೀದಿಗೆ ಮಾತುಕತೆ ನಡೆದಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಹಾಗೂ ಬೆಸ್ಕಾಂ ಜಂಟಿಯಾಗಿ ಯೋಜನೆ ಸಿದ್ಧಪಡಿಸಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿವೆ. ಅನುಮತಿ ಸಿಕ್ಕರೆ ಮುಂದಿನ 6 ತಿಂಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಲೆಕ್ಟ್ರಿಕ್ ಕಾರುಗಳಲ್ಲಿ ಸಂಚಾರ ಮಾಡಲಿದ್ದಾರೆ. ಭಾರತದ ಇ-ವಾಹನಗಳ ಮಾರುಕಟ್ಟೆಯಲ್ಲಿ ಕರ್ನಾಟಕ ಪಾಲು ಶೇ.22 ಇದೆ. 19,270 ಇ-ವಾಹನಗಳು ರಾಜ್ಯದಲ್ಲಿ ಮಾರಾಟವಾಗಿವೆ. ಈ ಮೂಲಕ ರಾಜ್ಯ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ದೇಶದ ಎಲೆಕ್ಟ್ರಿಕ್ ವಾಹನಗಳ ಪ್ರಮುಖ ತಾಣವಾಗಿ ಕರ್ನಾಟಕ ಹೊರಹೊಮ್ಮಿದೆ. ರಾಜಧಾನಿ ಬೆಂಗಳೂರು ಸೇರಿ ಇನ್ನಿತರ ನಗರಗಳಲ್ಲಿ ವಿದ್ಯುತ್ಚಾಲಿತ ಸ್ಕೂಟರ್ ಹಾಗೂ ಕಾರುಗಳ ಖರೀದಿ ಟ್ರೆಂಡ್ ಹೆಚ್ಚಾಗಿದೆ. ಸಾರಿಗೆ ಇಲಾಖೆ ವ್ಯಾಪ್ತಿಗೆ ಬರುವ ಬಿಎಂಟಿಸಿ ಈಗಾಗಲೇ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಿಸಿದೆ. ಮುಂದಿನ 3 ವರ್ಷದಲ್ಲಿ 1,500 ಇ-ಬಸ್ಗಳ ಖರೀದಿಗೆ ಇಲಾಖೆ ಮುಂದಾಗಿದೆ.
ಅಕ್ರಮಕ್ಕೂ ಬೀಳಲಿದೆ ಕಡಿವಾಣ!: ಸರ್ಕಾರ ಪ್ರತಿ ವರ್ಷ ಹೊಸದಾಗಿ ನೂರಾರು ಕಾರುಗಳನ್ನು ಖರೀದಿಸುತ್ತಿದೆ. ಜತೆಗೆ ಸಾವಿರಾರು ಕಾರುಗಳನ್ನು ಖಾಸಗಿಯವರಿಂದ ಬಾಡಿಗೆಗೆ ಪಡೆದು ವಿವಿಧ ಇಲಾಖೆಗಳಲ್ಲಿ ಬಳಸಲಾಗುತ್ತಿದೆ. ಇದಕ್ಕಾಗಿ ಪ್ರತಿ ತಿಂಗಳು ಲಕ್ಷಾಂತರ ರೂ. ಸರ್ಕಾರ ವ್ಯಯ ಮಾಡುತ್ತಿದೆ. ಈ ಕಾರುಗಳು ಬಹುತೇಕ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳ ಸಂಬಂಧಿಕರ ಹೆಸರಿನಲ್ಲಿವೆ. ಇಲಾಖೆಯ ಆಯುಕ್ತರು, ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ರಾಜಕೀಯ ಮುಖಂಡರು, ತಮ್ಮ ಕುಟುಂಬದ ಸದಸ್ಯರ ವೈಯಕ್ತಿಕ ಓಡಾಟಕ್ಕೆ ಈ ಕಾರುಗಳನ್ನು ಬಳಸುತ್ತಿರುವ ಆರೋಪಗಳಿವೆ. ಇದರಿಂದ, ಸರ್ಕಾರಕ್ಕೆ ಹೆಚ್ಚುವರಿಯಾಗಿ ಆರ್ಥಿಕ ಹೊರೆಯಾಗುತ್ತಿದೆ. ಈ ಹಿಂದೆ ಬಾಡಿಗೆ ಕಾರುಗಳ ಬದಲಾಗಿ ವಿದ್ಯುತ್ ಚಾಲಿತ ವಾಹನಗಳನ್ನು ಬಾಡಿಗೆ ರೂಪದಲ್ಲಿ ಪಡೆದು ಓಡಿಸಲು ಬೆಸ್ಕಾಂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ವಿವಿಧ ಕಾರಣಗಳಿಂದ ಈ ಯೋಜನೆ ನನೆಗುದಿಗೆ ಬಿತ್ತು. ವಿದ್ಯುತ್ ಚಾಲಿತ ವಾಹನ ಯೋಜನೆ ಜಾರಿಗೆ ತಂದರೆ ಈ ಎಲ್ಲ ಅಕ್ರಮಗಳಿಗೆ ಕಡಿವಾಣ ಬೀಳಲಿದೆ ಎಂದು ಹೇಳಲಾಗುತ್ತಿದೆ.
ಸರ್ಕಾರಿ ಕಚೇರಿಗಳಲ್ಲಿ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಳಸಲಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಬದಲಾಗಿ ವಿದ್ಯುತ್ಚಾಲಿತ ಕಾರುಗಳನ್ನು ಬಳಸಲು ಚಿಂತನೆ ನಡೆಯುತ್ತಿದೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಶೀಘ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಯೋಜನೆ ಕಾರ್ಯಗತವಾದರೆ ವಾಯುಮಾಲಿನ್ಯ ತಗ್ಗಲಿದೆ.
| ಪಿ.ರಾಜೇಂದ್ರ ಚೋಳನ್ ಬೆಸ್ಕಾಂ ಎಂಡಿ.
ಕಾರುಗಳು ಯಾರಿಗೆ?: ಸಿಎಂ ಕಚೇರಿ, ಸಚಿವರು, ಶಾಸಕರು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಂದ ಹಿಡಿದು ಇತರೆ ದರ್ಜೆಯ ಅಧಿಕಾರಿಗಳು ಸರ್ಕಾರಿ ಕಾರುಗಳನ್ನು ಬಳಸುತ್ತಿದ್ದಾರೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ಹೊಸದಾಗಿ ನೂರಾರು ಕಾರು ಗಳನ್ನು ಖರೀದಿಸಲಾಗುತ್ತಿದೆ. ಇದಕ್ಕಾಗಿ ಅನಗತ್ಯವಾಗಿ ತೆರಿಗೆ ಹಣವನ್ನು ವ್ಯಯ ಮಾಡಲಾಗುತ್ತಿದೆ. ಜತೆಗೆ, ಪೆಟ್ರೋಲ್ ಮತ್ತು ಡೀಸೆಲ್ಗಾಗಿ ಪ್ರತಿ ವರ್ಷ ನೂರಾರು ಕೋಟಿ ರೂ. ವ್ಯಯಿಸಲಾಗುತ್ತಿದೆ. ನಿರ್ವ ಹಣೆ ವೆಚ್ಚವೂ ಹೆಚ್ಚಾಗಿದೆ. ಮುಖ್ಯವಾಗಿ ವರ್ಷದಿಂದ ವರ್ಷಕ್ಕೆ ವಾಯುಮಾಲಿನ್ಯದಿಂದ ಉಂಟಾಗುವ ದುಷ್ಪರಿಣಾಮಗಳ ಪ್ರಕರಣಗಳು ಏರಿಕೆಯಾಗಿವೆ. ಆದ್ದರಿಂದ ವಿದ್ಯುತ್ ಚಾಲಿತ ಕಾರು ಖರೀದಿಸಿದರೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ಬಿಬಿಎಂಪಿಯಿಂದ ಖರೀದಿಗೆ ಆಸಕ್ತಿ: ಪಾಲಿಕೆಯಲ್ಲಿಯೂ ವಿದ್ಯುತ್ ಚಾಲಿತ ಕಾರುಗಳ ಖರೀದಿ ಬಗ್ಗೆ ಈಗಾಗಲೇ ಬಿಬಿಎಂಪಿ ಚಿಂತನೆ ನಡೆಸಿದೆ. ಚಾರ್ಜಿಂಗ್ ಸೇರಿ ಇನ್ನಿತರ ವಿಚಾರಗಳ ಬಗ್ಗೆ ಬೆಸ್ಕಾಂ ಜತೆ ಬಿಬಿಎಂಪಿ ಮಾತುಕತೆ ನಡೆಸುತ್ತಿದೆ. 2 ಬಾರಿ ಸಭೆ ಸಹ ಮಾಡಲಾಗಿದೆ.