ಉಗ್ರ ದಾಳಿ ಬೆನ್ನಲ್ಲೇ ಮತ್ತೆ ಎರಡು ಡ್ರೋನ್ ಹಾರಾಟ! ಗುಂಡು ಹಾರಿಸಿ ಓಡಿಸಿದ ಭಾರತೀಯ ಸೇನೆ

drone
Published on

ಶ್ರೀನಗರ: ಜಮ್ಮುವಿನ ವಿಮಾನ ನಿಲ್ದಾಣ ಹಾಗೂ ವಾಯುನೆಲೆ ಸ್ಟೇಷನ್ ಒಳಗೆ ಬಾಂಬ್ ಸ್ಫೋಟ ಆದ ಬೆನ್ನಲ್ಲೇ ಅಲ್ಲಿನ ಮಿಲಿಟರಿ ಕೇಂದ್ರದ ಮೇಲೂ ಬಾಂಬ್ ದಾಳಿಗೆ ಪ್ರಯತ್ನ ಪಟ್ಟಿರುವ ಸಂಶಯ ಮೂಡಿದೆ. ನಿನ್ನೆ ತಡರಾತ್ರಿಯಲ್ಲಿ ಮಿಲಿಟರಿ ಕೇಂದ್ರಗಳ ಮೇಲೆ ಎರಡು ಡ್ರೋನ್​ಗಳ ಹಾರಾಟ ಕಂಡುಬಂದಿದ್ದು, ಕೂಡಲೇ ಎಚ್ಚೆತ್ತುಕೊಂಡು ಸೇನೆ, ಗುಂಡು ಹಾರಿಸಿ, ಡ್ರೋನ್ ಓಡಿಸಿದೆ.

ಜಮ್ಮುವಿನ ಕಲುಚಕ್ ಮಿಲಿಟರಿ ಕೇಂದ್ರದ ಬಳಿ ಡ್ರೋನ್‌ಗಳನ್ನು ಗುರುತಿಸಲಾಗಿದೆ. ಮೊದಲನೆಯದನ್ನು ರಾತ್ರಿ 11.30 ಕ್ಕೆ ಮತ್ತು ಎರಡನೆಯದನ್ನು ಬೆಳಿಗ್ಗೆ 1.30ರ ಸುಮಾರಿಗೆ ನೋಡಲಾಗಿದೆ. ರತ್ನುಚಕ್-ಕಲುಚಕ್ ಮಿಲಿಟರಿ ಪ್ರದೇಶದ ಮೇಲೆ ಎರಡು ಪ್ರತ್ಯೇಕ ಡ್ರೋನ್ ಚಟುವಟಿಕೆಗಳನ್ನು ಎಚ್ಚರಿಕೆಯ ಪಡೆಗಳಿಂದ ಗುರುತಿಸಿ, ತಕ್ಷಣ ಕ್ರಮ ತೆಗೆದುಕೊಂಡಿದೆ. ಸೇನೆ ಗುಂಡು ಹಾರಿಸಿದ ನಂತರ ಡ್ರೋನ್​ಗಳು ಅಲ್ಲಿಂದ ಹೊರಟು ಹೋದವು ಎಂದು ಭಾರತೀಯ ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮೊದಲನೇ ದಾಳಿ ನಡೆದ 24 ಗಂಟೆಗಳಲ್ಲಿ ಮತ್ತೆ ಎರಡನೇ ದಾಳಿ ನಡೆಸಲು ಪ್ರಯತ್ನಿಸಲಾಗಿದೆ. ಈ ಡ್ರೋನ್​ಗಳು ಎಲ್ಲಿಂದ ಬಂದವು, ಏಕಾಗಿ ಬಂದವು ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮಿಲಿಟರಿ ಕೇಂದ್ರದ ಸುತ್ತ ಸೂಕ್ಷ್ಮ ಕಣ್ಣುಗಳನ್ನಿಡಲಾಗಿದೆ ಎಂದು ತಿಳಿಸಲಾಗಿದೆ.

ಶನಿವಾರ ಮಧ್ಯರಾತ್ರಿ 1.45ರ ಸುಮಾರಿಗೆ ಜಮ್ಮುವಿನ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಬ್ಲಾಸ್ಟ್‌ ಆಗಿತ್ತು. ವಾಯುನೆಲೆ ಸ್ಟೇಷನ್​​ ಒಳಗೆ, 5 ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟ ಸಂಭವಿಸಿತ್ತು. ಭಾರತೀಯ ವಾಯುಪಡೆಯ ಮಾಧ್ಯಮ ಸಮನ್ವಯ ಕೇಂದ್ರ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಸ್ಫೋಟದಿಂದ ಇಬ್ಬರು ಗಾಯಗೊಂಡಿದ್ದು, ಯಾರದ್ದೂ ಪ್ರಾಣ ಹಾನಿಯಾಗಿಲ್ಲ. ತೀವ್ರ ಭದ್ರತಾ ತಾಂತ್ರಿಕ ವಲಯದಲ್ಲಿ ಈ ಎರಡು ಸ್ಫೋಟಗಳು ನಡೆದಿವೆ. ಮೊದಲ ಸ್ಫೋಟ ಕಟ್ಟಡ ಚಾವಣಿಯನ್ನು ಸೀಳಿದೆ ಎಂದು ಮಾಹಿತಿ ನೀಡಿತ್ತು. ಅದು ಉಗ್ರರಿಂದ ನಡೆದ ದಾಳಿ ಎಂದು ದೃಢಪಡಿಸಲಾಗಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net