‘ಕಾಂಗ್ರೆಸ್ ಬಂದ್ರೆ ಬರಗಾಲ’; ಟೀಕೆಗೆ ಸಚಿವರ ತಿರುಗೇಟು ಹೇಗಿದೆ ನೋಡಿ...

bara1
Published on

ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಬರಗಾಲ ಬರಲಿದೆ ಎಂದು ಸಿಎಂ ಸಿದ್ದರಾಮಯ್ಯ ಭಾವ ಚಿತ್ರದ ಮೇಲೆ ಬರದ ಗೆರೆ ಮೂಡಿಸಿ ಟೀಕಿಸಿರುವ ಬಿಜೆಪಿ ವಿರುದ್ಧ ಸಚಿವರನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಳೆ ಬರುವುದಿಲ್ಲ ಎಂಬ ಮೌಢ್ಯವನ್ನು ಬಿಜೆಪಿ ಬಿತ್ತುತ್ತಿದೆ. ನೆರೆಯ ಕೇರಳ ಹಾಗೂ ತಮಿಳುನಾಡಿನಲ್ಲೂ ಮಳೆಯಿಲ್ಲ. ಈ ಬಾರಿ ಕೇರಳದ ಇತಿಹಾಸದಲ್ಲಿ ಪ್ರಥಮ ಬಾರಿಗೆ 14 ಜಿಲ್ಲೆಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಅಲ್ಲಿ ಕಾಂಗ್ರೆಸ್ ಸರ್ಕಾರವಿದೆಯೇ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತತಿಕ್ರಿಯೆ ನೀಡಿದ್ದಾರೆ.

ಸಂಸದರು ರಾಜೀನಾಮೆ ಕೊಡಬೇಕಾಗುತ್ತದೆ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಬಿಜೆಪಿ ಸಂಸದರು ಇದ್ದಾರೆ, ಕೇಂದ್ರಲ್ಲಿ ಬಿಜೆಪಿ ಸರ್ಕಾರವಿದೆ. ಪಾರ್ಟ್ ಆಫ್​ ದಿ ಸರ್ಕಾರ ಅವರದ್ದು ಇದೆ. ನಾವು ರಾಜ್ಯ ಆಳುತ್ತೇವೆ, ಅವರು ದೇಶ ಆಳುತ್ತಾರೆ. ಹಾಗಾದರೆ ಸಂಸದರು ರಾಜೀನಾಮೆ ಕೊಡಬೇಕಾಗುತ್ತದೆ. ನಮ್ಮಲ್ಲಿ ಮಾತ್ರವಲ್ಲ ಪಕ್ಕದ ಕೇರಳ, ಗೋವದಲ್ಲೂ ಸಮಸ್ಯೆ ಇದೆ. ಬರ ನೈಸರ್ಗಿಕವಾಗಿ ಆಗಿರುವುದು. ಅದಕ್ಕೆ ಯಾರು ಏನು ಮಾಡಲು ಸಾಧ್ಯ. ನಾವೆಲ್ಲ ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಅಲ್ಲದೇ ಕೇಂದ್ರದ ನಿಯಮಗಳಲ್ಲಿ ಸಾಕಷ್ಟು ಸಮಸ್ಯೆ ಇದೆ ಎಂದರು.

ಬಿಜೆಪಿಗೆ ಭಯ

ಕೃಷಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ಲೋಕಸಭಾ ಚುನಾವಣೆ ಬಂದಿರುವ ಕಾರಣ ಬಿಜೆಪಿಯವರಿಗೆ ಭಯ ಬಂದಿದೆ. ಈ ಹಿಂದೆ ಬಿಜೆಪಿ, ಜೆಡಿಎಸ್ ಇದ್ದಾಗಲೂ ಬರ ಬಂದಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗಲು ಬರ ಬಂದಿದೆ. ಅತಿವೃಷ್ಟಿಯೂ ಬಂದಿದೆ ಅಲ್ಲವೇ? ಬಿಜೆಪಿಯವರು ಸಂಸ್ಕಾರ ಇಲ್ಲದೇ ಮಾತನಾಡುತ್ತಿದ್ದಾರೆ ಎಂದರು.

ಬಿಜೆಪಿ ಟೀಕೆ

ಕರ್ನಾಟಕದಲ್ಲಿ ಹಿಂದೆಂದಿಗಿಂತಲೂ ಕಂಡು ಕೇಳರಿಯದ ಬರ ಆವರಿಸಿಕೊಂಡಿದೆ. ಸಿದ್ದರಾಮಯ್ಯ ಸಾಹೇಬರು ಅಧಿಕಾರದ ಚುಕ್ಕಾಣಿ ಹಿಡಿದ ಮೊದಲ ವಾರದಿಂದಲೇ ಮುಂಗಾರು ಕೈಕೊಟ್ಟು ಬರಗಾಲ ಸೃಷ್ಟಿಯಾಗಿತ್ತು. ಆದರೆ, ವರ್ಗಾವಣೆ ದಂಧೆ, ಕಮಿಷನ್, ಕಲೆಕ್ಷನ್, ಶ್ಯಾಡೋ ಸಿಎಂ, ಸಚಿವರ ದರ್ಪದ ಮೇಲಾಟಗಳೇ ಹೆಚ್ಚಾದ ಹಿನ್ನೆಲೆ ಸರ್ಕಾರ ಈಗ ಧೃತರಾಷ್ಟ್ರನಂತೆ ವರ್ತಿಸುತ್ತಿದೆ ಎಂದು ಬಿಜೆಪಿ ಕುಟುಕಿದೆ.

ಸರ್ಕಾರದ ಈ ನಿಲುವಿನ ಪರಿಣಾಮ ರೈತರ ಸರಣಿ ಆತ್ಮಹತ್ಯೆ, ಕಲುಷಿತ ನೀರು ಪೂರೈಕೆಯಿಂದ ರಾಜ್ಯದಲ್ಲಿ ಅಪಾರ ಸಾವು-ನೋವು ಸಂಭವಿಸಿದೆ. ಈ ಹಿಂದೆ ಬರಗಾಲವೇ ಇಲ್ಲವೆಂದು ಸಿದ್ದರಾಮಯ್ಯರವರ ಸರ್ಕಾರ ಮೈಮರೆತ ಕಾರಣ ಇಂದು 195 ತಾಲೂಕುಗಳಲ್ಲಿ ಬರ ಬಂದಿದೆ. ಈಗಲೂ ಸರ್ಕಾರ ಬರಗಾಲವನ್ನು ಸಮರ್ಥವಾಗಿ ಎದುರಿಸಲಾಗದೆ ಕೈಲಾಗದವರಂತೆ ಕೂತಿದೆ ಎಂದು ಬಿಜೆಪಿ ಆರೋಪಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net