

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ ಸಾಕಷ್ಟು ವೈರಲ್ ಆಗಿ ನೋಡುಗರ ಮನಸ್ಸನ್ನು ಸೆಳೆಯುತ್ತಿದೆ.
ಹೌದು, ತನ್ನದೇ ಬೌಲ್ನಿಂದ ಆಹಾರವನ್ನು ತೆಗೆದುಕೊಂಡು ಮೀನುಗಳಿಗೆ ತಿನಿಸುವ ಬಾತುಕೋಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ.
ವಿಡಿಯೋದಲ್ಲಿ ಏನಿದೆ?: ತನ್ನ ಕಂಟೈನರ್ನಲ್ಲಿರುವ ಆಹಾರವನ್ನು ಬಾಯಿನಿಂದ ತೆಗೆದುಕೊಳ್ಳುವ ಬಾತುಕೋಳಿ ಕಂಟೈನರ್ ಕೆಳಗಿನ ನೀರಿನಲ್ಲಿರುವ ಮೀನುಗಳ ಬಾಯಿಗೆ ಆಹಾರವನ್ನು ಹಾಕುತ್ತದೆ. ಇದನ್ನು ಹಾಗೇ ಅನೇಕ ಬಾರಿ ಪುನರಾವರ್ತಿಸುತ್ತದೆ.
ಈ ವಿಡಿಯೋವನ್ನು ಎಲ್ಲಿ ಸೆರೆಹಿಡಿಯಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇದನ್ನು ಕಳೆದ ಶನಿವಾರ ಪ್ರಖ್ಯಾತ ಬ್ರೆಜಿಲಿಯನ್ ಮೀನುಗಾರರ ಫೇಸ್ಬುಕ್ ಪೇಜ್ "ಡಯಾಸ್ ಇ ನೊಯಿಟೆಸ್ ಡೆ ಪೆಸ್ಕಾ" ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಲಾಗಿದೆ.
ಈವರೆಗೂ 12 ಮಿಲಿಯನ್ಗೂ ಹೆಚ್ಚು ವಿಕ್ಷಣೆ ಪಡೆದುಕೊಂಡಿದ್ದು, 2 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಸಾವಿರಾರು ಮಂದಿ ವಿಡಿಯೋ ಮೆಚ್ಚಿ ಅಭಿಪ್ರಾಯಗಳ ಸುರಿಮಳೆಗೈದಿದ್ದಾರೆ. (ಏಜೆನ್ಸೀಸ್)