

ಗದಗ: ದಲ್ಲಾಳಿ, ಮಾರುಕಟ್ಟೆಯ ಬೇಡಿಕೆ ಮುಂತಾದ ಕಾರಣಗಳಿಂದ ರೈತ ಬೆಳೆಗೆ ಸೂಕ್ತ ಮಾರುಕಟ್ಟೆ ಮೌಲ್ಯ ಲಭಿಸುವುದಿಲ್ಲ ಎಂಬ ಚರ್ಚೆಗಳು ಆಗಾಗ್ಗೇ ನಡೆಯುತ್ತಲೇ ಇರುತ್ತವೆ. ಹೀಗಿರುವಾಗ ಕಷ್ಟ ಪಟ್ಟು ಬೆಳೆದ ಬೆಳೆಗೆ ಸೂಕ್ತ ಮೌಲ್ಯ ಲಭಿಸುವಲ್ಲಿ ಮಾರುಕಟ್ಟೆಯ ಬೇಡಿಕೆ ಜತೆಗೆ ಅದೃಷ್ಟವೂ ಬೇಕೆಂದರೆ ತಪ್ಪಲ್ಲ!
ಇದೀಗ ಇಲ್ಲೊಬ್ಬರು ರೈತ ದಂಪತಿಗಳಿಗೆ ಅದೃಷ್ಟ ಒಲಿದಿದೆ. ಬೆವರು ಹರಿಸಿ ಬೆಳೆದ ಬೆಳೆಗೆ ದೊಡ್ಡ ಮೊತ್ತ ಲಭಿಸಿದ್ದು, ಗದಗ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಇದು ರೈತ ದಂಪತಿಗಳ ಮೊಗದಲ್ಲಿ ನಗು ಮೂಡಲು ಕಾರಣವಾಗಿದೆ.
ಕೊಪ್ಪಳ ಜಿಲ್ಲೆಯ ಯರೇಹಂಚಿನಾಳ ಗ್ರಾಮದ ರೈತ ಸಾವಿತ್ರಿ ಹಾಗೂ ಉಮೇಶ ರೆಡ್ಡಿ ರೈತ ದಂಪತಿಗಳು ತಮ್ಮ ಭೂಮಿಯಲ್ಲಿ ಒಣ ಮೆಣಸಿನಕಾಯಿ ಬೆಳೆದಿದ್ದರು. ಫಸಲು ಕೈಸೇರುತ್ತಿದ್ದಂತೆ ಗದಗದ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಅಶೋಕ ಟ್ರೇಡರ್ಸ್ ಮಳಿಗೆಯಲ್ಲಿ ಮಾರಾಟಕ್ಕೆ ಮುಂದಾಗಿದ್ದಾರೆ. ಇಲ್ಲಿ ಇವರ ಬೆಳೆಯನ್ನು ದಾಖಲೆ ಮೊತ್ತಕ್ಕೆ ಖರೀದಿಸಿದ್ದಾರೆ.
ರೈತ ದಂಪತಿ ಒಂದು ಕ್ವಿಂಟಲ್ ಒಣ ಮೆಣಸಿನಕಾಯಿಗೆ 72, 999 ರೂಪಾಯಿ ಬೆಲೆಗೆ ಮಾರಾಟ ಮಾಡಿದ್ದಾರೆ. ಇದೀಗ ಕೊಪ್ಪಳ ರೈತ ದಂಪತಿಗಳಾದ ಸಾವಿತ್ರಿ ಹಾಗೂ ಉಮೇಶ ರೆಡ್ಡಿ ಬೆಳೆದ ಒಣ ಮೆಣಸಿನಕಾಯಿ ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಬೆಲೆಗೆ ಮಾರಾಟವಾದ ಒಣ ಮೆಣಸಿನಕಾಯಿ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ. ದಾಖಲೆ ಬೆಲೆಗೆ ಮಾರಾಟವಾದ ಮೆಣಸಿನಕಾಯಿ ಬೆಳೆದ ರೈತ ದಂಪತಿಗಳಿಗೆ ಎಪಿಎಂಸಿಯಲ್ಲಿ ಸನ್ಮಾನ ಮಾಡಿ, ಕಳುಹಿಸಿಕೊಟ್ಟಿದ್ದಾರೆ.