

ಭದ್ರಾವತಿ: ನಾಡಹಬ್ಬ ದಸರಾ ಮಹೋತ್ಸವವನ್ನು 50 ಲಕ್ಷ ರೂ. ವೆಚ್ಚದಲ್ಲಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ನಗರಸಭೆ ಆಯುಕ್ತ ಕೆ.ಎನ್.ಹೇಮಂತ್ ತಿಳಿಸಿದರು.
ನಗರಸಭೆ ಸಭಾಂಗಣದಲ್ಲಿ ದಸರಾ ಮಹೋತ್ಸವ ಆಚರಣೆ ಸಿದ್ಧತೆಗಾಗಿ ವಿವಿಧ ದೇವಾಲಯಗಳು, ಸಂಘ ಸಂಸ್ಥೆಗಳ ಮುಖಂಡರೊಂದಿಗೆ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದರು.
ಅಂದಿನ ಕಾಲದಲ್ಲಿ ರಾಜಮಹಾರಾಜರು ಆಚರಿಸಿದರೆ ಈಗ ಸರ್ಕಾರದಿಂದ ಆಚರಿಸಲಾಗುತ್ತಿದೆ. ತಹಸೀಲ್ದಾರ್ ಅವರು ಇಲ್ಲಿ ರಾಜನ ಪಾತ್ರ ವಹಿಸುತ್ತಾರೆ. ಅವರೇ ಬನ್ನಿ ಮುಡಿಯುವ ಕಾರ್ಯ ನೆರವೇರಿಸುತ್ತಾರೆ. ಅಂದು ಅವರು ದೇವಸ್ಥಾನಕ್ಕೆ ಬಂದು ಕಂಕಣ ಧರಿಸಿ ಉಪವಾಸ ಇರಬೇಕು. ಸಂಜೆ ಗೌರವಯುತವಾಗಿ ಅವರನ್ನು ಬನ್ನಿ ಮುಡಿಯುವ ಸ್ಥಳಕ್ಕೆ ಕರೆತರಲಾಗುತ್ತದೆ. ಆ ಸಮಯದಲ್ಲಿ ಬಹಳಷ್ಟು ಜನ ಸುತ್ತುವರಿಯುವುದರಿಂದ ಸಂಪ್ರದಾಯ ಪಾಲನೆ ಮಾಡಲು ಆಗುವುದಿಲ್ಲ. ಹಾಗಾಗಿ ಬನ್ನಿ ಮುಡಿಯುವ ಸಮಯದಲ್ಲಿ ಜನರನ್ನು ನಿರ್ಬಂಧಿಸಿದರೆ ಸಹಾಯವಾಗುತ್ತದೆ ಹಳೇನಗರದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಅರ್ಚಕ ರಂಗನಾಥ್ ಶರ್ಮ ಮನವಿ ಮಾಡಿದರು.
ಸಂಜೆ ದಸರಾ ಮೆರವಣಿಗೆ ಕನಿಷ್ಠ 4 ಗಂಟೆಗಾದರೂ ಆರಂಭವಾಗಬೇಕು. ಮಂಗಳ ವಾದ್ಯಗಳು ಇರಬೇಕು. ಸೂರ್ಯಾಸ್ತದ ಒಳಗೆ ಬನ್ನಿ ಮುಡಿಯಬೇಕು. ಆದರೆ ರಾತ್ರಿ 7-8 ಗಂಟೆ ಆಗುತ್ತದೆ ಎಂದರು.
ವಿಶ್ವ ಹಿಂದು ಪರಿಷತ್ ಪ್ರಾಂತ ಕಾರ್ಯಕಾರಿಣಿ ಸದಸ್ಯ ಹಾ.ರಾಮಪ್ಪ ಮಾತನಾಡಿ, ದಸರಾ ಉತ್ಸವ ಪ್ರಾರಂಭವಾದ ಇತಿಹಾಸ ಸ್ಮರಿಸಿದರು. ದೇವರುಗಳಿಗೆ ಅಲಂಕಾರ ಮಾಡಲು ನಗರಸಭೆಯಿಂದ ನೀಡುವ ಹಣವನ್ನು ಹೆಚ್ಚಿಗೆ ಮಾಡಬೇಕು ಎಂದು ಒತ್ತಾಯಿಸಿದರು.
ನಗರಸಭೆ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ದಸರಾ ಹಬ್ಬದ ಆಚರಣೆಯನ್ನು ನಗರಸಭೆಯ ಆದಾಯದಲ್ಲಿ ಆಚರಣೆ ಮಾಡಲಾಗುತ್ತಿದೆ. ಇದನ್ನು ಗಮನಿಸಿ ಸಹಕಾರ ನೀಡಿ ಎಂದರು. ಮೆರವಣಿಗೆಯಲ್ಲಿ ಭಾಗವಹಿಸುವ ದೇವರುಗಳಿಗೆ ತಲಾ 2 ಸಾವಿರ ರೂ.ಗಳನ್ನು ಶಾಸಕರ ಪರವಾಗಿ ನೀಡುವುದಾಗಿ ಪ್ರಕಟಿಸಿದರು.
ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾ ರಾಜಕುಮಾರ್, ಉಪಾಧ್ಯಕ್ಷ ಮಣಿ, ವಿ.ಕದಿರೇಶ್, ಸುದೀಪ್, ಬಿ.ಎಂ.ಮಂಜುನಾಥ್, ಸೈಯದ್ ರಿಯಾಜ್, ಉದಯ್‌ಕುಮಾರ್, ಚನ್ನಪ್ಪ, ಸರ್ವಮಂಗಳಮ್ಮ ಇತರರಿದ್ದರು.