

ಕಿರುವಾರ ಎಸ್.ಸುದರ್ಶನ್ ಕೋಲಾರ
ಅನಧಿಕೃತ ಆಸ್ತಿಗಳಿಗೆ ನಿಯಮ ಉಲ್ಲಂಘಿಸಿ ಆಸ್ತಿ ದಾಖಲೆ ನೀಡಿರುವ ಸಂಬಂಧ, ಕೋಲಾರ ನಗರಸಭೆ ಅಧಿಕಾರಿ, ಸಿಬ್ಬಂದಿ ವಿರುದ್ಧ ರಾಜ್ಯ ಪೌರಾಡಳಿತ ನಿರ್ದೇಶಕರಿಗೆ ಜಿಲ್ಲಾಡಳಿತ ದೋಷಾರೋಪಣ ಪಟ್ಟಿ ಸಲ್ಲಿಸಿದೆ.
ಕೋಲಾರ ನಗರಸಭೆಯಲ್ಲಿ 2022 ಜ.1ರಿಂದ ಜುಲೈ 1ರ ಅವಧಿಯಲ್ಲಿ ಭೂ-ಪರಿವರ್ತನೆಯಾಗದ, ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಗೊಳ್ಳದ, ರಾಜಕಾಲುವೆ, ಸರ್ಕಾರಿ ಜಾಗ, ಬಡಾವಣೆಗಳಲ್ಲಿ ಮೀಸಲಿಟ್ಟಿರುವ ಉದ್ಯಾನವನ ಹಾಗೂ ಸಿಎ ನಿವೇಶನಗಳಿಗೆ ಕಾನೂನು ಬಾಹಿರವಾಗಿ ಇ&-ಆಸ್ತಿ ತಂತ್ರಾಶದಲ್ಲಿ ದಾಖಲಿಸಿರುವ ಸ್ವತ್ತುಗಳ ಬಗ್ಗೆ ನಗರಸಭೆ ಸದಸ್ಯರಾದ ಎಸ್.ಆರ್.ಮುರಳಿಗೌಡ, ಸಿ.ರಾಕೇಶ್ ಹಾಗೂ ಉಪಾಧ್ಯಕ್ಷೆ ಸಂಗೀತಾ ಜಗದೀಶ್ ಅವರು ರಾಜ್ಯ ಪೌರಾಡಳಿತ ನಿರ್ದೇಶಕರಿಗೆ ದೂರು ಸಲ್ಲಿಸಿದ್ದರು. ದೂರಿನ ಮೇರೆಗೆ ತನಿಖಾ ತಂಡ ರಚಿಸಲಾಗಿತ್ತು, ತಂಡವು ಕಡತಗಳನ್ನು ಪರಿಶೀಲಿಸಿ ವರದಿ ಸಲ್ಲಿಸಿತ್ತು.
ದೂರುದಾರರು ಆಕ್ಷೇಪಣೆ ವ್ಯಕ್ತಪಡಿಸಿರುವ ಅವಧಿಯಲ್ಲಿ ಒಟ್ಟು 1,761 ಆಸ್ತಿಗಳಿಗೆ ಇ-&ಆಸ್ತಿ ತಂತ್ರಾಂಶದಲ್ಲಿ ದಾಖಲಿಸಿ ಸ್ವತ್ತುಗಳನ್ನು ನೀಡಿರುವುದು ಕಂಡುಬಂದಿದೆ. ನಗರಸಭೆ ಕಂದಾಯ ಶಾಖೆಯ ಅಧಿಕಾರಿ, ಸಿಬ್ಬಂದಿ ತನಿಖಾ ತಂಡಕ್ಕೆ 949 ಭೌತಿಕ ಕಡತಗಳನ್ನು ಸಲ್ಲಿಸಿದ್ದರು. ಬಾಕಿ 812 ಕಡತಗಳನ್ನು ತನಿಖಾ ತಂಡಕ್ಕೆ ಸಲ್ಲಿಸುವಂತೆ ಕೋಲಾರ ಯೋಜನಾ ನಿರ್ದೇಶಕರು ನಗರಸಭೆ ಪೌರಾಯುಕ್ತರಿಗೆ ಸೂಚಿಸಿ, ಕಾರಣ ಕೇಳಿ ನೋಟಿಸ್ ನೀಡಿದ್ದರು.
ಭೂ ಪರಿವರ್ತನೆ ಹಾಗೂ ಪ್ರಾಧಿಕಾರದಿಂದ ಸಕ್ಷಮ ಅನುಮೋದನೆಯಾದ ಬಡಾವಣೆಗಳಲ್ಲಿನ ನಿವೇಶನಗಳಿಗೆ, ಬಡಾವಣೆ ಅನುಮೋದನೆಯಾಗದ ಆಸ್ತಿಗಳ ಸಂಬಂಧ ಅಧಿಕೃತ ಎಂದು ನಮೂದಿಸಿ ಸ್ವತ್ತು ವಿತರಣೆ ಮಾಡಿರುವುದು ಸದಸ್ಯರ ಆಕ್ಷೇಪಕ್ಕೆ ಕಾರಣವಾಗಿತ್ತು.
ಪ್ರಕರಣದಲ್ಲಿ ಒಟ್ಟು 15 ಮಂದಿ ಭಾಗಿಯಾಗಿದ್ದು, ಆ ಪೈಕಿ ಒಬ್ಬರು ಮೃತಪಟ್ಟಿದ್ದು, ಇನ್ನೊಬ್ಬರು ಪ್ರೋಗ್ರಾಮರ್ ಹೊರ ಗುತ್ತಿಗೆ ನೌಕರನಾಗಿರುತ್ತಾನೆ. ಇನ್ನುಳಿದ ಪೌರಾಯುಕ್ತ, ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕ, ಕರ ವಸೂಲಿಗಾರ, ಪ್ರಥಮ ದರ್ಜೆ ಸಹಾಯಕ, ದ್ವಿತಿಯ ದರ್ಜೆ ಸಹಾಯಕರ ವಿರುದ್ಧ ತನಿಖಾ ವರದಿಯಲ್ಲಿ ಆರೋಪಗಳು ಸಾಬೀತಾಗಿವೆ.
ಆರೋಪಗಳಿಗೆ ಸಂಬಂಧಿಸಿದಂತೆ ನೌಕರರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸುವಂತೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು, ಕೋಲಾರ ನಗರಾಭಿವೃದ್ಧಿ ಕೋಶಕ್ಕೆ ಪತ್ರ ರವಾನಿಸಿದ್ದರು. ಅದರ ಹಿನ್ನೆಲೆಯಲ್ಲಿ ಅಧಿಕಾರಿ, ಸಿಬ್ಬಂದಿ ವಿರುದ್ಧ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆರೋಪಪಟ್ಟಿ ಸಲ್ಲಿಸಿದ್ದಾರೆ.
* ನ್ಯೂನತೆಗಳ ಬಗ್ಗೆ ವರದಿಯಲ್ಲಿ ಉಲ್ಲೇಖ
ಪರಿಶೀಲನೆಗೆ ಹಾಜರುಪಡಿಸಿದ್ದ ಕಡತಗಳನ್ನು ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಕಲಂ 111, 112 ಮತ್ತು 113ರ ನಿಯಮಗಳ ಮಾರ್ಗಸೂಚಿಗಳ ಆಧಾರದ ಮೇಲೆ ನಗರ ವ್ಯಾಪ್ತಿಯ ಆಸ್ತಿಗಳ ಮಾಲೀಕರಿಗೆ ನಮೂನೆ- 3 ಹಾಗೂ ಆಸ್ತಿ ತೆರಿಗೆ ಪಾವತಿಸುವ ಹೊಣೆಗಾರಿಕೆ, ಹಕ್ಕಿನ ವರ್ಗಾವಣೆಯ 949 ಭೌತಿಕ ಕಡತಗಳನ್ನು ಪರಿಶೀಲಿಸಿದಾಗ 48 ಕಡತಗಳ ನಿರ್ವಹಣೆಯಲ್ಲಿ ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ.
ಅನಧಿಕೃತ ಆಸ್ತಿಗಳಿಗೆ ಆಸ್ತಿ ನಕಲುಗಳನ್ನು ನೀಡಬಾರದೆಂದು ಸರ್ಕಾರವೇ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಸುತ್ತೋಲೆಗಳಲ್ಲಿನ ಅಂಶಗಳನ್ನು ಪಾಲನೆ ಮಾಡಿಲ್ಲ. ನಗರಸಭೆಯ ಕಂದಾಯ ವಿಭಾಗದಲ್ಲಿ ಆಸ್ತಿ ದಾಖಲು ಮಾಡಿರುವ ಕಡತಗಳಲ್ಲಿ ಪ್ರಮುಖ ನ್ಯೂನತೆಗಳ ಬಗ್ಗೆ ಪಟ್ಟಿ ಮಾಡಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
* ಯಾರ್ಯಾರ ವಿರುದ್ಧ ದೂರು?
ಪೌರಾಯುಕ್ತ ಎಸ್.ಪ್ರಸಾದ್, ಕಂದಾಯಾಧಿಕಾರಿ ಚಂದ್ರ, ಕಂದಾಯ ನಿರೀಕ್ಷಕರಾದ ತ್ಯಾಗರಾಜ್, ರಮೇಶ್, ನಾಗರಾಜ, ಪ್ರಥಮ ದರ್ಜೆ ಸಹಾಯ ಅನಿಲ್ ಕುಮಾರ್, ವಿಷಯ ನಿರ್ವಾಹಕರಾದ ಸುಮಂತ್, ನಟರಾಜ್, ಗೋವಿಂದಪ್ಪ, ಕರವಸೂಲಿಗಾರರಾದ ಜಗದೀಶ್, ಭವ್ಯಾ, (ಒಒಡಿ) ಗೋವಿಂದಪ್ಪ (ನಿವೃತ್ತಿ), ನಾರಾಯಣಸ್ವಾಮಿ, ಸೀನಿಯರ್ ಪ್ರೋಗ್ರಾಮರ್ ಕಿರಣ್ ಕುಮಾರ್ ವಿರುದ್ಧ ಸದಸ್ಯರು ದೂರು ಸಲ್ಲಿಸಿದ್ದರು. ಕೆಲ ಅಧಿಕಾರಿ, ಸಿಬ್ಬಂದಿ ಕೋಲಾರ ಬಿಟ್ಟು ಮುಳಬಾಗಿಲು, ವಿಜಯಪುರ, ಮಾಲೂರು ಸೇರಿ ಬೇರೆ ಜಿಲ್ಲೆಗಳಿಗೆ ವರ್ಗಾವಣೆಯಾಗಿದ್ದು, ತನಿಖೆ ಎದುರಿಸಲಿದ್ದಾರೆ.
* ಬೆಳಕು ಚೆಲ್ಲಿದ್ದ ವಿಜಯವಾಣಿ
ರಾತ್ರೋರಾತ್ರಿ ಸರ್ಕಾರಿ ಭೂಮಿ ಪರಭಾರೆ ಶೀರ್ಷಿಕೆಯಡಿ 2024ರ ಜು.21ರಂದು ವಿಜಯವಾಣಿಯಲ್ಲಿ ಅನಧಿಕೃತ ಅಸ್ತಿಗಳಿಗೆ ಇ&ಸ್ವತ್ತು ವಿತರಣೆ ಮಾಡುತ್ತಿರುವ ಬಗ್ಗೆ ವರದಿ ಪ್ರಕಟಿಸಲಾಗಿತ್ತು. ಈಚೆಗೆ ನಗರಸಭೆಗೆ ದಿಢೀರ್ ಭೇಟಿ ನೀಡಿದ್ದ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಸಹ ಅನಧಿಕೃತ ಖಾತೆಗಳಿಗೆ ಇ&ಸ್ವತ್ತು ವಿತರಣೆ ಕುರಿತು ಮಾಹಿತಿ ಕಲೆ ಹಾಕಿದ್ದರು. ಇದರ ಬೆನ್ನಲೇ ತನಿಖೆ ಚುರುಕುಗೊಂಡಿದ್ದು, ಜಿಲ್ಲಾಡಳಿತ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಕ್ರಮ ಆಗುವುದೊ, ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.
* ಸಭೆಗಳಲ್ಲೂ ಗದ್ದಲ
ಅನಧಿಕೃತ ಅಸ್ತಿಗಳಿಗೆ ಇ&ಸ್ವತ್ತು ನೀಡಿರುವ ಬಗ್ಗೆ ಸಭೆಗಳಲ್ಲೂ ಸಹ ಸದಸ್ಯರು ವ್ಯಾಪಕ ಚರ್ಚೆ ನಡೆಸಿದ್ದರು, ಸುಧೀರ್ ಚರ್ಚೆಯಾಗಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಶಿಾರಸ್ಸು ಮಾಡಲು ಸದಸ್ಯರು ಒತ್ತಾಯ ಮಾಡಿದ್ದರು.