ಮದುವೆಗೆ ಹೋಗುವುದನ್ನೇ ಮರೆತ ವರ; ಮುರಿದು ಬಿದ್ದ ವಿವಾಹದ ವೆಚ್ಚ ಭರಿಸುವಂತೆ ತಾಕೀತು ಮಾಡಿದ ವಧು!

Wedding Bihar
Published on

ಬಿಹಾರ: ಸಮಯ ಹತ್ತಿರವಾಗುತ್ತಿದ್ದರೂ ವರನ ಪತ್ತೆಯಿಲ್ಲ. ಮದುವೆ ಗಂಡಿಗಾಗಿ ಹೆಣ್ಣಿನ ಕಡೆಯವರು ಕಾದು, ಕಾದು ಸುಸ್ತಾಗಿ ಹೋಗಿದ್ದಾರೆ. ಮುಹೂರ್ತದ ಸಮಯದ ಮೀರುತ್ತಿದ್ದಂತೆ ಮದುವೆ ಮನೆಯಲ್ಲಿ ನೆರೆದಿದ್ದವರಿಗೆಲ್ಲ ಗೊಂದಲ. ಇದಕ್ಕೆ ಕಾರಣ ಮದುವೆ ಗಂಡಿನ ಅವಾಂತರ.

ಹೌದು, ಬಿಹಾರದ ಭಾಗಲ್ಪುರ ಎಂಬಲ್ಲಿ ವರನೊಬ್ಬ ಮದುವೆಗೆ ಹೋಗುವನ್ನು ಮರೆತು ಬಿಟ್ಟ ವಿಚಿತ್ರ ಘಟನೆ ನಡೆದಿದೆ. ಅಸಲಿಗೆ ಮದುವೆ ಹಿಂದಿನ ದಿನ ವರ ತನ್ನ ಸ್ನೇಹಿತರ ಜತೆ ಸೇರಿಕೊಂಡು ಮದ್ಯಪಾನ ಮಾಡಿದ್ದಾನೆ. ಮಿತಿಮೀರಿದ ಮದ್ಯಪಾನದ ಕಾರಣದಿಂದ ಎದ್ದು ನಿಲ್ಲಲು ಸಾಧ್ಯವಾಗದ ಹಂತಕ್ಕೆ ತಲುಪಿದ್ದಾನೆ. ಕೊನೆಗೆ ಅಸ್ವಸ್ಥನಾದ ವರ ತನ್ನ ಮದುವೆಗೆ ಹೋಗುವುದನ್ನೇ ಮರೆತು ಬಿಟ್ಟಿದ್ದಾನೆ.

ಸಂಭ್ರಮದಲ್ಲಿದ್ದ ಎಲ್ಲರೂ ಎಷ್ಟು ಹೊತ್ತಾದರೂ ಮದುವೆ ಗಂಡು ಬರದಿರುವುದನ್ನು ಕಂಡು ಚಿಂತಿತರಾಗಿದ್ದಾರೆ. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ವರನ ಪತ್ತೆಯಾಗಿಲ್ಲ. ಕೊನೆಗೆ ನಡೆಯಬೇಕಾಗಿದ್ದ ಶುಭಕಾರ್ಯ ರದ್ದಾಗಿದೆ. ಮಿತಿಮೀರಿದ ಮದ್ಯಪಾನ ಸೇವನೆಯಿಂದ ಅಸ್ವಸ್ಥನಾಗಿದ್ದ ವರ, ತನ್ನ ಮದುವೆ ನಡೆಯಬೇಕಿದ್ದ ಮರುದಿನ ಹುಡುಗಿ ಮನೆಗೆ ಬಂದಿದ್ದಾನೆ.

ಒಂದು ದಿನ ಬಿಟ್ಟ ಬಂದ ವರನನ್ನು ಕಂಡು ಹುಡುಗಿ ಮನೆಯವರು ಸಿಟ್ಟಾಗಿದ್ದಾರೆ. ಮದುವೆಗಾಗಿ ಮಾಡಿದ್ದ ಖರ್ಚನ್ನು ನೀನೇ ಭರಿಸಬೇಕು ಎಂದು ತಾಕೀತು ಮಾಡಿದ್ದಾರೆ. ಅಂತಿಮವಾಗಿ ಈತನನ್ನು ಮದುವೆ ಆಗುವುದಿಲ್ಲ ಎಂದು ವಧು ಹೇಳಿದ್ದಾಳೆ. ವರದಿಯ ಪ್ರಕಾರ ವರನಿಗೆ ಈಗಾಗಲೇ ಒಂದು ಮದುವೆ ಆಗಿದ್ದು, ಮಕ್ಕಳೂ ಇದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net