

ಔರದ್: ಕುಡಿದ ಮತ್ತಿನಲ್ಲಿ ಜನರು ಏನೇನೋ ಮಾಡುತ್ತಾರೆ. ಬುದ್ಧಿ ಮೇಲೆ ನಿಯಂತ್ರಣವಿಲ್ಲದ ನಶೆಯಲ್ಲಿರುವವರು ತಮ್ಮನ್ನು ಅಪಾಯಕ್ಕೆ ಸಿಲುಕಿಸುವುದರ ಜತೆಗೆ ಇತರರಿಗೂ ತೊಂದರೆ ನೀಡುತ್ತಾರೆ. ಇಂತಹದೇ ಘಟನೆಯೊಂದು ಔರದ್ ನಲ್ಲಿ ಬೆಳಕಿಗೆ ಬಂದಿದೆ.
ಔರದ್ ಡಿಪೋದಿಂದ ಸರ್ಕಾರಿ ಬಸ್ಸು ಒಂದು ಗಂಟೆ ಕಳೆದರೂ ಹೊರಡಲಿಲ್ಲ ಎಂದು ಸುಮಾರು ಹೊತ್ತಿನಿಂದ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕಾಯುತ್ತಿದ್ದ. ಸೋಮವಾರ ನಡೆದ ಈ ಘಟನೆಯಲ್ಲಿ ಕುಡಿದ ಮತ್ತಿನಲ್ಲಿದ್ದ ಆ ಭೂಪ, ಡಿಪೋದಲ್ಲಿ ನಿಲ್ಲಿಸಿದ್ದ ಬಸ್ ಚಲಾಯಿಸಿದ್ದಾನೆ!
ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು. ಆರೋಪಿಯನ್ನು ಯಶಪ್ಪ ಸೂರ್ಯವಂಶಿ ಎಂದು ಗುರುತಿಸಲಾಗಿದೆ. ಈತ KSRTC ಬಸ್ಸು ಇನ್ನೇನು ಹೊರಡಲಿದೆ ಎಂದು ಕಾದು ಕೊನೆಗೆ ಬೇಸತ್ತು ಕುಡಿದ ನಶೆಯಲ್ಲೇ ಚಲಾಯಿಸಿದ್ದಾನೆ. ಈ ಸಂದರ್ಭ ಒಳಗೆ ಕುಳಿತಿದ್ದ ಪ್ರಯಾಣಿಕರು ಭಯಭೀತರಾಗಿದ್ದಾರೆ.
ಈತ ಬಸ್ಸನ್ನು ನಿಲ್ಲಿಸುವ ಮೊದಲು ಮತ್ತೊಂದು ಬಸ್ ಹಾಗೂ ಜೀಪಿಗೆ ಡಿಕ್ಕಿ ಹೊಡೆದಿದ್ದಾನೆ. ಪೊಲೀಸರು ಈತನ್ನು ಬೀದರ್ ಜಿಲ್ಲೆಯ ಕಾರಂಜಿ ನಿವಾಸಿ ಸೂರ್ಯವಂಶಿ ಎಂದು ಗುರುತಿಸಿದ್ದು ತಕ್ಷಣ ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಸೂರ್ಯವಂಶಿ ತನ್ನ ಹಳ್ಳಿಯ ಕಡೆಗೆ ಹೋಗುತ್ತಿದ್ದ. ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. (ಏಜೆನ್ಸೀಸ್)