

ಬೆಂಗಳೂರು: ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಕ್ಷಿಪ್ರ ಕಾರ್ಯಾಚರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರ ಕೈಗೆ ರಾಜ್ಯ ರಾಜಧಾನಿಯಲ್ಲಿ ಮೂವರು ಡ್ರಗ್ಸ್ ಪೆಡ್ಲರ್ಗಳು ಮಾಲು ಸಮೇತ ಸಿಕ್ಕಿಬಿದ್ದಿದ್ದಾರೆ.
ಹೊರರಾಜ್ಯದಿಂದ ಮಾದಕ ವಸ್ತು ಸಾಗಾಣೆ ಮಾಡಿಕೊಂಡು ನಗರದಲ್ಲೆಡೆ ಸರಬರಾಜು ಮಾಡುತ್ತಿದ್ದ ಕೇರಳ ಮೂಲದ ಸುಬ್ರಮಣಿ (21), ವಿದೂಸ್ (31) ಹಾಗೂ ಶೆಜಿನ್ (21) ಎಂಬುವವರನ್ನು ಬಂಧಿಸಲಾಗಿದೆ. ಅಂದಹಾಗೆ ಇವರು ಡ್ರಗ್ಸ್ ಸಾಗಣೆಗೆ ಬಳಸಿದ್ದು ಕೊಬ್ಬರಿ ಎಣ್ಣೆ ಬಾಟಲಿಗಳನ್ನು. ಅವರ ದಂಧೆಯ ಜಾಲ ಹೇಗಿತ್ತು ಎಂಬುದರ ಡಿಟೇಲ್ಸ್ ಇಲ್ಲಿದೆ. ಇದನ್ನೂ ಓದಿರಿ ಕಬ್ಬಿನ ಗದ್ದೆಯಲ್ಲಿ ಗಾಂಜಾ ಗಿಡಗಳು!
ಆರೋಪಿ ವಿದೂಸ್ ಲಂಡನ್ನಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡಿದ್ದ. ಈ ಹಿಂದೆ ನಗರದ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಇದೇ ವೇಳೆ ಸುಬ್ರಮಣಿ ಮತ್ತು ಶೆಜಿನ್ ಎಂಬುವರ ಸ್ನೇಹವಾಗಿತ್ತು. ವಾರಂತ್ಯದಲ್ಲಿ ಪಾರ್ಟಿ ಮಾಡುತ್ತಿದ್ದರು. ಮಾದಕ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂಬುದು ಆರೋಪಿಗಳಿಗೆ ಗೊತ್ತಾಗಿತ್ತು. ಮೂವರು ಸೇರಿ ದಂಧೆಯಲ್ಲಿ ತೊಡಗಿದ್ದರು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳಿಗೆ ಪಾರ್ಟಿ ವೇಳೆ ಆಂಧ್ರದ ವಿಶಾಖಪಟ್ಟಣ ಮೂಲದ ಡ್ರಗ್ಸ್ ಪೆಡ್ಲರ್ನ ಪರಿಚಯವಾಗಿತ್ತು. ಆತನಿಂದ ಹ್ಯಾಶಿಶ್ ಆಯಿಲ್ ಮತ್ತು ಗಾಂಜಾ ಖರೀದಿಸಿ ಕೊಬ್ಬರಿ ಎಣ್ಣೆ ಬಾಟಲ್ಗಳಲ್ಲಿ ಹ್ಯಾಶಿಶ್ ಆಯಿಲ್ ತುಂಬಿಕೊಂಡು ಬಸ್ ಮೂಲಕ ಬೆಂಗಳೂರಿಗೆ ತರುತ್ತಿದ್ದರು. ಆನ್ಲೈನ್ ಮೂಲಕವೇ ವ್ಯವಹಾರ ಕುದಿರಿಸುತ್ತಿದ್ದ ಇವರಿಗೆ ನಗರದ ಪ್ರತಿಷ್ಠಿತ ಕಾಲೇಜುಗಳ ಕೆಲ ವಿದ್ಯಾರ್ಥಿಗಳು, ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳು ಮತ್ತು ಉದ್ಯಮಿಗಳೇ ಕಾಯಂ ಗ್ರಾಹಕರು.
ಕೆ.ಆರ್.ಪುರಂನಲ್ಲಿ ನೆಲೆಸಿದ್ದ ಆರೋಪಿಗಳು ವಿಶಾಖಪಟ್ಟಣದಿಂದ ತರುತ್ತಿದ್ದ ಮಾದಕ ವಸ್ತುವನ್ನು ಬಾಡಿಗೆ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದರು. ಚಿಕ್ಕ ಪ್ಲಾಸ್ಟಿಕ್ ಬಾಟಲಿಗಳಿಗೆ ಗ್ರಾಂ ಲೆಕ್ಕದಲ್ಲಿ ಪ್ಯಾಕ್ ಮಾಡಿಟ್ಟಿದ್ದರು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಸಿಕ್ಕಿ ಬಿದ್ದಿದ್ದಾರೆ. ಇವರ ಸಂಪರ್ಕದಲ್ಲಿದ್ದ ಇತರ ಡ್ರಗ್ಸ್ ಪೆಡ್ಲರ್ಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.