ಮಾ.22ರ 'ಜನತಾ ಕರ್ಫ್ಯೂ' ದಿನದಂದು ಸಂಜೆ 5ಗಂಟೆಗೆ 5 ನಿಮಿಷ ಮೀಸಲಿಡಿ...; ಪ್ರಧಾನಿ ಮೋದಿಯವರು ಹೀಗೆ ಹೇಳಿದ್ದೇಕೆ ಗೊತ್ತಾ?

Modi 19 march 20
Published on

ನವದೆಹಲಿ: ಕರೊನಾ ವೈರಸ್ ವಕ್ಕರಿಸುವ ಈ ಸಂದರ್ಭವನ್ನು ಯುದ್ಧಕ್ಕೆ ಹೋಲಿಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಸಾಮಾಜಿಕ ಅಂತರ(ಸೋಷಿಯಲ್​ ಡಿಸ್ಟನ್ಸ್​) ಕಾಯ್ದುಕೊಳ್ಳಿ ಎಂದು ಜನರಿಗೆ ಕರೆ ನೀಡಿದ್ದಾರೆ. ಹಾಗೇ ಆದಷ್ಟು ಮನೆಯಿಂದ ಹೊರಬರುವುದನ್ನು ನಿಲ್ಲಿಸಿ ಎಂದೂ ಸಲಹೆ ನೀಡಿದ್ದಾರೆ.

ಕರೊನಾ ವೈರಸ್​ ಪಸರಿಸುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಮಾ.22, ಭಾನುವಾರ ಮುಂಜಾನೆ 7ಗಂಟೆಯಿಂದ ರಾತ್ರಿ 9ಗಂಟೆವರೆಗೆ 'ಜನತಾ ಕರ್ಫ್ಯೂ'ಗೆ ಕರೆ ನೀಡಿದ್ದಾರೆ. ಅವತ್ತು ಒಂದು ದಿನದ ಮಟ್ಟಿಗೆ ಯಾರೂ ಮನೆಯಿಂದ ಹೊರಬರಬೇಡಿ. ಈ ಜನತಾ ಕರ್ಫ್ಯೂ ಬಗ್ಗೆ ಇಂದಿನಿಂದಲೇ ನಿಮ್ಮ ಸುತ್ತಲಿನ 10 ಜನರಿಗೆ ಅರಿವು ಮೂಡಿಸಿ. ನಿರ್ಲಕ್ಷ್ಯದಿಂದ ಇರದೆ, ನಮಗೆ ನಾವೇ ಸಂಯಮ ವಹಿಸಿಕೊಂಡು ಮನೆಯಿಂದ ಹೊರಬರುವುದನ್ನು ಬಿಡಬೇಕು. ಜನತಾ ಕರ್ಫ್ಯೂಗೆ ಪ್ರತಿ ನಾಗರಿಕನೂ ಕಡ್ಡಾಯವಾಗಿರಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮಾ.22ರಂದು (ಭಾನುವಾರ) ದೇಶದ ನಾಗರಿಕರು ಏನು ಮಾಡಬೇಕು:
  1.  ಜನತಾ ಕರ್ಫ್ಯೂ ಮುಂಜಾನೆ 7ರಿಂದ ಪ್ರಾರಂಭವಾಗಿ ರಾತ್ರಿ 9ಗಂಟೆವರೆಗೆ ಜಾರಿಯಲ್ಲಿರುತ್ತದೆ. ಆ ಸಮಯದಲ್ಲಿ ಯಾರೂ ರಸ್ತೆಗಳಿಗೆ ಇಳಿಯಬಾರದು. ಸಾರ್ವಜನಿಕ ಸ್ಥಳಗಳಿಗೆ ತೆರಳದೆ, ತಮ್ಮತಮ್ಮ ಮನೆಯಲ್ಲೇ ಇರಬೇಕು.
  2. ಕಳೆದ ಎರಡು ತಿಂಗಳುಗಳಿಂದ ಕರೊನಾ ವೈರಸ್​ ಬಾಧಿಸುತ್ತಿದ್ದರೂ ಲಕ್ಷಾಂತರ ಜನರು ಹಗಲು-ರಾತ್ರಿ ಸೇವೆ ಸಲ್ಲಿಸಿದ್ದಾರೆ. ಆಸ್ಪತ್ರೆಗಳಲ್ಲಿ, ವಿಮಾನನಿಲ್ದಾಣಗಳಲ್ಲಿ ಕೆಲಸ ಮಾಡುವವರು, ಪೌರ ಕಾರ್ಮಿಕರು, ಪೊಲೀಸರು, ಯೋಧರು, ಪ್ಯಾರಾಮೆಡಿಕಲ್​ ಸಿಬ್ಬಂದಿ ತಮ್ಮ ಆರೋಗ್ಯ, ಜೀವವನ್ನು ಪಣಕ್ಕಿಟ್ಟು ದುಡಿಯುತ್ತಿದ್ದಾರೆ. ಅವರಿಗೆಲ್ಲ ನಾವು ಮಾ.22ರಂದು ಕೃತಜ್ಞತೆ ಸಲ್ಲಿಸಬೇಕು. ಅಂದು ಸಂಜೆ 5ಗಂಟೆ ಹೊತ್ತಿಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಕಿಟಕಿ, ಬಾಗಿಲು ಅಥವಾ ಬಾಲ್ಕನಿ, ಟೆರೇಸ್​ಗಳಿಗೆ ಬಂದು 5 ನಿಮಿಷಗಳ ಕಾಲ ಚಪ್ಪಾಳೆ ತಟ್ಟುವ, ಗಂಟೆ ಬಾರಿಸುವ ಅಥವಾ ಬೆಲ್ ಮಾಡುವ ಮೂಲಕ ಅವರಿತವಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಬೇಕು.
  3. ಪೊಲೀಸ್​, ಮಾಧ್ಯಮಗಳು, ವೈದ್ಯಕೀಯ ಸಿಬ್ಬಂದಿ, ಅಗ್ನಿಶಾಮಕದಳದಂತಹ ಅಗತ್ಯ ಸೇವಾ ಕೆಲಸದಲ್ಲಿರುವವರಿಗೆ 22ರಂದು ಜಾರಿಯಾಗುವ ಜನತಾ ಕರ್ಫ್ಯೂ ಅನ್ವಯ ಆಗುವುದಿಲ್ಲ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net