

ಬೆಂಗಳೂರು: ದೇಶಾದ್ಯಂತ ಜಾರಿಗೊಳಿಸಿರುವ ರೀತಿಯಲ್ಲಿ ಬೆಂಗಳೂರಿನಲ್ಲೂ ಕೋವಿಡ್-19 ಲಾಕ್ಡೌನ್ ಜಾರಿಯಲ್ಲಿದೆ. ಲಾಕ್ಡೌನ್ 1 ಮತ್ತು ಲಾಕ್ಡೌನ್ 2 ಅವಧಿಯಲ್ಲಿ ಜನ, ವಾಹನ ಸಂಚಾರಕ್ಕೆ ನಿರ್ಬಂಧ ಇತ್ತು. ಲಾಕ್ಡೌನ್ 3ರ ಅವಧಿಯಲ್ಲಿ ಕೂಡ ಅಗತ್ಯವಸ್ತುಗಳನ್ನು ಬಿಟ್ಟು ಅನಗತ್ಯವಸ್ತುಗಳ ಮಾರಾಟಕ್ಕೂ ನಿರ್ಬಂಧವಿತ್ತು.
ಆದರೆ, ಲಾಕ್ಡೌನ್ 4.0 ಜಾರಿಗೆ ಬರುತ್ತಲೇ ನಿರ್ಬಂಧಗಳು ಸಡಿಲಗೊಳ್ಳಲು ಆರಂಭವಾಯಿತು. ಅನಗತ್ಯವಸ್ತುಗಳ ಮಾರಾಟಕ್ಕೂ ಅವಕಾಶ ಲಭಿಸಲಾರಂಭಿಸಿತು. ಈ ಅವಕಾಶ ಸಿಕ್ಕಿದ್ದೇ ತಡ. ಬೆಂಗಳೂರಿನ ಉದ್ಯೋಗಸ್ಥ ದಂಪತಿ ಮೊಟ್ಟ ಮೊದಲಿಗೆ ಡಿಶ್ ವಾಷರ್ಗಳ ಖರೀದಿಗೆ ಮುಗಿಬಿದ್ದಿದ್ದಾರೆ!
ಕಾರಣ, ಲಾಕ್ಡೌನ್ ಅವಧಿಯಲ್ಲಿ ಕೊರೊನಾ ಸೋಂಕು ಹರಡುವ ಭೀತಿಯಲ್ಲಿ ಉದ್ಯೋಗಸ್ಥ ದಂಪತಿಗಳು ತಮ್ಮ ಮನೆಗೆಲಸದವರಿಗೆ ಕೆಲಸಕ್ಕೆ ಬಾರದಂತೆ ನಿರ್ಬಂಧಿಸಿದ್ದರು. ಇದರಿಂದಾಗಿ ಮನೆಯ ಕಸ, ಮುಸುರೆ ಎಲ್ಲವನ್ನೂ ದಂಪತಿಯೇ ಮಾಡಬೇಕಾಗುತ್ತಿತ್ತು. ತಿಂಡಿ, ಊಟ ಆದಮೇಲೆ ಕೆಲವೊಮ್ಮೆ ತಟ್ಟೆ, ಲೋಟ, ಪಾತ್ರೆಗಳನ್ನು ತೊಳೆಯುವ ಬಗ್ಗೆ ದಂಪತಿಗಳಲ್ಲಿ ಜಗಳಗಳು, ಹುಸಿಮುನಿಸುಗಳು ಆಗುತ್ತಿದ್ದವು. ಇಂಥ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಅವರೆಲ್ಲರೂ ಈಗ ಡಿಶ್ವಾಷರ್ ಖರೀದಿಗೆ ಮುಗಿಬೀಳುತ್ತಿದ್ದಾರೆ.
ಡಿಶ್ವಾಷರ್ನ ಬೇಸಿಕ್ ಮಾಡೆಲ್ಗೆ 20ರಿಂದ 22 ಸಾವಿರ ರೂ. ಇದೆ. ಅದೇ ಬ್ರ್ಯಾಂಡೆಡ್ ಆಗಿದ್ದು, ಸ್ವಲ್ಪ ಹೆಚ್ಚಿನ ಸೌಲಭ್ಯಗಳನ್ನು ಒಳಗೊಂಡಿರುವ ಡಿಶ್ವಾಷರ್ಗಳ ಬೆಲೆ ಕನಿಷ್ಠ 35 ಸಾವಿರ ರೂ.ನಿಂದ ಗರಿಷ್ಠ 65 ಸಾವಿರ ರೂ.ವರೆಗೂ ಇದೆ. ಆದರೂ ಜನರು ತಮ್ಮ ತಮ್ಮ ಆರ್ಥಿಕ ಸ್ಥಿತಿಗತಿ ಆಧರಿಸಿ, ಡಿಶ್ವಾಷರ್ಗಳನ್ನು ಖರೀದಿಸುತ್ತಿದ್ದಾರೆ. ಒಂದು ಮೂಲದ ಪ್ರಕಾರ ಕೆಲದಿನಗಳಿಂದ ಡಿಶ್ವಾಷರ್ನ ಬೇಡಿಕೆಯಲ್ಲಿ ಶೇ.70ರಿಂದ 80 ಹೆಚ್ಚಳವಾಗಿದೆಯಂತೆ.
ಡಿಶ್ವಾಷರ್ಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಹಾಗಾಗಿ, ಅಡುಗೆಮನೆಯಲ್ಲಿ ಅವುಗಳ ಗಾತ್ರಕ್ಕೆ ತಕ್ಕಂತೆ ಜಾಗದ ವ್ಯವಸ್ಥೆ ಮಾಡುವುದು ತುಸು ಕಷ್ಟವೇ. ಆದರೂ ಮಧ್ಯಮ ವರ್ಗದವರು ಕೂಡ ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಡಿಶ್ವಾಷರ್ಗಳನ್ನು ಖರೀದಿಸುತ್ತಿದ್ದು, ಅಡುಗೆಮನೆಯಲ್ಲಿ ಅವುಗಳಿಗಾಗಿ ಸ್ಥಳಾವಕಾಶ ಮಾಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಿಶ್ವಾಷರ್ಗಳು ಲಾಕ್ಡೌನ್ ಅವಧಿಯಲ್ಲಿ ಒಂದು ರೀತಿ ವಾಷಿಂಗ್ಮಷಿನ್ಗಳಷ್ಟೇ ಅಗತ್ಯವಸ್ತು ಎನಿಸಿಕೊಂಡಿದೆ. ಹಾಗಾಗಿ ಜನರು ಡಿಶ್ವಾಷರ್ಗಳನ್ನು ಖರೀದಿಸುತ್ತಿರುವುದಾಗಿ ವರ್ತಕರು ಅಭಿಪ್ರಾಯಪಟ್ಟಿದ್ದಾರೆ.