ದುಬೈ ಮಾಲ್​ ಮತ್ತೆ ಆರಂಭ, ವಿಶ್ವದ ಅತ್ಯಂತ ದೊಡ್ಡ ಮಾಲ್​ ಸ್ಥಗಿತಗೊಂಡಿದ್ದಾದರೂ ಏಕೆ?

the dubai mall
Published on

ದುಬೈ: ಕೋವಿಡ್​-19 ಭೀತಿ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಸ್ಥಗಿತಗೊಂಡಿದ್ದ ವಿಶ್ವದ ಅತಿ ದೊಡ್ಡ ಮಾಲ್​ ಎಂದೇ ಖ್ಯಾತಿ ಪಡೆದಿರುವ, ವಿಶ್ವ ಪ್ರವಾಸಿಗರ ನೆಚ್ಚಿನ ತಾಣಗಳಲ್ಲೊಂದಾದ 'ದುಬೈ ಮಾಲ್​' ಕಟ್ಟುನಿಟ್ಟಿನ ಸುರಕ್ಷತೆಯಡಿ ಮತ್ತೆ ತೆರೆದಿದೆ.

ಕೋವಿಡ್ -19 ನಿರ್ಬಂಧಗಳನ್ನು ಸಡಿಲಿಸಲು ಪ್ರಾರಂಭಿಸಿದ್ದರಿಂದ ಕೆಲ ಶರತ್ತುಗಳ ಮೇರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮಾಲ್​ ತೆರೆದಿದೆ. ಮಾಲ್​ನಲ್ಲಿ ಸದ್ಯ ಸಿನಿಮಾ, ಸ್ಕೇಟಿಂಗ್​ ರಿಂಕ್​, ಕಾರಂಜಿ ಆರಂಭವಾಗಿಲ್ಲ. ಅಲ್ಲದೆ ಮೂರು ಗಂಟೆಗೂ ಹೆಚ್ಚು ಕಾಲ ಗ್ರಾಹಕರು ಮಾಲ್​ ಒಳಗೆ ಇರುವಂತಿಲ್ಲ. 3 ರಿಂದ 12 ವರ್ಷದೊಳಗಿನ ಮಕ್ಕಳು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಹಾಗೂ ಉಸಿರಾಟದ ತೊಂದರೆ ಉಳ್ಳವರು ಮಾಲ್​ ಪ್ರವೇಶಿಸುವಂತಿಲ್ಲ ಎಂಬ ನಿಯಮ ಜಾರಿಯಲ್ಲಿದೆ.

ಮಾರ್ಚ್ 23ರಂದು ಮುಚ್ಚಲಾಗಿದ್ದ ಮಾಲ್ ಅನ್ನು ಈ ವಾರ ತೆರೆಯಲಾಗಿದ್ದು, ಗ್ರಾಹಕರು ಶಾಪಿಂಗ್ ಧಾಮಗಳಿಗೆ ಮರಳಿದ್ದಾರೆ. ವ್ಯಾಲೆಟ್ ನಿಲುಗಡೆಗಾಗಿ ಕೀ ಹಸ್ತಾಂತರಿಸುವ ವೇಳೆ ಗ್ರಾಹಕರಿಗೆ ಮಾಲ್​ನ ಸಿಬ್ಬಂದಿ​ 'ವೆಲ್​ಕಮ್ ಬ್ಯಾಕ್' ಎಂದು ಬರೆದಿರುವ ಕಪ್ಪು ಬಣ್ಣದ ಟೀ ಶರ್ಟ ನೀಡಿ ಸ್ವಾಗತಿಸುತ್ತಿದ್ದಾರೆ. ದ್ವಾರದಲ್ಲೇ ಥರ್ಮಾಮೀಟರ್​ ಮೂಲಕ ಗ್ರಾಹಕರ ತಾಪಮಾನ ಪರೀಕ್ಷಿಸಿ ಒಳಬಿಡಲಾಗುತ್ತಿದೆ.

ದೇಶದಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಮಿರೇಟ್ಸ್ ಹೇಳಿದೆ. ಆದಾಗ್ಯೂ, ಸೂಪರ್​ರ್ಮಾರ್ಕೆಟ್, ಔಷಧಾಲಯ, ದಿನಸಿ ಅಂಗಡಿಗಳು ಕಾರ್ಯ ನಿರ್ವಹಿಸಲಿವೆ.

ವಿಸ್ಮಯಗಳ ಗುಚ್ಛ ದುಬೈ ಮಾಲ್​:

ವಿಸ್ಮಯಗಳ ಗುಚ್ಛವನ್ನೇ ಒಡಲಲ್ಲಿ ಇಟ್ಟಿಕೊಂಡಿರುವ ದುಬೈ ಮಾಲ್ ಅನ್ನು​ ಮಾಯಾನಗರಿ ಎಂದೇ ಹೇಳಬಹುದು. 13 ಸಾವಿರಕ್ಕೂ ಹೆಚ್ಚು ಐಷಾರಾಮಿ ಶಾಪಿಂಗ್​ ಮಳಿಗೆ ಒಳಗೊಂಡಿರುವ ಈ ಮಾಲ್​ನಲ್ಲಿ ವಿಶಾಲವಾದ ನದಿ, ನೃತ್ಯ ಸಂಯೋಜನೆಯ ಹೊರಾಂಗಣ ಕಾರಂಜಿ, ದೈತ್ಯ ದುಬೈ ಅಕ್ವೇರಿಯಂ, 150 ರೆಸ್ಟೋರೆಂಟ್‌ಗಳಿವೆ. ಅಂಡರ್‌ವಾಟರ್ ಮೃಗಾಲಯಕ್ಕೂ ನೆಲೆಯಾಗಿದೆ. ವಿಶ್ವದ ಅತ್ಯಂತ ಎತ್ತರದ ಕಟ್ಟಡ 'ಬುರ್ಜ್ ಖಲೀಫಾ'ದ ಪಕ್ಕದಲ್ಲೇ ಇರುವ ಈ ಮಾಲ್​ಗೆ ಪ್ರತಿ ವರ್ಷ ಸುಮಾರು 8 ಕೋಟಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಡೀ ಒಂದು ದಿನವಿದ್ದರೂ ಈ ಮಾಲ್​ನ ಸೌಂದರ್ಯ, ಅಭಿವೃದ್ಧಿ ಕಣ್ತುಂಬಿಕೊಳ್ಳಲು ಆಗಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net