ಬರ ಅಧ್ಯಯನ ತಂಡಕ್ಕೆ ಹಿಂಗಾರು ಮಳೆ, ಬೆಳೆ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಆತಂಕ

KB
Published on

ಬೆಂಗಳೂರು: ರಾಜ್ಯದಲ್ಲಿ ಮಳೆ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಹಿಂಗಾರು ಬೆಳೆ ಹಾಗೂ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದೆಂಬ ಆತಂಕವನ್ನು ಕೇಂದ್ರ ತಂಡ ವ್ಯಕ್ತಪಡಿಸಿದೆ.

ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಬರ ಅಧ್ಯಯನ ತಂಡ ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ನಡೆದ ಸಭೆಯಲ್ಲಿ ತಂಡ ಈ ದಿಗಿಲು ವ್ಯಕ್ತಪಡಿಸಿದೆ. ಅದರೊಂದಿಗೆ ಅಧ್ಯಯನ ತಂಡಕ್ಕೆ ರಾಜ್ಯದಲ್ಲಿರುವ ಭೀಕರ ಪರಿಸ್ಥಿತಿಯ ಅರಿವಾಗಿದೆ.

ರಾಜ್ಯದ ವಸ್ತು ಸ್ಥಿತಿಯನ್ನು ತಾವು ಮನಗಂಡಿದ್ದು ಕೇಂದ್ರ ಸರ್ಕಾರಕ್ಕೆ ನೈಜ ಸ್ಥಿತಿಗತಿಯನ್ನು ಒಳಗೊಂಡ ವರದಿ ಸಲ್ಲಿಸುವುದಾಗಿ ತಂಡ ಹೇಳಿದೆ. ಅಲ್ಲದೆ, ರಾಜ್ಯದ ಬರ ಪರಿಸ್ಥಿತಿಗೆ ಬಗ್ಗೆ ಕೇಂದ್ರ ಅಧ್ಯಯನ ತಂಡಕ್ಕೆ ಮನವರಿಕೆಯಾಗಿದೆ. ತಳಮಟ್ಟದಲ್ಲಿ ರೈತರಿಗೆ ಸಾಕಷ್ಟು ಬೆಳೆ ಹಾನಿ ಆಗಿರುವ ಕುರಿತು ಕೇಂದ್ರ ಅಧ್ಯಯನ ತಂಡಕ್ಕೆ ಸರ್ಕಾರ ಸಂಪೂರ್ಣ ಮಾಹಿತಿ ಒದಗಿಸಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ 4800 ಕೋಟಿ ರೂ. ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.

ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಬರ ಅಧ್ಯಯನ ತಂಡ ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಕೇಂದ್ರ ತಂಡದ ಅಧಿಕಾರಿಗಳು, ರಾಜ್ಯ ಸರ್ಕಾರದ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಬರ ಅಧ್ಯಯನ ತಂಡಕ್ಕೆ ಹಾಗೂ ಕೇಂದ್ರ ಸರ್ಕಾರಕ್ಕೆ ನಾವು ಕೊಟ್ಟ ಮಾಹಿತಿ ವಸ್ತು ಸ್ಥಿತಿಯಿಂದ ಕೂಡಿದೆ. ಕೇಂದ್ರ ಅಧ್ಯಯನ ತಂಡ ರಾಜ್ಯವನ್ನು ಸುತ್ತಿ ಹಾನಿಯನ್ನು ಅಂದಾಜಿಸಿದೆ. ದೆಹಲಿಗೆ ತೆರಳಿ ಇನ್ನೊಂದು ವಾರದಲ್ಲಿ ವರದಿ ಸಲ್ಲಿಸಲಿದೆ ಎಂದು ಹೇಳಿದರು.

ಕೇಂದ್ರದ ಬರ ಸಮೀಕ್ಷಾ ತಂಡ ನರೇಗಾ, ಪಶು ಆಹಾರ, ಮೇವಿನ ಪೂರೈಕೆ, ಬರದ ಸ್ಥಿತಿಗತಿ ಹಾಗೂ ವಸ್ತುಸ್ಥಿತಿಯ ಪರಿಶೀಲನೆ ನಡೆಸಿದೆ. ರಾಜ್ಯದ ವರದಿ ಬಗ್ಗೆ,ನಿಖರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ಸೂಚಿಸಿದೆ. ಅಧ್ಯಯನ ತಂಡ ಕೇಂದ್ರಕ್ಕೆ ವರದಿ ಸಲ್ಲಿಸದ ಮೇಲೆ ಎಷ್ಟು ಪರಿಹಾರ ಕೊಡುತ್ತಾರೆ ಎಂಬುದನ್ನು ನೋಡಬೇಕು ಎಂದರು.

ರೈತರಿಗೆ ಆಗಿರುವ ಹಾನಿ ಮನವರಿಕೆ

ನಮ್ಮ ಮನವಿ ಆಧಾರದಲ್ಲಿ ಕೇಂದ್ರದ ಬರ ಅಧ್ಯಯನ ತಂಡ ಬಂದು ರಾಜ್ಯದಲ್ಲಿ ಪ್ರವಾಸ ಮಾಡಿದೆ. ಪರಿಶೀಲನೆ ಸಂದರ್ಭದಲ್ಲಿ ನಮ್ಮ ಮನವಿ ವಸ್ತು ಸ್ಥಿತಿಯಿಂದ ಕೂಡಿದೆ, ತಳಮಟ್ಟದಲ್ಲಿ ಸಾಕಷ್ಟು ರೈತರಿಗೆ ಬೆಳೆ ಹಾನಿ ತೊಂದರೆ ಆಗಿದೆ ಎಂದು ಮನವರಿಕೆ ಆಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ 4800 ಕೋಟಿ ರೂ. ನೀಡುವಂತೆ ಮನವಿ ಮಾಡಿದ್ದೇವೆ ಎಂದು ಹೇಳಿದರು.

ಹವಾಮಾನ ಏರುಪೇರು ಪರಾಮರ್ಶೆಗೆ ಮನವಿ

ರಾಜ್ಯದಲ್ಲಿ ವಿಚಿತ್ರ ಹವಾಮಾನ ಪರಿಸ್ಥಿತಿ ಇದೆ. ಕೆಲವು ತಿಂಗಳಲ್ಲಿ ವಾಡಿಕೆಗಿಂತ ಮಳೆ ಜಾಸ್ತಿಯಾದರೆ ಕೆಲವು ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಮಳೆ ಸ್ಥಿತಿಗತಿಗಳ ಬಗ್ಗೆ ಸ್ಪಷ್ಟತೆ ಇಲ್ಲದ ವಾತಾವರಣ ಇದೆ. ಹವಾಮಾನ ಏರುಪೇರು ಬಗ್ಗೆ ಕೇಂದ್ರ ಗಂಭೀರವಾಗಿ ತೆಗೆದುಕೊಳ್ಳಬೇಕು

ಅದಕ್ಕೆ ಅನುಗುಣವಾಗಿ ಸರ್ಕಾರದ ನೀತಿ, ನಿಯಮ, ಕಾರ್ಯಕ್ರಮ ರೂಪಿಸಲು ಕ್ರಮ ಕೈಗೊಳ್ಳಬೇಕು ಎಂಬುದನ್ನು ಮನವರಿಕೆ ಮಾಡಿದ್ದೇವೆ ಎಂದು ತಿಳಿಸಿದರು.

ನರೇಗಾ 475 ಕೋಟಿ ರೂ.ಗೆ ಬೇಡಿಕೆ

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಪಾವತಿ ಆಗಿಲ್ಲ. 475 ಕೋಟಿ ಪಾವತಿ ಬಾಕಿ ಇದ್ದು, ತಕ್ಷಣ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಕೇಂದ್ರದ ಅಧಿಕಾರಿಗಳ ಬಳಿ ಮಾತನಾಡುವಂತೆ ಮನವಿ ಮಾಡಿದ್ದೇವೆ ಎಂದರು.

ಫಸಲುಭೀಮಾ ಯೋಜನೆ ರೈತರಿಗೆ ಪರಿಣಾಮಕಾರಿ ಅನುಕೂಲ ಆಗದಿರುವುದನ್ನು ಕೇಂದ್ರದ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದ್ದೇವೆ. ಬರ ಪರಿಹಾರಎಷ್ಟು ಕೊಡುತ್ತಾರೆ ಎಂಬುದು ಅವರ ತೀರ್ಮಾನ. ನಾವು ಒತ್ತಡ ಹಾಕಬಹುದು. ಆದರೆ ಅಂತಿಮ ನಿರ್ಧಾರ ಅವರದ್ದೇ ಎಂದು ಹೇಳಿದರು.

ಕೇಂದ್ರ ತಂಡ ಒಂದು ವಾರದ ಒಳಗಡೆ ಕೇಂದ್ರಕ್ಕೆ ವರದಿ ಸಲ್ಲಿಕೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಅದಕ್ಕೆ ಪೂರಕವಾಗಿ ಸಣ್ಣ ಅತಿ ಸಣ್ಣ ರೈತರ ಮಾಹಿತಿಯನ್ನು ಅಂಕಿ-ಅಂಶಗಳನ್ನು ನೀಡುತ್ತೇವೆ ಎಂದು ಕೃಷ್ಣ ಭೈರೇಗೌಡ ಹೇಳಿದರು.

ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ

ಕೃಷಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ಕೇಂದ್ರ ತಂಡದ ವರದಿ ಸಲ್ಲಿಕೆ ನಂತರ ಪರಿಹಾರ ಬಿಡುಗಡೆಗೆ ಕೆಲವು ದಿನ ಬೇಕಾಗಬಹುದು. ಪರಿಹಾರ ನೀಡುವುದು ವಿಳಂಬ ಆದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ರೈತರಿಗೆ ಅನ್ಯಾಯ ಆಗಲು ಬಿಡಲ್ಲ ಎಂದು ಚೆಲುವರಾಯಸ್ವಾಮಿ ಹೇಳಿದರು.

ಕೃಷಿ ಇಲಾಖೆ ಸತ್ತು ಹೋಗಿದೆ ಎಂಬ ಜಿ.ಟಿ ದೇವೇಗೌಡ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಚೆಲುವರಾಯಸ್ವಾಮಿ, ಜಿ.ಟಿ.ದೇವೇಗೌಡ ಕೋರ್ ಕಮಿಟಿ ಅಧ್ಯಕ್ಷ ಸ್ಥಾನವನ್ನು ಮುಖ್ಯಮಂತ್ರಿ ಸ್ಥಾನ ಅಂದುಕೊಂಡಿದ್ದಾರೆ. ಅಶ್ವತ್ಥ ನಾರಾಯಣ ಹಾಗೆ ಕಾಂಗ್ರೆಸ್ ಬೈದರೆ ಪ್ರಮೋಷನ್ ಸಿಗುತ್ತದೆ ಅಂದುಕೊಂಡಿದ್ದಾರೆ. ಚುನಾವಣೆ ಮುಂದೆ ಇಟ್ಟುಕೊಂಡು ಶಹಬ್ಬಾಶ್‌ಗಿರಿ ಪಡೆಯಲು ಜಿ.ಟಿ. ದೇವೇಗೌಡರು ಮಾತನಾಡುತ್ತಾರೆ ಎಂದು ಚೆಲುವರಾಯಸ್ವಾಮಿ ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net