ಮಾದಕ ವಸ್ತುಗಳ ವ್ಯಸನವು ನಮ್ಮೊಳಗಿನ ವೈರಿ

sogane centrol jail
ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ನ ಸಂಘಟನಾ ಅಧ್ಯಕ್ಷ ನಟರಾಜ ಬಾದಾಮಿ ಮಾತನಾಡಿದರು. ವಿವೇಕ್ ವಿ. ಪಾಯಸ್, ಡಾ. ಪಿ.ರಂಗನಾಥ, ಕೆ.ವಿ.ಅರ್ಜುನ್, ಕೆ.ಯಶವಂತಗೌಡ, ಪಿ.ನಾಗರಾಜ, ಎಂ.ಪಾಲಾಕ್ಷಪ್ಪ, ಕೆ.ಮುರಳೀಧರ ಶೆಟ್ಟಿ ಇದ್ದರು.
Published on

ಶಿವಮೊಗ್ಗ: ಮಾದಕವಸ್ತುಗಳು ಸೇವಿಸುವವರ ನಡತೆ, ಸ್ವಭಾವ, ಆಲೋಚನೆ ಮತ್ತು ಭವಿಷ್ಯವನ್ನೇ ಹಾಳುಗೆಡಹುತ್ತದೆ. ಅದರಿಂದ ದೂರವಿದ್ದಲ್ಲಿ ದೇವರಂತೆ ಬದುಕಬಹುದು. ಅದಕ್ಕೆ ದಾಸರಾಗಿದ್ದಲ್ಲಿ ಸಮಾಜದಲ್ಲಿ ರಾಕ್ಷಸರಂತೆ ಬದುಕಬೇಕಾಗುತ್ತದೆ. ಮಾದಕ ವಸ್ತುಗಳ ವ್ಯಸನವು ನಮ್ಮೊಳಗಿನ ವೈರಿಯಾಗಿದ್ದು ಅದನ್ನು ಹತ್ತಿಕ್ಕದಿದ್ದಲ್ಲಿ ಜೀವನವೇ ಸರ್ವನಾಶವಾಗಲಿದೆ ಎಂದು ಬೆಳ್ತಂಗಡಿಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ನ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯಸ್ ಹೇಳಿದರು.

ಸೋಗಾನೆಯ ಕೇಂದ್ರ ಕಾರಾಗೃಹದ ಗ್ರಂಥಾಲಯದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳ್ತಂಗಡಿಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಶಿವಮೊಗ್ಗ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಬೆಂಗಳೂರಿನ ಶಕ್ತಿ ಫೌಂಡೇಶನ್ ಹಾಗೂ ಕೇಂದ್ರ ಕಾರಾಗೃಹದ ಆಶ್ರಯದಲ್ಲಿ ಮಾದಕವಸ್ತುಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆ ಕುರಿತು ಬಂದಿನಿವಾಸಿಗಳಿಗೆ ಹಮ್ಮಿಕೊಂಡ ಪ್ರೇರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾದಕ ವಸ್ತುಗಳ ವ್ಯಸನದಿಂದ ಅಕಾಲಿಕ ಮರಣ, ಆತ್ಮಹತ್ಯೆ ಮುಂತಾದ ಅನಾಹುತಗಳು ಹೆಚ್ಚುತ್ತಿವೆ. ಮಾದಕ ಪದಾರ್ಥಗಳ ಸೇವನೆಯು ಮಹಾಪಾಪ ಎಂದು ಶಾಸ್ತ್ರಪುರಾಣಗ್ರಂಥಗಳಲ್ಲಿಯೂ ಹೇಳಿದೆ. ನಮ್ಮ ದೃಷ್ಟಿ, ಭಾವ ಮತ್ತು ದಾರಿಯನ್ನು ಬದಲಾಯಿಸಿಕೊಂಡಿದ್ದಲ್ಲಿ ಮಾದಕ ವ್ಯಸನದಿಂದ ಮುಕ್ತಿ ಹೊಂದಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ನ ಸಂಘಟನಾ ಅಧ್ಯಕ್ಷ ನಟರಾಜ ಬಾದಾಮಿ, ಮಾದಕ ವಸ್ತು ಸೇವನೆಯು ಒಂದು ದುಶ್ಚಟವಾಗಿದ್ದು, ವ್ಯಕ್ತಿಯ ಬದುಕು ಮತ್ತು ಸಮಾಜದಲ್ಲಿ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ವಿಶೇಷವಾಗಿ ಯುವಜನರು ಮಾದಕವಸ್ತು ಸೇವನೆ, ಮಾರಾಟ, ಕಳ್ಳಸಾಗಣೆಯಂತಹ ಪ್ರಕರಣಗಳಲ್ಲಿ ಬಂಧಿತರಾಗಿ ಜೈಲು ಸೇರುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಮಾದಕ ವ್ಯಸನ ಮುಕ್ತಿಗೆ ಎಲ್ಲರ ದೃಢ ಸಂಕಲ್ಪ ಅತ್ಯಗತ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ಪಿ.ರಂಗನಾಥ, ಮಾದಕವಸ್ತುಗಳ ದಾಸರಾಗುವುದರಿಂದ ಜೀವನದ ಅಮೂಲ್ಯವಾದ ಸಮಯ, ಸಾಮರ್ಥ್ಯಗಳು ವ್ಯರ್ಥವಾಗುತ್ತವೆ. ಮಾದಕ ವಸ್ತುಗಳ ಚಟವನ್ನು ತ್ಯಜಿಸಿ ಇತರರೂ ಬದಲಾಗುವಂತೆ ಪ್ರೇರೇಪಿಸಲು ಸಾಮಾಜಿಕ ಪ್ರೇರಣಾ ಕಾರ್ಯಕ್ರಮಗಳು ಸಾಕಷ್ಟು ಸಹಕಾರಿಯಾಗುತ್ತವೆ ಎಂದರು.

ಬೆಂಗಳೂರಿನ ಶಕ್ತಿ ಫೌಂಡೇಶನ್ ಸ್ಥಾಪಕರಾದ ಕೆ.ವಿ.ಅರ್ಜುನ್ ಮತ್ತು ಕೆ.ಯಶವಂತಗೌಡ ಡ್ರಗ್ಸ್‌ಗೆ ವಿದಾಯ ಹೇಳೋಣ ಎಂಬ ವಿಷಯದ ಕುರಿತು ಮಾತನಾಡಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಚಿತ್ರದುರ್ಗ ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ಪಿ.ನಾಗರಾಜ, ಶಿವಮೊಗ್ಗ ಘಟಕದ ಉಪಾಧ್ಯಕ್ಷ ಎಂ.ಪಾಲಾಕ್ಷಪ್ಪ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿವಮೊಗ್ಗ ಜಿಲ್ಲಾ ನಿರ್ದೇಶಕ ಕೆ.ಮುರಳೀಧರ ಶೆಟ್ಟಿ, ಯೋಜನಾಧಿಕಾರಿ ಕೆ.ಉಮೇಶ್, ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕಿ ಆರ್.ಪ್ರೀತಿ, ಜೈಲರ್‌ಗಳಾದ ಶ್ರೀಶೈಲ ಎಸ್. ಕಟ್ಟಿಮನಿ, ಎಸ್.ಎಸ್.ಅನಿಲ್‌ಕುಮಾರ್, ಸುಷ್ಮಾ ಬಿ. ವಡಗೇರ, ಶರಣಬಸಪ್ಪ ಹಾಗೂ ಸಂಸ್ಥೆಯ ಶಿಕ್ಷಕರಾದ ಎಸ್.ಎನ್.ಲೀಲಾ, ಗೋಪಾಲಕೃಷ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net