ಕಟ್ಟಡ, ನಿವೇಶನ ಸ್ವತ್ತುಗಳಿಗೆ ಇ-ಖಾತಾ ಸೌಲಭ್ಯ

dc
ಇ-ಆಸ್ತಿ ಅಭಿಯಾನ ಕುರಿತು ನಗರಪಾಲಿಕೆ, ನಗರಾಭಿವೃದ್ಧಿಕೋಶ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸಭೆ ನಡೆಸಿದರು. ಕೆ.ರಂಗಸ್ವಾಮಿ, ಡಾ. ಕವಿತಾ ಯೋಗಪ್ಪನವರ್ ಇತರರಿದ್ದರು.
Published on

ಶಿವಮೊಗ್ಗ: ನಗರಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಅಧಿಕೃತ, ಅನಧಿಕೃತ ಹಾಗೂ ಕಂದಾಯ ಜಾಗದಲ್ಲಿ ನಿರ್ಮಿಸಿರುವ ಕಟ್ಟಡ, ನಿವೇಶನ ಸ್ವತ್ತುಗಳಿಗೆ ಇ-ಆಸ್ತಿ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಇ-ಆಸ್ತಿ ಅಭಿಯಾನ ಕುರಿತು ನಗರಪಾಲಿಕೆ, ನಗರಾಭಿವೃದ್ಧಿ ಕೋಶ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿದ ಅವರು, ಕರ್ನಾಟಕ ಪೌರಸಭೆಗಳ ತೆರಿಗೆ ನಿಯಮ-2025 ಮತ್ತು ಕರ್ನಾಟಕ ಮಹಾನಗರಪಾಲಿಕೆ ತೆರಿಗೆ ನಿಯಮ-2025 ಜಾರಿಗೆ ತಂದಿದ್ದು ಇದರಂತೆ ಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಎ-ಖಾತಾ ಮತ್ತು ಬಿ-ಖಾತಾ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಅನಧಿಕೃತ ಬಡಾವಣೆಗಳ ನಿವೇಶನ ಇಲ್ಲವೇ ಕಟ್ಟಡಗಳಿಗೆ ಬಿ-ಖಾತೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಇಂತಹ ಆಸ್ತಿಗಳ ಮಾಲೀಕರು ತಮ್ಮ ವ್ಯಾಪ್ತಿಯ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ನಿಗದಿತ ದಾಖಲೆಗಳನ್ನು ಸಲ್ಲಿಸಿ ಇ-ಖಾತೆ ಪಡೆಯಬಹುದು ಎಂದು ತಿಳಿಸಿದರು.

ಇ-ಖಾತೆ ಮಾಡಿಸುವಲ್ಲಿ ಇಸಿ ಪಡೆಯಲು ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿರುವುದು ಕಂಡುಬಂದಿದೆ. ಆದ್ದರಿಂದ ಇಸಿಗೆ ಅರ್ಜಿ ಸಲ್ಲಿಸಿದ 3 ದಿನಗಳೊಳಗೆ ಹಾಗೂ ಗರಿಷ್ಠ ಒಂದು ವಾರದೊಳಗೆ ಇಸಿ ನೀಡಬೇಕು. ಹಾಗೂ ಆಸ್ತಿ ಮಾಲೀಕರ ವ್ಯವಹಾರದ ನಂತರದ ಒಂದು ವರ್ಷದ ಇಸಿ ಹಾಗೂ ಆನ್‌ಲೈನ್ ಇಸಿ ಪರಿಗಣಿಸಬೇಕು. ಮಧ್ಯವರ್ತಿಗಳಿಗೆ ಅವಕಾಶ ನೀಡದೆ ಇಸಿ ಪಡೆಯಲು ಸಮರ್ಪಕವಾದ ಮಾಹಿತಿಯನ್ನು ಮಾಲೀಕರಿಗೆ ನೀಡಬೇಕು ಎಂದು ಸೂಚಿಸಿದರು.

ದೂರುಗಳು ಬಾರದಂತೆ ಎಚ್ಚರಿಕೆ ವಹಿಸಿ, ಇ-ಖಾತಾ ಅಭಿಯಾನವನ್ನು ಕೈಗೊಳ್ಳಬೇಕು. ಅಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಎ-ಖಾತೆ, ಬಿ-ಖಾತೆ ಪಡೆಯುವ ಕುರಿತು ಜನದಟ್ಟಣೆ ಇರುವೆಡೆ ಫ್ಲೆಕ್ಸ್, ಕಸದ ವಾಹನ ಹಾಗೂ ಆಟೋಗಳ ಮೂಲಕ ಪ್ರಚಾರ ನಡೆಸಬೇಕು. ಕರಪತ್ರಗಳನ್ನು ಹಂಚಬೇಕು. ಸಹಾಯವಾಣಿ ಆರಂಭಿಸಬೇಕು ಎಂದರು.

ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಹಾಗೂ ಎಲ್ಲ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net