ವರ್ಷದಲ್ಲಿ ಕುಡಿಯುವ ನೀರಿನ ಕಾಮಗಾರಿ ಪೂರ್ಣ

06_Hirisave 01
ಹಿರೀಸಾವೆ ಗ್ರಾಮದ ಒಂಟಿಕೊಪ್ಪಲು ಬಳಿ ಅಳವಡಿಸಿರುವ ನಾಮಫಲಕವನ್ನು ಗುರುವಾರ ಶಾಸಕ ಸಿಎನ್ ಬಾಲಕೃಷ್ಣ ಅನಾವರಣಗೊಳಿಸಿದರು.
Published on

ಶಾಸಕ ಸಿ.ಎನ್.ಬಾಲಕೃಷ್ಣ ಭರವಸೆ

ಹಿರೀಸಾವೆ: ಗ್ರಾಮದ ಬೀದಿಗಳಲ್ಲಿ ಅಳವಡಿಸಿರುವ ಪ್ರತಿ ನಾಮಫಲಕಗಳಲ್ಲಿ ಸಾಹಿತಿಗಳು ಹಾಗೂ ಮಹಾತ್ಮರ ಹೆಸರುಗಳನ್ನು ಬಳಕೆ ಮಾಡಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಇಲ್ಲಿನ ಒಂಟಿಕೊಪ್ಪಲು ಬಳಿ ಅಳವಡಿಸಿರುವ ನಾಮಫಲಕವನ್ನು ಗುರುವಾರ ಅನಾವರಣಗೊಳಿಸಿ, ನರೇಗಾ ಯೋಜನೆಯಡಿ 6 ಕೋಟಿ ರೂ. ವೆಚ್ಚದಲ್ಲಿ ಚರಂಡಿ ಹಾಗೂ ಇತರ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗಿದೆ ಎಂದರು.

ಅಂಬೇಡ್ಕರ್ ಭವನ ನಿರ್ಮಾಣಕ್ಕೆ 75 ಲಕ್ಷ ರೂ. ಮಂಜೂರಾಗಿದ್ದು, ಈಗಾಗಲೇ 13 ಗುಂಟೆ ಜಾಗವನ್ನು ಗುರುತಿಸಲಾಗಿದೆ. ಪ್ರವಾಸಿ ಮಂದಿರ ನಿರ್ಮಾಣಕ್ಕೆ 2 ಕೋಟಿ ರೂ. ಮಂಜೂರಾಗಿದ್ದು, ಸ್ಥಳ ನಿಗದಿಪಡಿಸಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಹಿರೀಸಾವೆ ಗ್ರಾಮಕ್ಕೆ ಹೇಮಾವತಿ ನದಿಯಿಂದ ಕುಡಿಯುವ ನೀರಿನ ಯೋಜನೆ ಕಲ್ಪಿಸಿದ್ದು ಮುಂದಿನ 12 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಹಿರೀಸಾವೆ ಸಮುದಾಯ ಆರೋಗ್ಯ ಕೇಂದ್ರದ ನವೀಕರಣಕ್ಕೆ 1 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಏಪ್ರಿಲ್ ತಿಂಗಳಲ್ಲಿ ಅನುಮೋದನೆಗೊಳಿಸುವುದಾಗಿ ಆರೋಗ್ಯ ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಈ.ಬೋರಣ್ಣ, ಮಾಜಿ ಅಧ್ಯಕ್ಷ ಎಚ್.ಜೆ.ಮಹೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಎಸ್.ರವಿಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಅಧ್ಯಕ್ಷ ಪ್ರಮೋದ್, ಪ್ರಮುಖರಾದ ರಾಧಾ ರಾಮಣ್ಣ, ಸಂತೋಷ್, ದಿನೇಶ್, ದೇವರಾಜ್, ಬಾಬು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net