

ವಿದ್ಯಾವಲ್ಲಭ ಶ್ರೀ ಆಶೀರ್ವಚನ -- ಯಕ್ಷಗಾನ ಸೆಂಟರ್ನ ದ್ವಾರಪೂಜೆ
ವಿಜಯವಾಣಿ ಸುದ್ದಿಜಾಲ ಉಡುಪಿ
ಯಾವುದೇ ಲಾಪೇೆಯಿಲ್ಲದೆ ನಿಸ್ವಾರ್ಥದಿಂದ ಮಾಡಿದ ಕೆಲಸಕ್ಕೆ ಭಗವಂತನೇ ಫಲ ನೀಡುತ್ತಾನೆ. ಭಗವದ್ಗೀತೆಯಲ್ಲೂ ಸಹ ಶ್ರೀಕೃಷ್ಣ ಇದನ್ನೇ ಹೇಳಿದ್ದಾನೆ ಎಂದು ಉಡುಪಿ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದರು.
ಉಡುಪಿಯ ಶಾರದಾ ಮಂಟಪ ರಸ್ತೆ ಮಾರ್ಗದಲ್ಲಿ ಇನ್ಫೋಸಿಸ್ ಫೌಂಡೇಷನ್ ಸಹಕಾರದಲ್ಲಿ ಯಕ್ಷಗಾನ ಕಲಾರಂಗ ಸ್ಥಾಪಿಸಿರುವ ಯಕ್ಷಗಾನ ಡೆವೆಲೆಪ್ಮೆಂಟ್, ಟ್ರೇನಿಂಗ್ ಆ್ಯಂಡ್ ರಿಸರ್ಚ್ ಸೆಂಟರ್ (ಐವೈಸಿ)ನ ನೂತನ ಕಟ್ಟಡಕ್ಕೆ ಭಾನುವಾರ ದ್ವಾರಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.
ಶ್ರೀಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರು ಮಾತನಾಡಿ, ಮನರಂಜನೆಯೊಂದಿಗೆ ದೇವರ ಅನುಗ್ರಹ ಲಭಿಸುವ ಕಲೆ ಯಕ್ಷಗಾನ. ದಕ್ಷಿಣದಲ್ಲಿ ತೆಂಕು, ಉತ್ತರದಲ್ಲಿ ಬಡಗು ತಿಟ್ಟು ಇಟ್ಟುಕೊಂಡು ಮಧ್ಯದಲ್ಲಿ ಇರುವ ಉಡುಪಿಯು ಯಕ್ಷಗಾನದ ನೆಲೆಯಾಗಿದೆ. ಈ ಭವ್ಯ ಭವನದಲ್ಲಿ ಯಕ್ಷಗಾನ ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯ ಯಕ್ಷಗಾನ ಕಲಾರಂಗದಿಂದ ಆಗಲಿ. ಯಕ್ಷಗಾನ ಬೆಳೆಯಲಿ ಎಂದು ಹಾರೈಸಿದರು.
ಶೀರೂರು ಮಠದ ವೇದವರ್ಧನ ಶ್ರೀಗಳು ಮಾತನಾಡಿ, ಕಲೆಯ ರಕ್ಷಣೆ, ಬಡಜನರ ಸೇವೆಯೊಂದಿಗೆ ಸಾಂಸ್ಕೃತಿಕ, ಸಾಮಾಜಿಕ ಕಾರ್ಯ ಮಾಡುತ್ತಿರುವ ಯಕ್ಷಗಾನ ಕಲಾರಂಗವು ಇತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ್ ರಾವ್ ಸ್ವಾಗತಿಸಿದರು. ಯುವ ಭಾಗವತ ವರುಣ್ ಉಪಾಧ್ಯ ಗಣಪತಿ ಸ್ತುತಿ ಹಾಡಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಗಣೇಶ್ ರಾವ್, ಉಪಾಧ್ಯಕ್ಷ ವಿ.ಜಿ. ಶೆಟ್ಟಿ, ಯಕ್ಷಗಾನ ಮೇಳಗಳ ಅಧ್ಯಕ್ಷ ಪಿ.ಕಿಶನ್ ಹೆಗ್ಡೆ ಶ್ರೀಗಳಿಗೆ ಫಲ ಸಮರ್ಪಣೆ ಮಾಡಿದರು. ವಿದ್ವಾನ್ ಸುಬ್ರಹ್ಮಣ್ಯ ಭಟ್ ಪೌರೋಹಿತ್ಯ ವಹಿಸಿದ್ದರು.
ಉಡುಪಿ ಶ್ರೀಕೃಷ್ಣ ಮಠದಿಂದ ಪರ್ಯಾಯ ಮಠಾಧೀಶ ಪುತ್ತಿಗೆ ಸುಗುಣೇಂದ್ರ ಶ್ರೀ ಹಾಗೂ ಸುಶೀಂದ್ರ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಹಾಗೂ ಯಕ್ಷಗಾನ ಪರಿಕರಗಳೊಂದಿಗೆ ನೂತನ ಭವನದ ಪ್ರವೇಶ ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷ ಗಂಗಾಧರ್ ರಾವ್ ಯಕ್ಷಗಾನ ಪೆಟ್ಟಿಗೆ ಹೊತ್ತು ಬಂದರೆ, ಮುರಳಿ ಕಡೆಕಾರ್ ಶ್ರೀಕೃಷ್ಣನ ಮೂರ್ತಿ ಹಾಗೂ ಪದಾಧಿಕಾರಿಗಳು ತಾಳೆ, ಗಂಟೆ, ಹಿಮ್ಮೇಳದ ಮ್ದಳೆ, ಚಂಡೆ, ಯಕ್ಷಗಾನ ಪುಸ್ತಕ, ಕೀರೀಟ ಹಾಗೂ ಪೋಷಾಕುಗಳನ್ನು ತಂದು ಭವನದ ವೇದಿಕೆಯಲ್ಲಿ ಪ್ರದರ್ಶನಕ್ಕೆ ಇಟ್ಟರು.
ಶ್ರೀಕೃಷ್ಣನ ಅನುಗ್ರಹ, ಸಂಸ್ಥೆಯ 35ಕ್ಕೂ ಹೆಚ್ಚು ಪದಾಧಿಕಾರಿಗಳ ಪರಿಶ್ರಮ, ದಾನಿಗಳ ಪ್ರೋತ್ಸಾಹ, ಸಹೃದಯಿಗಳ ಸಹಕಾರದಿಂದ ಯಕ್ಷಗಾನ ಕಲಾರಂಗದ ಭವ್ಯ ಭವನ ನಿರ್ಮಾಣ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ವಾರಕ್ಕೊಂದು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತಿಸಲಾಗಿದೆ. ಮುರಳಿ ಕಡೆಕಾರ್.ಕಾರ್ಯದರ್ಶಿ, ಯಕ್ಷಗಾನ ಕಲಾರಂಗ, ಉಡುಪಿ