

ಬೆಂಗಳೂರು: ಬಹುಕೋಟಿ ಬಿಟ್ ಕಾಯಿನ್ ಪ್ರಕರಣದಲ್ಲಿ ಸಾಕ್ಷಾೃಧಾರ ನಾಶಪಡಿಸಿದ ಆರೋಪದ ಮೇಲೆ ಡಿವೈಎಸ್‌ಪಿ ಶ್ರೀಧರ್ ಪೂಜಾರ ಅವರನ್ನು ಸಿಐಡಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿದೆ.
ಕೆಂಪೇಗೌಡನಗರ ಠಾಣೆಯಲ್ಲಿ 2020ರಲ್ಲಿ ದಾಖಲಾಗಿದ್ದ ಮಾದಕ ದ್ರವ್ಯ ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಅಧಿಕಾರಿಗಳು, ಹ್ಯಾಕರ್ ಶ್ರೀಕಿ ಸೇರಿ ಇತರ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಎಲೆಕ್ಟ್ರಾನಿಕ್ ಉಪಕರಣಗಳಾದ ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್, ಹಾರ್ಡ್‌ಡಿಸ್ಕ್, ಪೆನ್‌ಡ್ರೈವ್ ಇತರ ವಸ್ತುಗಳನ್ನು ಟ್ಯಾಂಪರ್ ಮಾಡಿದ ಆರೋಪದ ಮೇಲೆ ಕಾಟನ್‌ಪೇಟೆ ಠಾಣೆಯಲ್ಲಿ ಶ್ರೀಧರ್ ಪೂಜಾರ ಸೇರಿ ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಸೋಮವಾರ ವಿಚಾರಣೆಗೆ ಬರುವಂತೆ ಡಿವೈಎಸ್‌ಪಿ ಶ್ರೀಧರ್ ಪೂಜಾರಿಗೆ ಎಸ್‌ಐಟಿ ನೋಟಿಸ್ ಜಾರಿ ಮಾಡಿತ್ತು. ಸಿಐಡಿ ಆವರಣದಲ್ಲಿ ಇರುವ ಎಸ್‌ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ತನಿಖೆಗೆ ಸ್ಪಂದಿಸದ ಆರೋಪದ ಮೇಲೆ ಡಿವೈಎಸ್‌ಪಿ ಶ್ರೀಧರ್ ಪೂಜಾರ ಅನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಹಿಂದೆ ಪೂಜಾರಿ ವಿರುದ್ಧ ವಿಚಾರಣೆಗೆ ಸಹಕರಿಸದೇ ತಲೆಮರೆಸಿಕೊಂಡ ಹಿನ್ನೆಲೆ ವಿಚಾರಣಾ ನ್ಯಾಯಾಲಯದಿಂದ ಘೋಷಿತ ಆರೋಪಿ ಎಂದು ವಾರಂಟ್ ಜಾರಿ ಮಾಡಲಾಗಿತ್ತು. ವಾರಂಟ್ ಪ್ರಶ್ನಿಸಿ ಶ್ರೀಧರ್ ಪೂಜಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್ ಘೋಷಿತ ಆರೋಪಿ ಆದೇಶವನ್ನು ರದ್ದುಪಡಿಸಿತ್ತು.
ಇದೇ ಕೇಸಿನಲ್ಲಿ ಈ ಹಿಂದೆ ತುಮಕೂರಿನ ಕಡೂರು ಪೊಲೀಸ್ ತರಬೇತಿ ಕೇಂದ್ರದ ಇನ್‌ಸ್ಪೆಕ್ಟರ್ ಲಕ್ಷ್ಮೀಕಾಂತಯ್ಯ, ಡಿ.ಎಂ. ಪ್ರಶಾಂತ್ ಬಾಬು ಮತ್ತು ಸೈಬರ್ ತಜ್ಞ ಸಂತೋಷ್ ಬಂಧನಕ್ಕೆ ಒಳಗಾಗಿದ್ದರು. ಇದೀಗ ಜಾಮೀನು ಪಡೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀಧರ್ ಪೂಜಾರ ಅನ್ನು ಬಂಧಿಸಲು ಎಸ್‌ಐಟಿ ಅಧಿಕಾರಿಗಳು ಹೋದಾಗ ಕಾರು ಗುದ್ದಿಸಿ ಪರಾರಿ ಆಗಿದ್ದರು. ಈ ಕುರಿತು ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.