ಯುದ್ಧನೀತಿಯಂತೆ ಸಮಾನಾಯುಧಗಳ ದ್ವಂದ್ವಯುದ್ಧ

ವಿಜಯವಾಣಿ (15)
Published on

ಶ್ರೀವಸಿಷ್ಠರು ಶ್ರೀರಾಮನಿಗೆ ಯುದ್ಧವನ್ನು ವರ್ಣಿಸುತ್ತಿದ್ದಾರೆ. ಮಂಡ ಪೋಪಾಖ್ಯಾನದಲ್ಲಿ ಈ ಯುದ್ಧ ಬಂದಿದೆ. ಮಂಡಪೋಪಾಖ್ಯಾನದ ಮುಖ್ಯ ವ್ಯಕ್ತಿಯಾಗಿರುವ ಲೀಲಾಮಹಾರಾಣಿಯ ಪತಿಯಾಗಿದ್ದ ಪದ್ಮಮಹಾರಾಜನು ಮರಣಹೊಂದಿದ್ದು, ಅವನೇ ಈಗ ಮುಂದಿನ ಜನ್ಮದಲ್ಲಿ ಹುಟ್ಟಿಬಂದು ವಿದೂರಥನೆಂಬ ಚಕ್ರವರ್ತಿಯಾಗಿದ್ದಾನೆ. ಅವನ ಸಾಮಂತರಲ್ಲಿ ಕೆಲವರು ಅವನ ವಿರುದ್ಧ ತಿರುಗಿ ಬಿದ್ದಿದ್ದರಿಂದ ಯುದ್ಧ ನಡೆಯುತ್ತಿದೆ. ಈ ಯುದ್ಧವನ್ನು ಲೀಲಾಮಹಾರಾಣಿಯು ಸೂಕ್ಷ್ಮರೂಪದಿಂದ ಬಂದು ಆಕಾಶದಲ್ಲಿದ್ದುಕೊಂಡು ಯುದ್ಧವನ್ನು ನೋಡುತ್ತಿದ್ದಾಳೆ.

ಶ್ರೀವಸಿಷ್ಠರು ಯುದ್ಧವನ್ನು ಬೇರೆ ಬೇರೆ ಮುಖಗಳಿಂದ ವರ್ಣಿಸುತ್ತಿದ್ದಾರೆ. ಈ ಹಿಂದೆ ಯುದ್ಧವನ್ನು ಸಮುದ್ರದ ಹೋಲಿಕೆಯೊಂದಿಗೆ ಮತ್ತು ಪ್ರಳಯಕಾಲದ ಹೋಲಿಕೆಯೊಂದಿಗೆ ವರ್ಣಿಸಿದ್ದಾರೆ. ಇದೀಗ ಯುದ್ಧರಂಗದ ಪರಿಸ್ಥಿತಿ ಸಾಕಷ್ಟು ಬದಲಾಗಿದೆ, ಸೈನಿಕರ ಸಂಖ್ಯೆ ಕಡಿಮೆಯಾಗಿದೆ, ಅಲ್ಲಲ್ಲಿ ಶರೀರಗಳು ರಾಶಿಯಾಗಿ ಬಿದ್ದಿವೆ, ರಕ್ತದ ಮಡುಗಳು ನಿರ್ಮಾಣ ವಾಗಿವೆ, ಬಾಣಗಳ ರಾಶಿಗಳು ಮತ್ತು ವಿವಿಧ ಆಯುಧಗಳು ತುಂಬಿಕೊಂಡಿವೆ, ಭೀರುಗಳಾಗಿರುವ ಸೈನಿಕರು ಯುದ್ಧರಂಗದಿಂದ ಪಲಾಯನಗೈದಿದ್ದಾರೆ. ಈಗ ಉಳಿದಿರುವವರು ನಿಜವಾಗಿ ವೀರರು, ಪಲಾಯನಗೊಳ್ಳುವವರಲ್ಲ, ಅಲ್ಲದೇ ಯುದ್ಧದ ನೀತಿಯನ್ನು ಹೆಚ್ಚು ಅನುಸರಿಸುವವರು. ಹಾಗಾಗಿ ಎರಡೂ ಪಕ್ಷಗಳಲ್ಲಿರುವ ಸರಿಸಾಟಿಯಾದ ಮತ್ತು ಸಮಾನ ಆಯುಧವುಳ್ಳ ಯೋಧರಲ್ಲಿ ದ್ವಂದ್ವಯುದ್ಧ ಪ್ರಾರಂಭವಾಗಿದೆ. ದ್ವಂದ್ವಯುದ್ಧಕ್ಕೆ ವಿಶೇಷವಾದ ನೀತಿ-ನಿಯಮಗಳುಂಟು. ಸಮಾನವಾದ ಆಯುಧ ಧಾರಿಗಳು ಸಮಾನವಾದ ಆಯುಧವನ್ನು ಹಿಡಿದವನ ಜೊತೆ ಮಾತ್ರವೇ

ದ್ವಂದ್ವಯುದ್ಧ ಮಾಡುತ್ತಾರೆ. ಉದಾಹರಣೆಗೆ ಗದೆಯನ್ನು ಧರಿಸಿದವನು ಇನ್ನೊಬ್ಬ ಗದಾಧಾರಿಯ ಜೊತೆ ಮಾತ್ರವೇ ಗದಾಯುದ್ಧ ಮಾಡುತ್ತಾನೆ, ಖಡ್ಗಧಾರಿಯ ಜೊತೆಗೆ ಅಲ್ಲ. ಹಳೇ ಕಾಲದ ಯುದ್ಧಗಳಲ್ಲಿ ಈ ರೀತಿಯ ನೀತಿಗಳನ್ನು ಅತ್ಯಂತ ದುಷ್ಟರಾದವರೂ ಅನುಸರಿಸುತ್ತಿದ್ದರು. ಪ್ರಕೃತದಲ್ಲಿ ಶ್ರೀವಸಿಷ್ಠರು ದ್ವಂದ್ವಯುದ್ಧ ವನ್ನು ವರ್ಣಿಸುತ್ತಿದ್ದಾರೆ. ‘ಶ್ರೀರಾಮ! ದ್ವಂದ್ವ ಯುದ್ಧಕ್ಕೆ ಇಳಿದ ಯೋಧರನ್ನು ನೋಡಿದರೆ ಗರ್ಜಿಸುತ್ತಿರುವ ಮೇಘಗಳಂತೆ ಕಾಣುತ್ತಿದೆ. ಒಬ್ಬರು ಇನ್ನೊಬ್ಬರನ್ನು ನುಂಗುತ್ತಾರೋ ಎನ್ನುವ ಹಾಗೆ ದುರುಗುಟ್ಟಿಕೊಂಡು ನೋಡುತ್ತಾ ಆಕ್ರಮಣ ಮಾಡುತ್ತಿದ್ದಾರೆ. ಎರಡು ನದಿಗಳ ಪ್ರವಾಹಗಳು ಒಂದೆಡೆ ಸೇರುವಂತೆ ವೀರರು ವೈರಿಸೇನೆಯಲ್ಲಿರುವ ಸೈನಿಕರೊಡನೆ ತೀವ್ರವಾದ ಘರ್ಷಣೆಯನ್ನು ಪ್ರಾರಂಭಿಸಿದರು. ಒಂದು ಸಿಂಹವು ಇನ್ನೊಂದು ಸಿಂಹವನ್ನು ಆಕ್ರಮಿಸುವಂತೆ, ಒಂದು ಆನೆಯ ಹಿಂಡು ಇನ್ನೊಂದು ಆನೆಯ ಹಿಂಡನ್ನು ಆಕ್ರಮಿಸುವಂತೆ, ವನಗಳಿಂದ ತುಂಬಿದ ಒಂದು ಗುಡ್ಡವು ಇನ್ನೊಂದು ಗುಡ್ಡವನ್ನು ಆಕ್ರಮಿಸುವಂತೆ ಬಲಪ್ರಯೋಗದೊಂದಿಗೆ ಎರಡು ಸೇನೆಗಳು ಮುಖಾಮುಖಿಯಾದವು.’

‘ಇದೇವೇಳೆಗೆ ಅಶ್ವಾರೋಹಿಗಳ ಸಮೂಹವು ವೈರಿಸೈನ್ಯದಲ್ಲಿರುವ ಅಶ್ವಾರೋಹಿ ಸಮೂಹದೊಂದಿಗೆ ಮುಖಾಮುಖಿಯಾಯಿತು. ವೇಗ ದೊಂದಿಗೆ ಮತ್ತು ತೀವ್ರ ಶಬ್ದದೊಂದಿಗೆ ಆ ಎರಡು ಅಶ್ವಾರೋಹಿಗಳು ಪರಸ್ಪರ ಆಕ್ರಮಣ ಮಾಡಿದವು. ಶಬ್ದ ಮಾಡುತ್ತಾ ಹಾರಿ ಬರುತ್ತಿರುವ ತರಂಗಗಳ ಒಂದು ಸಮೂಹವು ಇನ್ನೊಂದು ಅಷ್ಟೇ ತೀವ್ರ ವಾದ ತರಂಗ ಸಮೂಹವನ್ನು ಸಮುದ್ರದಲ್ಲಿ ಆಕ್ರಮಿಸುವಂತೆ ಆ ದೃಶ್ಯ ಕಂಡುಬರುತ್ತಿತ್ತು.’ ‘ಪದಾತಿ ಸೈನಿಕರ ಸಮೂಹವು ವೈರಿ ಸೇನೆಯಲ್ಲಿರುವ ಸಮಾನ ಆಯುಧಧಾರಿ ಗಳಾದ ಪದಾತಿ ಸಮೂಹದೊಂದಿಗೆ ಯುದ್ಧ ಪ್ರಾರಂಭಿಸಿತು. ಗಾಳಿಯಿಂದ ತಲ್ಲಣಗೊಂಡ ಬಿದಿರಿನ ದೊಡ್ಡಹಿಂಡು ಅದೇರೀತಿ ತಲ್ಲಣ ಗೊಂಡಿರುವ ಇನ್ನೊಂದು ಬಿದಿರಿನ ಹಿಂಡಿನೊಂದಿಗೆ ಬಡಿದಾಡುತ್ತಿರುವಂತೆ ಕಾಣು ತ್ತಿತ್ತು.

ಇನ್ನೊಂದೆಡೆ ರಥಾರೋಹಿಗಳ ಸಮೂಹವು (ಅನೇಕ ರಥಗಳು) ಶತ್ರುಸೇನೆಯ ರಥಾರೋಹಿಗಳ ಸಮೂಹ ಗಳಲ್ಲೇ ತೀವ್ರವಾದ ಘರ್ಷಣೆಗೆ ತೊಡಗಿತು. ಒಂದು ರಥಾರೋಹಿಗಳ ಸಮೂಹವು ಇನ್ನೊಂದು ರಥಾರೋಹಿಗಳ ಸಮೂಹದ ಸಂಪೂರ್ಣ ಸಮೂಹವನ್ನೇ ಪುಡಿ ಪುಡಿ ಮಾಡಿತು. ಇದು ಆಕಾಶದಲ್ಲಿ ನಿಂತಿರುವ ಅಸುರರ ನಗರವನ್ನು ದೇವತೆಗಳ ನಗರವು ಬಡಿದು ಪುಡಿ ಮಾಡುವಂತೆ ಕಾಣುತ್ತಿತ್ತು.’ ‘ಇನ್ನೊಂದೆಡೆ ಧನುರ್ಧಾರಿಗಳ ಗುಂಪುಗಳು ಯುದ್ಧಮಾಡುತ್ತಿದ್ದವು. ನಿರಂತರ ಬಾಣಗಳ ಭಾರವನ್ನೇ ಆಕಾಶದಲ್ಲಿ ಪ್ರಯೋಗಿಸಿದ್ದರಿಂದ ಹಿಂದೆಂದೂ ಕಾಣದ ಹೊಸ ಮೋಡ ಆಕಾಶದಲ್ಲಿ ಸೃಷ್ಟಿಯಾದಂತೆ ಕಾಣುತ್ತಿತ್ತು. ಬಾಣಗಳ ಮೋಡದಿಂದ ಆಕಾಶವು ಆಚ್ಛಾದಿಸಲ್ಪಟ್ಟಿತ್ತು. ಈ ಹಿಂದೆ ನಡೆಯುತ್ತಿದ್ದ ವಿಷಮಾಯುಧಯುದ್ಧ (ಎಲ್ಲರೀತಿಯ ಆಯುಧಗಳನ್ನು ಧರಿಸಿದವರೊಡನೆಯೂ ಯುದ್ಧ)ಗಳಲ್ಲಿ ರಣಹೇಡಿ

ಗಳಾದ ಯೋಧರು ತಮಗೆ ಸಿಕ್ಕ ಸುಲಭ ಉಪಾಯಗಳಲ್ಲಿ ತಪ್ಪಿಸಿ ಕೊಂಡು ಓಡಿ ಹೋಗುತ್ತಿದ್ದರು. ಈಗ ಅವರೆಲ್ಲಾ ಹೊರಟು ಹೋಗಿದ್ದರಿಂದ ಸಮಾಯುಧಯುದ್ಧ ನಡೆಯುತ್ತಿದೆ.’ ‘ಈ ಸಮಾಯುಧ ಯುದ್ಧದಲ್ಲಿ ಚಕ್ರಾಯುಧಗಳನ್ನು ಧರಿಸಿದವರು ಚಕ್ರಧಾರಿಗಳೊಡನೆ, ಧನುರ್ಧಾರಿಗಳು ಧನುರ್ಧಾರಿಗಳೊಡನೆ, ಖಡ್ಗಧಾರಿಗಳು ಖಡ್ಗಧಾರಿಗಳೊಡನೆ, ಭುಶುಂಡಿ(ಒಂದು ಆಯುಧ) ಧಾರಿಗಳು ಭುಶುಂಡಿ ಧಾರಿಗಳೊಡನೆ, ಮುಸಲಧಾರಿಗಳು ಮುಸಲಧಾರಿ ಗಳೊಡನೆ, ಕುಂತಾಯುಧಧಾರಿಗಳು ಕುಂತಾಯುಧಧಾರಿಗಳೊಡನೆ, ಋಷ್ಟಿ ಆಯುಧಗಳನ್ನು ಧರಿಸಿದವರು ಋಷ್ಟಿ ಆಯುಧ ಧರಿಸಿದವ ರೊಡನೆ, ಈಟಿಯನ್ನು ಧರಿಸಿದವರು ಈಟಿಧಾರಿಗಳೊಡನೆ, ಮುದ್ಗರ ಧಾರಿಗಳು ಮುದ್ಗರಧಾರಿಗಳೊಡನೆ, ಶಕ್ತಿಧಾರಿಗಳು ಶಕ್ತಿಧಾರಿಗಳೊ ಡನೆ, ಶೂಲವಿಶಾರದರು ಶೂಲಧಾರಿಗಳೊಡನೆ, ಈಟಿಯನ್ನು ಎಸೆ ಯುವುದರಲ್ಲಿ ನಿಪುಣರಾದವರು ಅದೇರೀತಿ ನಿಪುಣರಾದವರ ಜೊತೆ, ಪರಶುಧಾರಿಗಳು ಪರಶುಧಾರಿಗಳೊಡನೆ, ಲಕುಟ(ಬಿದಿರಿನ ವಿಶಿಷ್ಟವಾದ ದಂಡ)ಧಾರಿಗಳು ಲಕುಟಧಾರಿಗಳೊಡನೆ, ಉಪಲ(ಶಿಲೆಯ ಆಯುಧ) ಧಾರಿಗಳು ಉಪಲಧಾರಿಗಳೊಡನೆ, ಪಾಶ(ಹಗ್ಗದಂತಹ ಆಯುಧ) ಧಾರಿಗಳು ಪಾಶಧಾರಿ ಸೇನೆಯೊಡನೆ, ಶಂಕು(ಒಂದುವಿಧದ ಚಿಕ್ಕ ಆಯುಧ)ಧಾರಿಗಳು ಶಂಕುಧಾರಿಗಳೊಡನೆ, ಕ್ಷುರಿಕ(ಸಣ್ಣ ಕತ್ತಿ)ಧಾರಿಗಳು ಕ್ಷುರಿಕಧಾರಿಗಳೊಡನೆ, ಭಿಂದಿಪಾಲಧಾರಿಗಳು ಭಿಂದಿಪಾಲಧಾರಿಗಳೊಡನೆ, ವಜ್ರಮುಷ್ಟಿ (ಮಲ್ಲಯುದ್ಧದಲ್ಲಿ ಮಲ್ಲರು ಕೈಗೆ ಹಾಕಿ ಕೊಳ್ಳುವ ಲೋಹಮಯವಾದ ಕೀಲಕವುಳ್ಳ ಆಯುಧ)ಧಾರಿಗಳು ವಜ್ರಮುಷ್ಟಿಧಾರಿಗಳೊಡನೆ, ಅಂಕುಶಧಾರಿಗಳು ಅಂಕುಶ ಯುದ್ಧಕುಶಲರಾದ ವರೊಡನೆ, ಹಲಾಯುಧದಿಂದ ತಿವಿಯುವ ನಿಪುಣತೆಯುಳ್ಳವರು ಹಲಾಯುಧಧಾರಿಗಳೊಂದಿಗೆ, ತ್ರಿಶೂಲಧಾರಿಗಳು ತ್ರಿಶೂಲಧಾರಿಗಳೊಡನೆ ಯುದ್ಧಮಾಡತೊಡಗಿದರು.

ಅಲ್ಲದೇ ದುಂಬಿಯಂತೆ ಮೃದು ಕಪ್ಪು ಹೊಳಪಿನ ಕಬ್ಬಿಣದ ಕವಚಗಳನ್ನು ಧರಿಸಿದವರು ಅದೇ ರೀತಿ ಕವಚಗಳನ್ನು ಧರಿಸಿದವರೊಡನೆ ಸಮಾನ ಆಯುಧಧಾರಿಗಳಾಗಿ ಯುದ್ಧಮಾಡುತ್ತಿದ್ದರು. ಕಲ್ಪಾಂತ್ಯದಲ್ಲಿ ಕ್ಷೋಭೆಗೊಳಪಟ್ಟ ಸಮುದ್ರಗಳ ಭಯಂಕರ ಅಲೆಗಳಂತೆ ಭಯಹುಟ್ಟಿಸುವ ರೀತಿಯಲ್ಲಿ ಯುದ್ಧಮಾಡುತ್ತಿದ್ದರು. (ಇಲ್ಲಿ ಒಂದೇಕಡೆಯಲ್ಲಿ ಪ್ರಾಚೀನಕಾಲದ ವಿವಿಧ ಆಯುಧಗಳ ಪಟ್ಟಿ ಕೊಟ್ಟಿರುವುದು ತುಂಬಾ ವಿಶೇಷವಾಗಿದೆ.)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net