

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಗಸ್ತಿನ ಪೊಲೀಸರ ಇ-ಬೀಟ್ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ತರಲು ಮೂರು ಅಂಶಗಳನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಬಿ. ದಯಾನಂದ್, ಇ-ಬೀಟ್ ವ್ಯವಸ್ಥೆಯನ್ನು ಸುಧಾರಣೆ ತರುವ ಸಲುವಾಗಿ ನಾನು ಸೇರಿದಂತೆ ಹಿರಿಯ ಅಧಿಕಾರಿಗಳು ಇತ್ತೀಚೆಗೆ ರಾತ್ರಿಗಸ್ತು ತಿರುಗಿದಾಗ ಸಲಹೆ, ಸೂಚನೆಗಳು ಬಂದಿವೆ.
ಇವುಗಳನ್ನು ಅಳವಡಿಸುವ ಸಲುವಾಗಿ ಮೂರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇ-ಬೀಟ್ ವ್ಯವಸ್ಥೆಯಲ್ಲಿ ಮತ್ತಷ್ಟು ತಂತ್ರಜ್ಞಾನ ಅಳವಡಿಸಿದ್ದು, ಈ ಬಗ್ಗೆ ಅಧೀನಪೊಲೀಸರಿಗೆ ಆನ್‌ಲೈನ್‌ನಲ್ಲಿ ತರಬೇತಿ ನೀಡಲಾಗುತ್ತಿದೆ. ಇಡೀ ನಗರ ವ್ಯಾಪ್ತಿಗೆ ನಾಕಬಂದಿ ಮಾಡಬೇಕೆಂದು ಯೋಜನೆ ರೂಪಿಸಲಾಗಿದೆ. ಪ್ರಯೋಗಿಕವಾಗಿ ದಕ್ಷಿಣ ವಿಭಾಗದಲ್ಲಿ ಅಳವಡಿಸಿದ್ದು, ಅಪರಾಧ ಹಿನ್ನೆಲೆಯುಳ್ಳವರು ಸೆರೆಸಿಕ್ಕರು. ಇದೇ ಮಾದರಿ ಇಡೀ ನಗರಕ್ಕೆ ಅಳವಡಿಸಲು ನಿರ್ಧರಿಸಲಾಗಿದೆ.
ಇದರ ಜತೆಗೆ ಅಧಿಕಾರಿ ವರ್ಗಕ್ಕೆ ಜಿಪಿಎಸ್ ಅಳವಡಿಸಲಾಗುತ್ತದೆ. ಈ ಮೊದಲು ಡಿಸಿಪಿ ತನ್ನ ಕೆಲಸವನ್ನು ಎಸಿಪಿಗೆ ಇವರು ಇನ್‌ಸ್ಪೆಕ್ಟರ್‌ಗೆ ಪಿಎಸ್‌ಐಗೆ ಇದೇ ರೀತಿ ತಮ್ಮ ಕೆಲಸವನ್ನು ಕೆಳಹಂತದ ಅಧಿಕಾರಿ, ಸಿಬ್ಬಂದಿಗೆ ವಹಿಸುತ್ತಿದ್ದರು. ಆದರೆ, ಇದೀಗ ಜಿಪಿಎಸ್ ಅಳವಡಿಸಿ ಕಮಾಂಡ್ ಸೆಂಟರ್‌ನಿಂದ ರಾತ್ರಿಪಾಳಿ ಅಧಿಕಾರಿಗಳ ಮೇಲೆ ನಿಗಾ ವಹಿಸಲಾಗುತ್ತದೆ ಎಂದು ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.