

ಬೆಂಗಳೂರು: ಮದ್ಯದ ಅಮಲಿನಲ್ಲಿದ್ದ ಲಾರಿ ಚಾಲಕ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ಕಾರು, ಲಾರಿ, ಬೈಕ್ ಸೇರಿ ಎಂಟು ವಾಹನಗಳಿಗೆ ಸರಣಿ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಪ್ರಕರಣ ಬಾಣಸವಾಡಿಯ ಕಲ್ಯಾಣನಗರದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಯಲಹಂಕ ನಿವಾಸಿ ನೇಮಿರಾಜ್(೩೫) ಮೃತರು. ಕೃತ್ಯ ಎಸಗಿದ ಹಿಂದೂಪುರ ಮೂಲದ ಚಂದ್ರಶೇಖರ್(೩೭) ಎಂಬಾತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾಸನ ಮೂಲದ ನೇಮಿರಾಜ್, ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆರೇಳು ತಿಂಗಳ ಹಿಂದೆ ಕಸ್ತೂರಿನಗರದ ವಾಸವಿದ್ದ ಯುವತಿಯನ್ನು ಮದುವೆಯಾಗಿದ್ದು, ಯಲಹಂಕದಲ್ಲಿ ವಾಸವಾಗಿದ್ದರು. ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ನೇಮಿರಾಜ್ ಪತ್ನಿ ಕಸ್ತೂರಿನಗರದಲ್ಲಿರುವ ತವರು ಮನೆಗೆ ಹೋಗಿದ್ದರು. ಹೀಗಾಗಿ ಶುಕ್ರವಾರ ರಾತ್ರಿ ಪಾಳಿ ಕೆಲಸ ಮುಗಿಸಿಕೊಂಡು ತಡರಾತ್ರಿ ೧೨ ಗಂಟೆ ಸುಮಾರಿಗೆ ಪತ್ನಿ ತವರು ಮನೆ ಕಡೆ ಹೋಗುತ್ತಿದ್ದರು.
ಇದೇ ವೇಳೆ ಆರೋಪಿ ಚಂದ್ರಶೇಖರ್ ಮದ್ಯದ ಅಮಲಿನಲ್ಲಿ ಕಬ್ಬಿಣದ ಸರಳು ತುಂಬಿದ್ದ ಲಾರಿಯನ್ನು ಹಿಂದೂಪುರದಿಂದ ರಾಮಮೂರ್ತಿನಗರದಲ್ಲಿರುವ ಗೋಡೌನ್‌ಗೆ ಕೊಂಡೊಯ್ಯುತ್ತಿದ್ದಾಗ ಕಲ್ಯಾಣನಗರದಲ್ಲಿ ಅತೀ ವೇಗವಾಗಿ ಬಂದು ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಕಾರು, ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ನೇಮಿರಾಜ್, ಎದುರು ಹೋಗುತ್ತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದುಕೊಂಡಿದ್ದಾರೆ. ಅದೇ ರೀತಿ ಲಾರಿ ಕಾರು, ಮತ್ತೊಂದು ಬೈಕ್ ಸೇರಿ ೮ ವಾಹನಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ. ಘಟನೆ ವೇಳೆ ಲಾರಿ ಮತ್ತು ಕಾರಿನ ಮಧ್ಯೆ ಸಿಲುಕಿದ ನೇಮಿರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸರಣಿ ಅಪಘಾತದಲ್ಲಿ ಎಂಟು ವಾಹನಗಳು ಜಖಂಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ಕೈದು ಮಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದಾರೆ. ಘಟನೆ ಬಳಿಕ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ನಡು ರಸ್ತೆಯಲ್ಲಿ ಜಖಂಗೊಂಡು ನಿಂತಿದ್ದ ವಾಹನಗಳನ್ನು ಕೆಲ ಹೊತ್ತಿನಲ್ಲೇ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬಳಿಕ ಲಾರಿ ಚಾಲಕ ಚಂದ್ರಶೇಖರ್‌ನನ್ನು ಶನಿವಾರ ಕೋರ್ಟ್‌ಗೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆತನ ವಿರುದ್ಧ ಮದ್ಯ ಸೇವಿಸಿ ವಾಹನ ಚಾಲನೆ ಹಾಗೂ ನಿರ್ಲಕ್ಷ್ಯ ವಾಹನ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಾಣಸವಾಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.