ಡ್ರಗ್ಸ್ ಫ್ಯಾಕ್ಟರಿ ಪತ್ತೆ: ಸರ್ಕಾರದ ಹುಳುಕು ಬಯಲು | BJP MLAs criticise

Araga Gnanendra
Published on

ಬೆಂಗಳೂರು: ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಇರುವುದನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಹಚ್ಚಿದ್ದು, ಕಾಂಗ್ರೆಸ್ ಸರ್ಕಾರದ ಹುಳುಕು ಬಯಲಾಗಿದೆ ಎಂದು ಮಾಜಿ ಸಚಿವರಾದ ಆರಗ ಜ್ಞಾನೇಂದ್ರ, ಡಾ.ಸಿ.ಎನ್.ಅಶ್ವತ್ಥ ನಾರಾಯಣ ಟೀಕಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಪ್ರತ್ಯೇಕವಾಗಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ನಿರ್ದೇಶನದಂತೆ ಪೊಲೀಸ್ ಇಲಾಖೆ ಕೆಲಸ ಮಾಡುವಂತಾಗಿದೆ. ನೈತಿಕಸ್ಥೈರ್ಯ ಕುಸಿದ ಪರಿಣಾಮವಿದು ಎಂದು ಬೇಸರ ವ್ಯಕ್ತಪಡಿಸಿದರು.

ಪೊಲೀಸ್ ಗಸ್ತು ವ್ಯವಸ್ಥೆಯಿದ್ದರೆ ಇಂತಹವುಗಳನ್ನು ಪತ್ತೆ ಮಾಡಬಹುದಿತ್ತು. ಸರ್ಕಾರದ ಮೂಗಿನ ನೇರಕ್ಕೆ ಪೊಲೀಸರು ಕೆಲಸ ಮಾಡುವಂತಾಗಿದ್ದು, ಮುಕ್ತವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಬೇಕಾದವರ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗುವುದಿಲ್ಲ, ಬೇಕಿಲ್ಲದಿದ್ದರೆ ಒಂದಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತವೆ ಎಂದು ಆರೋಪಿಸಿದರು.

ಧರ್ಮಸ್ಥಳ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ನಡೆಯುತ್ತಿದೆ. ಬೇಗ ತನಿಖೆ ಮುಗಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿ, ಸತ್ಯಾಂಶ ಹೊರಬೀಳಲಿ. ಆದರೆ ಧರ್ಮಸ್ಥಳ ಸಂಸ್ಥೆಗೆ ಕಳಂಕ ತರುವ ಪ್ರಯತ್ನಗಳು ಬೇಸರ ಉಂಟು ಮಾಡುತ್ತವೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ಎನ್‌ಐಎ ತನಿಖೆಗೆ ಒಪ್ಪಿಸಲಿ

ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಪ್ರಕರಣದ ಜಾಲ ಬೇಧಿಸಲು ಎನ್‌ಐಎ ತನಿಖೆಗೆ ಒಪ್ಪಿಸಬೇಕು ಎಂದು ಸಿ.ಎನ್.ಅಶ್ವತ್ಥ ನಾರಾಯಣ ಒತ್ತಾಯಿಸಿ, ಇನ್ಸಪೆಕ್ಟರ್ ವಿರುದ್ಧ ಶಿಸ್ತುಕ್ರಮಕೈಗೊಂಡಿದ್ದೇಕೆ ? ವಾಪಸ್ ಪಡೆದಿದ್ದೇಕೆ ? ತಿಳಿಯದ ನಡೆ ಎಂದು ದೂಷಿಸಿದರು.

ಎಲ್ಲ ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ಕಾರ ಎಟಿಎಂ ಆಗಿದೆ. ಈಗ ಡ್ರಗ್ಸ್‌ನಲ್ಲೂ ಜಾಸ್ತಿಯಾದಂತಿದೆ. ಬೇರೆ ರಾಜ್ಯದ ಪೊಲೀಸರು ಬಂದು ಪತ್ತೆ ಹಚ್ಚಿ, ಆರೋಪಿಗಳನ್ನು ಬಂಧಿಸಿರುವುದು ಕಾಂಗ್ರೆಸ್ ಸರ್ಕಾರ, ಗೃಹ ಇಲಾಖೆಗೆ ಅಪಮಾನವೆಂದು ತಿವಿದರು.

ಧರ್ಮಸ್ಥಳ ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಎಲ್ಲರ ಅನುಮಾನ ಬಗೆಹರಿಸಲಿ. ಕಾಂಗ್ರೆಸ್ ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು ಇದನ್ನೆಲ್ಲ ಮಾಡುತ್ತಿದೆ ಎನ್ನುವಂತಾಗಬಾರದು ಎಂದರು.

ಎಸ್‌ಐಟಿ ತನಿಖೆ ವೇಗವಾಗಿ ನಡೆದು, ಸತ್ಯಾಂಶ ಹೊರಬೀಳಬೇಕು. ಹಿಂದುಗಳ ನಂಬಿಕೆ, ಪವಿತ್ರ ಕ್ಷೇತ್ರಕ್ಕೆ ಅಪಮಾನ ಮಾಡುತ್ತಿರುವವರಿಗೂ ಪಾಠ ಕಲಿಸಬೇಕು. ಇದರ ಹಿಂದಿರುವ ಪಿಎ್ಐ, ಎಸ್‌ಎ್ಐಗಳ ಬಗ್ಗೆಯೂ ತನಿಖೆಯಾಗಬೇಕು ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net