ವಾಣಿಜ್ಯ ಬೆಳೆಗಳತ್ತ ಆಸಕ್ತಿ, ಆಹಾರ ಉತ್ಪಾದನೆಗೆ ಕುತ್ತು

Story 1
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ರೈತರು ಆಹಾರ ಧಾನ್ಯಗಳ ಉತ್ಪಾದನೆಗಿಂತ ವಾಣಿಜ್ಯ ಬೆಳೆಗಳ ಕಡೆ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ರಾಜ್ಯದಲ್ಲಿ ಆಹಾರ ಧಾನ್ಯದ ಕೊರತೆ ಉಂಟಾಗಬಹುದೇ? ಎಂಬ ಆತಂಕ ಹುಟ್ಟುಹಾಕಿದೆ. ಕಳೆದೊಂದು ದಶಕಗಳ ಅವಧಿಯಲ್ಲಿ ಆಹಾರ ಧಾನ್ಯಗಳನ್ನು ಬೆಳೆಯುವ ಕೃಷಿ ಪ್ರದೇಶ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತ ಬರುತ್ತಿದೆ. ಇದು ಉತ್ಪಾದನೆ ಮೇಲೂ ಪರಿಣಾಮ ಉಂಟುಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆ ಬಿಗಡಾಯಿಸಬಹುದೆನ್ನ ಲಾಗುತ್ತಿದೆ.ಭತ್ತ, ಜೋಳ, ರಾಗಿಯಂತಹ ಬೆಳೆಗಳು ಲಾಭ ತರುವ ಬೆಳೆಗಳಲ್ಲ ಎಂಬ ಭಾವನೆ ರೈತರಲ್ಲಿ ಮನೆ ಮಾಡಲಾರಂಭಿಸಿದೆ. ಆದ್ದರಿಂದಲೇ ಅಡಕೆ, ಹತ್ತಿ, ಸೋಯಾಬಿನ್, ಮೆಕ್ಕೆಜೋಳದಂತಹ ಬೆಳೆಗಳ ಕಡೆ ರೈತ ವರ್ಗ ಗಮನ ಕೇಂದ್ರೀಕರಿಸುತ್ತಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರೈತರು ವಾಣಿಜ್ಯ ಬೆಳೆಗಳಿಂದ ಮಾತ್ರ ಹಣ ನೋಡಬಹುದೆಂಬ ಮಹದಾಶಯ ಹೊಂದಿದ್ದಾರೆ. ಇದು ಆಹಾರದ ಲಭ್ಯತೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬುದು ಕೃಷಿ ತಜ್ಞರ ಅಭಿಪ್ರಾಯ.

ಎಷ್ಟು ಕಡಿಮೆ?: ಸರ್ಕಾರಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ ಕಳೆದ ವರ್ಷದಲ್ಲಿ ಸುಮಾರು 8 ಲಕ್ಷ ಹೆಕ್ಟೇರ್ ಜೋಳ , ಅಂದಾಜು 2 ಲಕ್ಷ ಹೆಕ್ಟೇರ್ ರಾಗಿ , 50 ಸಾವಿರ ಹೆಕ್ಟೇರ್​ಗೂ ಹೆಚ್ಚು ಭತ್ತ ಬಿತ್ತನೆ ಪ್ರದೇಶ ಕಡಿಮೆಯಾಗಿವೆ. ಅದೇ ಪ್ರಮಾಣದಲ್ಲಿಯೇ ಕೃಷಿ ಬೆಳೆಗಳ ಬಿತ್ತನೆ ಪ್ರದೇಶ ಕುಸಿತವಾಗುತ್ತಿದೆ.

ಹೆಚ್ಚಾಗಿರುವುದು: ಮೆಕ್ಕೆಜೋಳ 7 ಲಕ್ಷ ಹೆಕ್ಟೇರ್ ಹೆಚ್ಚಾಗಿದ್ದರೆ, ಮಲೆನಾಡಿಗೆ ಸೀಮಿತವಾಗಿದ್ದ ಅಡಕೆ ಈಗ ಮಧ್ಯ ಕರ್ನಾಟಕ ಹಾಗೂ ರಾಜ್ಯದ ದಕ್ಷಿಣ ಭಾಗದಲ್ಲೂ ವ್ಯಾಪಿಸುತ್ತಿದ್ದು, ಕಳೆದ ಹದಿನೈದು ವರ್ಷಗಳಲ್ಲಿ ಶೇ.200 ಹೆಚ್ಚಾಗಿದೆ.

ಕೃಷಿ ವಿಸ್ತೀರ್ಣ ಹೆಚ್ಚಳ: ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಪ್ರದೇಶ ಹೆಚ್ಚಳವಾಗಿದೆ. ಹದಿನೈದು ವರ್ಷಗಳಲ್ಲಿ 11.38 ಲಕ್ಷ ಹೆಕ್ಟೇರ್​ನಷ್ಟು ಕೃಷಿ ಪ್ರದೇಶ ವಿಸ್ತೀರ್ಣ ಹೆಚ್ಚಾಗಿದೆ. 2005-06ರಲ್ಲಿ 111.5 ಲಕ್ಷ ಹೆಕ್ಟೇರ್ ಇದ್ದದ್ದು ಈಗ 122.92 ಲಕ್ಷ ಹೆಕ್ಟೇರ್​ಗೆ ತಲುಪಿದೆ.

ಆಹಾರ ಧಾನ್ಯ ಎಷ್ಟು ಕಡಿಮೆ?: ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 160 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಉತ್ಪಾದನೆಯಾಗುತ್ತದೆ ಎಂಬ ಅಂದಾಜು ಇದೆ. ಆದರೆ, ಈ ವರ್ಷ 114 ಲಕ್ಷ ಮೆಟ್ರಿಕ್ ಟನ್​ಗೆ ಸೀಮಿತವಾಗುತ್ತಿದೆ. ಆಹಾರ ಧಾನ್ಯಗಳ ಉತ್ಪಾದನೆ ಪ್ರದೇಶ ಕಡಿಮೆಯಾಗುತ್ತಿರುವುದರ ಜತೆಗೆ ಪ್ರವಾಹವೂ ಕಾರಣವಾಗಿರುವುದರಿಂದ ಹೆಚ್ಚು ಪ್ರಮಾಣದಲ್ಲೇ ಕಡಿಮೆಯಾಗಿದೆ.

ಆಹಾರ ಧಾನ್ಯಗಳ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿರುವ ಆತಂಕ ಇದೆ. ಅದನ್ನು ಸರಿದೂಗಿಸಲು ಸವಳು-ಜವಳು ಸರಿಪಡಿಸುವುದು ಹಾಗೂ ಅನುಪಯುಕ್ತ ಭೂಮಿಯನ್ನು ಕೃಷಿ ಬಳಕೆಗೆ ಯೋಗ್ಯವಾಗುವಂತೆ ಅಭಿವೃದ್ಧಿ ಪಡಿಸುವ ಕಡೆ ಸರ್ಕಾರ ಗಮನ ಹರಿಸಿದೆ. | ಬಿ.ಸಿ. ಪಾಟೀಲ್ ಕೃಷಿ ಸಚಿವ ಕೃಷಿ ಉತ್ಪಾದನೆ ಕುಂಠಿತವಾದರೆ ಆಹಾರದ ಕೊರತೆ ತಲೆದೋರುತ್ತದೆ. ಸರ್ಕಾರ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಕೃಷಿ ಬೆಲೆ ಆಯೋಗದ ವರದಿಯ ಶಿಫಾರಸುಗಳನ್ನು ತಕ್ಷಣದಿಂದ ಜಾರಿಗೆ ತರಬೇಕು. ಅದರ ಆಧಾರದಲ್ಲಿ ಯೋಜನೆಗಳು ಸಿದ್ಧವಾಗಬೇಕು. | ಡಾ. ಪ್ರಕಾಶ್ ಕಮ್ಮರಡಿ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ

ಕೃಷಿ ಬೆಲೆ ಆಯೋಗ ನೀಡಿದ್ದ ಸಲಹೆಗಳು

  • ಸ್ಥಳೀಯ ಬೇಡಿಕೆ, ಕೈಗಾರಿಕೆ ಕಚ್ಛಾವಸ್ತು, ವಿದೇಶಿ ರಫ್ತು ಲೆಕ್ಕ ಹಾಕಿ ಸಮಗ್ರ ಉತ್ಪಾದನಾ ನೀತಿ ರೂಪಿಸುವುದು.
  • ಆಹಾರ ಭದ್ರತೆ, ಹವಾಮಾನ ವೈಪರಿತ್ಯ, ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ವಿಕೇಂದ್ರೀಕೃತ ಬೆಲೆ ಯೋಜನೆ ಜಾರಿ.
  • ಪ್ರತಿ ಜಿಲ್ಲೆಯಲ್ಲಿ ಅಲ್ಲಿನ ಪ್ರಮುಖ ಬೆಳೆಗಳಿಗೆ ಪ್ರೋತ್ಸಾಹ
  • ಬೆಳೆ ಯೋಜನೆ ಆಧಾರದಲ್ಲಿ ಕೃಷಿ ಪರಿಸರ ವಲಯ ಸೃಷ್ಟಿ
  • ಸರ್ಕಾರದ ಹಿಡಿತದಲ್ಲಿರುವ ಪ್ರೋತ್ಸಾಹ, ರಿಯಾಯ್ತಿ, ಖರೀದಿಗಳ ಆಧಾರದಲ್ಲಿ ಉತ್ಪಾದನೆ ನಿಗದಿ

ಆಸಕ್ತಿ ಇಲ್ಲದಿರಲು ಕಾರಣ

  • ಬೆಂಬಲ ಬೆಲೆ ಸರಿಯಾಗಿ ಸಿಗದಿರುವುದು
  • ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗುವುದು
  • ಎಂಎಸ್​ಪಿಯಲ್ಲಿ ಖರೀದಿಗೆ ಷರತ್ತು
  • ಸಮಯಕ್ಕೆ ಸರಿಯಾಗಿಲ್ಲದ ಖರೀದಿ
  • ಉತ್ಪಾದನಾ ವೆಚ್ಚ ಹೆಚ್ಚಾಗಿರುವುದು

ವಾಣಿಜ್ಯ ಬೆಳೆಗಳು ಎಷ್ಟು ಜಾಸ್ತಿ?

  • ತೋಟಗಾರಿಕೆ ಬೆಳೆ 13.62 ಲಕ್ಷದಿಂದ 19.56 ಲಕ್ಷ ಹೆಕ್ಟೇರ್​ಗೆ
  • ಮಸಾಲೆ ಪದಾರ್ಥಗಳು 0.88 ಲಕ್ಷದಿಂದ 2 ಲಕ್ಷ ಹೆಕ್ಟೇರ್​ಗೆ
  • ಹಣ್ಣುಗಳು 2.93 ಲಕ್ಷ ಹೆಕ್ಟೇರ್​ನಿಂದ 3.35 ಲಕ್ಷ ಹೆಕ್ಟೇರ್​ಗೆ
  • ತೆಂಗು 4.93 ಲಕ್ಷ ಹೆಕ್ಟೇರ್​ನಿಂದ 6.34 ಲಕ್ಷ ಹೆಕ್ಟೇರ್​ಗೆ
  • ಅಡಕೆ 2.37 ಲಕ್ಷ ಹೆಕ್ಟೇರ್​ನಿಂದ 5.51 ಲಕ್ಷ ಹೆಕ್ಟೇರ್​ಗೆ

ಸಿರಿಧಾನ್ಯಕ್ಕಿಲ್ಲ ಪ್ರೋತ್ಸಾಹ: ಪ್ರಸಕ್ತ ವರ್ಷ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವಾಗಿದೆ. ಆದರೆ, ಕೇಂದ್ರ ಸರ್ಕಾರ ಸಿರಿಧಾನ್ಯ ಬೆಳೆಗಳಾದ ನವಣೆ, ಭಾರಗ, ಆರಕ, ಬಾರ್ಲಿಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿಲ್ಲ. ಆದ್ದರಿಂದ ರೈತರಿಗೆ ಈ ಬೆಳೆಗಳ ಬಗ್ಗೆ ಆಸಕ್ತಿಯೇ ಇಲ್ಲದಂತಾಗಿದೆ. ಸುಮಾರು 40 ಸಾವಿರ ಹೆಕ್ಟೇರ್​ನಲ್ಲಿ ಮಾತ್ರ ಈ ಉತ್ಪನ್ನಗಳನ್ನು ಬೆಳೆಯಲಾಗುತ್ತಿದೆ. ಎಂಎಸ್​ಪಿ ನಿಗದಿ ಮಾಡಿ, ಖರೀದಿ ಮಾಡಿದರೆ ಈ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಲು ರೈತರು ಮುಂದಾಗಬಹುದೆಂದು ಹೇಳಲಾಗುತ್ತಿದೆ.

ಎಂಎಸ್​ಪಿ ಎಂಬ ಮಾಯಾಜಾಲ

  • ಉತ್ತರ ಕರ್ನಾಟಕದಲ್ಲಿ ಪ್ರಮುಖ ಬೆಳೆ ಜೋಳ. ಇಲ್ಲಿನ ಮಾಲದಂಡಿ ಜೋಳ ಹಿಂಗಾರು ಬೆಳೆ. ಮಾರುಕಟ್ಟೆಯಲ್ಲಿ 3500 ರಿಂದ 4000 ರೂ. ಬೆಲೆ ಇರುತ್ತದೆ. ಕೇಂದ್ರ ಸರ್ಕಾರ ಮುಂಗಾರಿಗೆ ಮಾತ್ರ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿದೆ. ಮುಂಗಾರಿನಲ್ಲಿ ಬೆಳೆಯುವುದು ಬಿಳಿಜೋಳ. ಇದರ ದಂಡು ಸಹ ಜಾನುವಾರುಗಳಿಗೆ ಉತ್ತಮ ಮೇವು. ಹಿಂಗಾರಿಗೂ ಎಂಎಸ್​ಪಿ ಬೇಕು ಎಂಬುದು ರೈತರ ಒತ್ತಾಯ.
  • ರಾಗಿಗೆ ಎಂಎಸ್​ಪಿ 3567 ರೂ. ನಿಗದಿ ಮಾಡಲಾಗಿದೆ. ಕಳೆದ ವರ್ಷ 4.67 ಲಕ್ಷ ಟನ್ ಖರೀದಿ ಮಾಡಲಾಗಿದೆ. ಸಣ್ಣ, ಅತಿಸಣ್ಣ ರೈತರಿಂದ ಮಾತ್ರ ತಲಾ 20 ಕ್ಚಿಂಟಾಲ್​ನಂತರ ಖರೀದಿ ಮಾಡಲಾಗಿದೆ. ಈಗ ಖರೀದಿ ಮಾಡಿರುವ ರಾಗಿ ಪಿಡಿಎಸ್​ನಲ್ಲಿ 9 ತಿಂಗಳು ಮಾತ್ರ ವಿತರಣೆಗೆ ಸಾಕಾಗುತ್ತದೆ. ಎಲ್ಲ ರೈತರಿಂದ ತಲಾ 30 ಕ್ವಿಂಟಾಲ್​ನಂತೆ ಖರೀದಿ ಮಾಡಿದರೆ 12 ತಿಂಗಳೂ ಪಿಡಿಎಸ್​ನಲ್ಲಿ ವಿತರಣೆ ಮಾಡಬಹುದಾಗಿದೆ ಎನ್ನುತ್ತಾರೆ ತಜ್ಞರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net