ಕುಡಿಯುವ ನೀರಿನ ಯೋಜನೆ ಭವಿಷ್ಯಕ್ಕೆ ಪೂರಕವಾಗಿರಲಿ: ಡಿಸಿ ಸೆಲ್ವಮಣಿ

25 smg 8
Published on

ಶಿವಮೊಗ್ಗ: ಪಟ್ಟಣಗಳಲ್ಲಿ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದ ಕಾಮಗಾರಿಗಳು ಭವಿಷ್ಯದ ಯೋಜನೆಗಳಿಗೆ ಪೂರಕ ಮತ್ತು ಸಮರ್ಪಕವಾಗಿ ಕೈಗೊಳ್ಳಬೇಕೆಂದು ಡಿಸಿ ಡಾ. ಆರ್.ಸೆಲ್ವಮಣಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಡಿಸಿ ಕಚೇರಿಯಲ್ಲಿ ಗುರುವಾರ ಪಟ್ಟಣಗಳಲ್ಲಿ ಸಾರ್ವತ್ರಿಕವಾಗಿ ಮನೆಗಳಿಗೆ ನೀರು ಪೂರೈಕೆ ಮಾಡುವ ಅಮೃತ್ 2.0 ಯೋಜನೆ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಸಾಗರ, ಶಿಕಾರಿಪುರ, ಶಿರಾಳಕೊಪ್ಪ, ಸೊರಬ, ಜೋಗ-ಕಾರ್ಗಲ್, ಹೊಸನಗರ, ತೀರ್ಥಹಳ್ಳಿ, ಹೊಳೆಹೊನ್ನೂರು ಮತ್ತು ಆನವಟ್ಟಿ ಪಟ್ಟಣಗಳು ಈ ಯೋಜನೆಯಡಿ ಗುರುತಿಸಲಾಗಿದ್ದು, 2025ರ ವೇಳೆಗೆ ಎಲ್ಲ ಮನೆಗಳಿಗೆ ಕುಡಿಯುವ ನೀರು ಪೂರೈಸಲು ಯೋಜನೆಗಳು ಸಮರ್ಪಕವಾಗಿರಬೇಕು ಎಂದರು.

ಸಾಗರ ಪಟ್ಟಣಕ್ಕೆ 2.6 ಕೋಟಿ ರೂ. ವೆಚ್ಚದಲ್ಲಿ ಒತ್ತಡಯುಕ್ತ ನೀರು ಒದಗಿಸಲು ಯೋಜನೆ ತಯಾರಿಸಿದ್ದು, ಒಂದೇ ಏಜೆನ್ಸಿಗೆ ಅನುಮೋದನೆ ನೀಡುವಂತೆ ಯೋಜನೆ ರೂಪಿಸಬೇಕು. ಕುಡಿಯುವ ನೀರಿಗಾಗಿ ಶಿರಾಳಕೊಪ್ಪ 36 ಮತ್ತು ಸೊರಬದಲ್ಲಿ 73 ಬೋರ್‌ವೆಲ್ಗಳನ್ನು ಅವಲಂಬಿಸಲಾಗುತ್ತಿದೆ. ಬೋರ್‌ವೆಲ್ ಮೇಲೆ ಹೆಚ್ಚು ಅಲವಂಬನೆ ಒಳ್ಳೆಯದಲ್ಲ. ಈ ಎರಡು ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಕುರಿತು ಸಮಗ್ರ ಯೋಜನೆ ರೂಪಿಸಬೇಕು. ಪ್ರಸ್ತುತ ಯೋಜನೆ ಮತ್ತೊಮ್ಮೆ ಪರಿಶೀಲಿಸಿ, ಶಿರಾಳಕೊಪ್ಪಕ್ಕೆ ಹೊಸ ಯೋಜನೆ ತಯಾರಿಸುವಂತೆ ಸೂಚನೆ ನೀಡಿದರು. ಜನಸಂಖ್ಯೆ ನಿರ್ಧರಣೆ, ಜನಸಂಖ್ಯಾಧಾರಿತ ನೀರಿನ ಸರಬರಾಜು ಸೇರಿ ಎಲ್ಲ ಮಾನದಂಡಗಳನ್ನು ಯೋಜನೆಯ ಮಾರ್ಗಸೂಚನೆಯನ್ವಯ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹೇಳಿದರು.

ಆನವಟ್ಟಿ ಮತ್ತು ಹೊಳೆಹೊನ್ನೂರಿನಲ್ಲಿ ಸಮಗ್ರ ಕುಡಿಯುವ ನೀರಿನ ಯೋಜನೆಯಾಗಬೇಕು. ಹೊಸನಗರದಲ್ಲಿ ಹಿನ್ನೀರು ಖಾಲಿಯಾದಾಗ 3ರಿಂದ 4 ತಿಂಗಳು ಕುಡಿಯುವ ನೀರಿಗೆ ತೊಂದರೆಯಾಗುತ್ತಿದ್ದು ಆ ವೇಳೆ ನೀರು ಒದಗಿಸಿ ಸರಿದೂಗಿಸುವಂತೆ ಯೋಜನೆ ರೂಪಿಸಬೇಕು. ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜಿನಿಯರ್‌ಗಳು ಹೊಸನಗರ ಪಪಂ ಮುಖ್ಯಾಧಿಕಾರಿಗಳೊಂದಿಗೆ ಸರ್ವೇ ನಡೆಸಿ ಯೋಜನೆ ಸಿದ್ಧಪಡಿಸುವಂತೆ ಸೂಚಿಸಿದರು.

ಜಿಲ್ಲಾ ಯೋಜನಾ ನಿರ್ದೇಶಕ ಮೂಕಪ್ಪ ಕರಿಭೀಮಣ್ಣನವರ್, ಸಿಎಒ ಮೋಹನ್‌ಕುಮಾರ್, ಎಇಇ ಮಂಜುನಾಥ್, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಅಭಿಯಂತರರು ಇತರೆ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net