ಶೀಘ್ರವೇ ಬರಲಿದೆ ಉದ್ಯಮಶೀಲತಾ ಕೌಶಲಗಳ ಮೇಲೆ ಬೆಳಕು ಚೆಲ್ಲುವ ಡಿಟಿಎಚ್ ಚಾನೆಲ್

HRD JPG
Published on

ನವದೆಹಲಿ: ಯುವಜನತೆಯ ಉದ್ಯಮಶೀಲತಾ ಕೌಶಲ್ಯಗಳ ಅಭಿವೃದ್ಧಿಗೆ ಸೂಕ್ತ ವೇದಿಕೆ ಕಲ್ಪಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಎಐಸಿಟಿಇ ಸಹಯೋಗದೊಂದಿಗೆ ನಿಗದಿತ ಡಿಟಿಎಚ್ ಚಾನೆಲ್ ಅನ್ನು ಶೀಘ್ರವೇ ಆರಂಭಿಸಲಿದೆ.

ಈ ಯೋಜನೆ ಅಭಿವೃದ್ಧಿಗೊಳಿಸಲು ಪ್ರಸಾರ ಭಾರತಿಯ ಮಾಜಿ ಮುಖ್ಯಸ್ಥ ಎ ಸೂರ್ಯ ಪ್ರಕಾಶ್ ನೇತೃತ್ವದಲ್ಲಿ ಒಂಬತ್ತು ಸದಸ್ಯರ ಉನ್ನತ ಸಮಿತಿಯನ್ನು ರಚಿಸಲಾಗಿದೆ. ಶಿಕ್ಷಣದ ಸವಾಲುಗಳನ್ನು ಎದುರಿಸಲು ಕೇಂದ್ರ ಡಿಟಿಎಚ್ ಮತ್ತು ರೇಡಿಯೊ ವಿಧಾನಗಳತ್ತ ವಿಶೇಷವಾಗಿ ಗಮನಹರಿಸುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಯೋಚಿಸಲಾಗಿದೆ.

"ಯಾವುದೇ ರಾಷ್ಟ್ರದ ಪ್ರಗತಿಗೆ ನವೋನ್ವೇಷಣೆ ನಿರ್ಧಾರಕ ಅಂಶವಾಗಿದೆ. ನಾವೀನ್ಯತೆಗೆ ಮೀಸಲಾಗಿರುವ ಒಂದು ಪ್ರಮುಖ ಚಾನಲ್ ತರುವಲ್ಲಿ ಕಾರ್ಯನಿರತವಾಗಿರುವುದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ಎಐಸಿಟಿಇಯ ಉತ್ತಮ ನಡೆಯಾಗಿದೆ ಎಂದು ಎ ಸೂರ್ಯ ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.
ಮುಂದಿನ ವಾರದಿಂದಲೇ ಸಮಿತಿ ಕಾರ್ಯ ಆರಂಭಿಸುವ ನಿರೀಕ್ಷೆ ಇದೆ.

“ ದೇಶದ ಯುವ ಜನತೆಯ ಕೌಶಲ ಅಭಿವೃದ್ಧಿಗೆ ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸಬಲ್ಲ ಚಾನಲ್ ಅನ್ನು ತರುವುದು ಈ ಯೋಜನೆಯ ಉದ್ದೇಶವಾಗಿದೆ. ಇದು ದೇಶ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಹಾಗೂ ಇತ್ತೀಚಿನ ಆವಿಷ್ಕಾರ ಮತ್ತು ಸಂಶೋಧನೆಗಳ ಮೇಲೆ ಬೆಳಕು ಚೆಲ್ಲುವುದರ ಜತೆಗೆ ಯುವ ಉದ್ಯಮಿಗಳು ಮಾಡಿದ ಸಾಧನೆಗಳನ್ನು ಸಹ ತೋರಿಸುತ್ತದೆ ”ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಒನ್ ಕ್ಲಾಸ್ ಒನ್ ಚಾನೆಲ್’ ಯೋಜನೆಯಡಿ ಶಾಲಾ ಮಕ್ಕಳಿಗೆ 12 ಡಿಟಿಎಚ್ ಚಾನೆಲ್‌ಗಳನ್ನು ತರಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಕಾರ್ಯನಿರತವಾಗಿರುವಾಗಲೇ ಈ ಕ್ರಮದ ಬಗ್ಗೆಯೂ ಯೋಜಿಸಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೋವಿಡ್-19 ಪರಿಹಾರ ಪ್ಯಾಕೇಜ್‌ನಲ್ಲಿ ಒನ್ ಕ್ಲಾಸ್ ಒನ್ ಚಾನೆಲ್ ಯೋಜನೆಯನ್ನು ಉಲ್ಲೇಖಿಸಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net