

ಶಿವಮೊಗ್ಗ: ದಸರಾ ಮುಗಿದ ಬಳಿಕ ಇ-ಸ್ವತ್ತು ಪಡೆಯಲು ಸಾರ್ವಜನಿಕರು ಸ್ವಯಂ ಇಲ್ಲವೇ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಭರವಸೆ ನೀಡಿದ್ದಾರೆ.
ಮಂಗಳವಾರ ನಾಗರಿಕ ಹಿತರಕ್ಷಣಾ ವೇದಿಕೆಗಳ ಪದಾಧಿಕಾರಿಗಳೊಂದಿಗೆ ಪಾಲಿಕೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಇ-ಸ್ವತ್ತು ಪಡೆಯಲಯ ಇರುವ ಸಮಸ್ಯೆ ಹಾಗೂ ಪರಿಹಾರಗಳ ಕುರಿತು ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಉಂಟಾಗುತ್ತಿರುವ ಅಡೆತಡೆಗಳು, ತಾಂತ್ರಿಕ ಸಮಸ್ಯೆಗಳ ಬಗ್ಗೆ ವಿವರಿಸಿದರು.
ಶಿವಮೊಗ್ಗ ಮತ್ತು ಮಂಗಳೂರು ನಗರ ಪಾಲಿಕೆಗಳು ಇತ್ತೀಚಿನವರೆಗೆ ಓಯಸಿಸ್ ಸಾಫ್ಟ್‌ವೇರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. 2016ರಲ್ಲೇ ಇ-ಸ್ವತ್ತು ನೀಡುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿದ್ದರೂ ಶಿವಮೊಗ್ಗದಲ್ಲಿ ಅದು ಕಾರ್ಯಗತವಾಗಿರಲಿಲ್ಲ. ಈಗ ರಾಜ್ಯ ಸರ್ಕಾರದ ಪ್ರತ್ಯೇಕವಾದ ಸಾಫ್ಟ್‌ವೇರ್ ಅಳವಡಿಕೆ ಮಾಡಿದೆ. ಇದರಿಂದ ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ನಾನು ಆಯುಕ್ತನಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಶಿವಮೊಗ್ಗ ಪಾಲಿಕೆಯಿಂದ 9 ಸಾವಿರ ಆಸ್ತಿಗಳಿಗೆ ಇ-ಸ್ವತ್ತು ನೀಡಲಾಗಿತ್ತು. ಈಗ 21 ಸಾವಿರ ಆಸ್ತಿಗಳಿಗೆ ನೀಡಲಾಗಿದೆ. ಎಲ್ಲ ವಲಯ ಕಚೇರಿಗಳೂ ಸೇರಿ ವಾರಕ್ಕೆ ಸುಮಾರು ಒಂದು ಸಾವಿರ ಆಸ್ತಿಗೆ ಇ-ಸ್ವತ್ತು ಮಾಡಲಾಗುತ್ತಿದೆ. ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಲಾಗಿದೆ. ಗಣೇಶ ಚತುರ್ಥಿ ಹಾಗೂ ದಸರಾ ಉತ್ಸವದಲ್ಲಿ ಅಧಿಕಾರಿಗಳು ಒತ್ತಡದಲ್ಲಿದ್ದಾರೆ. ಹೀಗಾಗಿ ಸ್ವಲ್ಪ ಸಮಸ್ಯೆಯಾಗಿರುವುದು ನಿಜ. ದಸರಾ ಬಳಿಕ ನಾಗರಿಕರು ನೇರವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ನಾಗರಿಕ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್ ಮಾತನಾಡಿ, ಶಿವಮೊಗ್ಗದಲ್ಲಿ ಇದುವರೆಗೆ ಕೇವಲ 20,251 ಇ-ಸ್ವತ್ತು ಮಾತ್ರ ನೀಡಲಾಗಿದೆ. ಭದ್ರಾವತಿಯಲ್ಲಿ 29,900 ನೀಡಿದ್ದಾರೆ. ತುಮಕೂರು, ಹುಬ್ಬಳ್ಳಿಯ ಅಂಕಿ ಅಂಶ ನೋಡಿದರೆ ಶಿವಮೊಗ್ಗ ಬಹಳ ಹಿಂದಿದೆ. ನಾಗರಿಕರು ನೇರವಾಗಿ ಅರ್ಜಿ ಸಲ್ಲಿಸಲೂ ಅವಕಾಶವಿಲ್ಲ. ಪಾಲಿಕೆಗೆ ಬಂದು ಅರ್ಜಿ ಸಲ್ಲಿಸಬೇಕೆಂಬ ನಿರೀಕ್ಷೆ ಸರಿಯಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಇ ಸ್ವತ್ತು ಪಡೆಯಲು ಆಸ್ತಿ ಮಾಲೀಕರು ಸ್ವತಃ ಅರ್ಜಿ ಸಲ್ಲಿಸಿದರೆ ಇಸಿ ಲಗತ್ತಿಸಬೇಕು ಎಂದು ಪಾಲಿಕೆ ಸಿಬ್ಬಂದಿ ಹೇಳುತ್ತಾರೆ. ಆದರೆ ನಗರ ಪಾಲಿಕೆಯಲ್ಲೇ ಅರ್ಜಿ ಸಲ್ಲಿಸಿದರೆ ಇಸಿ ಅಗತ್ಯವಿಲ್ಲ ಎಂದು ಅದೇ ಸಿಬ್ಬಂದಿ ಹೇಳುತ್ತಿರುವುದು ಆಶ್ಚರ್ಯವಾಗಿದೆ. ಆಸ್ತಿ ಮಾಲೀಕರು ನೇರವಾಗಿ ಅರ್ಜಿ ಸಲ್ಲಿಸುವಾಗಲೂ ಇಸಿ ಸಲ್ಲಿಕೆಯಿಂದ ವಿನಾಯಿತಿ ನೀಡಲು ರಾಜ್ಯ ಸರ್ಕಾರ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.
ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳು, ಪಾಲಿಕೆ ಸಿಬ್ಬಂದಿ ಈ ಸಂದರ್ಭದಲ್ಲಿದ್ದರು.