

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ದೀಪಾಲಂಕಾರ ಈ ವರ್ಷ ಇನ್ನಷ್ಟು ಸುಂದರಗೊಳಿಸಲು ಪ್ರಾಯೋಜಕರು ಸೂಕ್ತ ಸಲಹೆ, ಸಹಕಾರ ನೀಡುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಕೋರಿದರು.
ಮೈಸೂರು ದಸರಾ ಮಹೋತ್ಸವದ-2024ರ ದೀಪಾಲಂಕಾರ ಸಮಿತಿ ವತಿಯಿಂದ ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ಸೆಸ್ಕ್ ಕಚೇರಿಯಲ್ಲಿ ಬುಧವಾರ ವಿವಿಧ ಸಂಘ-ಸಂಸ್ಥೆಗಳು, ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು ಹಾಗೂ ಇತರ ಪ್ರಾಯೋಜಕರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಕಳೆದ ಬಾರಿಗಿಂತ ಈ ಬಾರಿಯ ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಬೇಕೆಂದು ಸಿಎಂ ಈಗಾಗಲೇ ಉನ್ನತ ಮಟ್ಟದ ಸಭೆಯಲ್ಲಿ ಸೂಚಿಸಿದ್ದಾರೆ. ಹಾಗಾಗಿ ಈ ಬಾರಿ ದಸರಾ ದೀಪಾಲಂಕಾರವನ್ನು ಆಕರ್ಷಣೀಯ ಹಾಗೂ ವಿನೂತನವಾಗಿಸಲು ಚಿಂತನೆ ನಡೆಸಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಸೆಸ್ಕ್ ತಾಂತ್ರಿಕ ನಿರ್ದೇಶಕ ಮುನಿಗೋಪಾಲ್ ರಾಜು, ಕಳೆದ 3-4 ವರ್ಷಗಳಿಂದ ದಸರಾ ದೀಪಾಲಂಕಾರಕ್ಕೆ ವಿಶೇಷ ಮೆರುಗು ನೀಡುವ ಮೂಲಕ ಆಕರ್ಷಣೆ ಹೆಚ್ಚುವಂತೆ ಮಾಡಲಾಗಿದೆ. ಈ ವರ್ಷ ವಿಜೃಂಭಣೆಯ ದಸರಾ ಆಚರಣೆಗೆ ಸರ್ಕಾರ ನಿರ್ಧರಿಸಿದೆ. ದೀಪಾಲಂಕಾರವನ್ನು ಇನ್ನಷ್ಟು ಆಕರ್ಷಕವಾಗಿಸಲು ರೂಪುರೇಷ ಸಿದ್ಧಪಡಿಸಲಾಗುತ್ತಿದೆ. ರಸ್ತೆ ಹಾಗೂ ವೃತ್ತಗಳಲ್ಲಿ ದೀಪಾಲಂಕಾರ ಮಾಡಲಿರುವ ಪ್ರಾಯೋಜಕರು ಯಾವ ಪರಿಕಲ್ಪನೆಯಲ್ಲಿ ದೀಪಾಲಂಕಾರ ಮಾಡುತ್ತಾರೆ ಎಂಬುದನ್ನು ಮೊದಲೇ ತಿಳಿಸಬೇಕು ಎಂದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ದಸರಾ ದೀಪಾಲಂಕಾರಕ್ಕೆ ಸಂಬಂಧಿಸಿದಂತೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕಿದೆ. ಇದರಿಂದಾಗಿ ಅವರಿಂದ ಹೊಸ ಆಲೋಚನೆಗಳು ದೊರೆಯಲಿದ್ದು, ದಸರಾ ದೀಪಾಲಂಕಾರ ಆಕರ್ಷಣೀಯಗೊಳಿಸಲು ಸಹಾಯವಾಗಲಿದೆ ಎಂದರು.
ದಸರಾ ದೀಪಾಲಂಕಾರದ ಆಕರ್ಷಣೆ ಹೆಚ್ಚಿಸುವುದರೊಂದಿಗೆ ಜನರ ಸುರಕ್ಷತೆಗೂ ಆದ್ಯತೆ ನೀಡಬೇಕೆಂದು ಚರ್ಚಿಸಲಾಯಿತು. ಸಂಘ, ಸಂಸ್ಥೆಗಳು, ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು, ಪ್ರಾಯೋಜಕರು, ವಿದ್ಯುತ್ ಗುತ್ತಿಗೆದಾರರು ದೀಪಾಲಂಕಾರವನ್ನು ಆಕರ್ಷಣೀಯಗೊಳಿಸುವ ಕುರಿತಾಗಿ ಸಲಹೆಗಳನ್ನು ನೀಡಿದರು.
ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ನಿರ್ದೇಶಕಿ ಜಿ.ಶೀಲಾ ಮಾತನಾಡಿ, ಈ ಬಾರಿಯ ದಸರೆಯನ್ನು ವಿಭಿನ್ನ ಮತ್ತು ವಿಜೃಂಭಣೆಯಿಂದ ಆಚರಿಸಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ದೀಪಾಲಂಕಾರವನ್ನು ಉತ್ತಮವಾಗಿಸಲು ಎಲ್ಲ ಪ್ರಯತ್ನಗಳು ನಡೆದಿವೆ. ಇದಕ್ಕೆ ಪ್ರಾಯೋಜಕರು ಹೆಚ್ಚಿನ ಸಹಕಾರ ನೀಡಿದರೆ ದೀಪಾಲಂಕಾರವನ್ನು ಹೆಚ್ಚು ಆಕರ್ಷಣೀಯವಾಗಿಸಬಹುದು ಎಂದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ರಮೇಶ್, ಸೆಸ್ಕ್ ಅಧಿಕಾರಿಗಳಾದ ಹಣಕಾಸು ನಿರ್ದೇಶಕ ಶೇಖ್ ಮಹೀಮುಲ್ಲಾ, ಅಧೀಕ್ಷಕ ಇಂಜಿನಿರ್ ಸುನೀಲ್ ಕುಮಾರ್ ಹಾಗೂ ವಿವಿಧ ಸಂಘ-ಸಂಸ್ಥೆಗಳು, ಕೈಗಾರಿಕೆಗಳ ಪ್ರಮುಖರು ಭಾಗವಹಿಸಿದ್ದರು.