ಅಸಾಧ್ಯವಾದ ಕನಸು ಇರಲಿ ಉತ್ತಮ ಭೂಮಿಗೆ ಬದ್ಧರಾಗಿ!

Ravishankar Guruji
Published on

ನಾವೆಲ್ಲರೂ ಈ ಭೂಮಿಯ ಮೇಲೆ ಏನೋ ಒಂದು ಅನುಪಮವಾದುದನ್ನು, ಅದ್ಭುತವಾದುದನ್ನು ಮಾಡಲು ಜನಿಸಿದ್ದೇವೆ. ಈ ಅವಕಾಶ ಕಳೆದುಕೊಳ್ಳದಂತೆ

Ravishankar
ನೋಡಿಕೊಳ್ಳಿ. ಸೃಜನಶೀಲವಾದ ಏನಾದರೊಂದನ್ನು ಮಾಡದೆಯೇ ಒಂದು ವರ್ಷವೂ ಕಳೆದು ಹೋಗಬಾರದು. ನಿಮಗೊಂದು ಕನಸಿರದ ಹೊರತು ಅದನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಂದು ಆವಿಷ್ಕಾರವೂ ಒಂದು ಕನಸಿನಿಂದ ಬಂದಿದೆ. ಕನಸನ್ನು ಕಾಣಲು ನಿಮಗೆ ನೀವು ಸ್ವಾತಂತ್ರ್ಯವನ್ನು ಕೊಡಿ. ದೊಡ್ಡದಾಗಿ ಆಲೋಚಿಸಿ ಮತ್ತು ಪೂರ್ಣ ಬದ್ಧತೆಯಿಂದ ಅದನ್ನು ಸಾಧಿಸುವ ಶೌರ್ಯವನ್ನು ಹೊಂದಿ. ದೊಡ್ಡದಾಗಿ ಕನಸನ್ನು ಕಂಡವರನ್ನು ಅಪಹಾಸ್ಯವನ್ನು ಮಾಡಲಾಯಿತು, ಆದರೆ ಅವರು ದೃಢವಾಗಿ ನಿಂತು ತಮ್ಮ ಗುರಿಗಳನ್ನು ಸಾಧಿಸಿದರು.

ಜೀವನದ ಶಕ್ತಿಗೆ ಹರಿಯಲು ಒಂದು ದಿಕ್ಕು ಬೇಕು. ಹಾಗೆ ದಿಶೆಯೊಂದನ್ನು ಕೊಡದಿದ್ದರೆ, ನೀವು ಪೂರ್ಣ ಗೊಂದಲದಲ್ಲಿ ಮುಳುಗಿಬಿಡುತ್ತೀರಿ. ಪ್ರಾಣಶಕ್ತಿಯು ಒಂದು ದಿಕ್ಕಿನಲ್ಲಿ ಹರಿಯಬೇಕೆಂದರೆ ಬದ್ಧತೆಯು ಅವಶ್ಯಕ. ಇಂದು ಅನೇಕ ಜನರು ಗೊಂದಲದಲ್ಲಿರಲು ಕಾರಣ, ಅವರ ಜೀವನದಲ್ಲಿ ಒಂದು ದಿಕ್ಕನ್ನು ಕಾಣದೆ ಇರುವುದು. ನೀವು ಸಂತೋಷವಾಗಿದ್ದಾಗ ನಿಮ್ಮಲ್ಲಿ ಬಹಳ ಪ್ರಾಣಶಕ್ತಿಯಿರುತ್ತದೆ. ಆದರೆ ಈ ಪ್ರಾಣಶಕ್ತಿಗೆ ಎತ್ತ ಹೋಗಬೇಕೆಂದು ತಿಳಿಯದೆ ಹೋದಾಗ, ಅದು ನಿಂತಲ್ಲೇ ನಿಂತು ಕೊಳೆಯಲು ಆರಂಭಿಸುತ್ತದೆ.

ರಹಸ್ಯವಾದ ವಿಷಯವೆಂದರೆ - ನೀವು ಹೆಚ್ಚು ಬದ್ಧರಾದಷ್ಟೂ, ದೊಡ್ಡದಾದುದಕ್ಕೆ ಬದ್ಧರಾದಷ್ಟೂ, ಆ ಬದ್ಧತೆಯನ್ನು ಪೂರೈಸಲು ನಿಮಗೆ ಅಷ್ಟೇ ಹೆಚ್ಚು ಶಕ್ತಿ ದೊರೆಯುತ್ತದೆ. ದೊಡ್ಡ ಬದ್ಧತೆಯಿದ್ದಷ್ಟೂ ವಿಷಯಗಳು ಸುಲಭವಾಗುತ್ತವೆ. ಸಣ್ಣ ಬದ್ಧತೆಗಳು ನಿಮಗೆ ಉಸಿರುಗಟ್ಟಿಸುತ್ತವೆ, ಏಕೆಂದರೆ ನಿಮಗೆ ಹೆಚ್ಚು ಸಾಮರ್ಥ್ಯವಿದ್ದರೂ ಸೀಮಿತವಾದ ವಲಯದಲ್ಲಿ ಸಿಲುಕಿಕೊಂಡಿರುತ್ತೀರಿ.

ಸಮಾಜದ ಒಳಿತಿಗಾಗಿ ನೀವು ಕೆಲಸ ಮಾಡುತ್ತಿದ್ದೀರಿ, ನಿಮಗೆ ಮಾಡಲು ಹತ್ತು ವಿಷಯಗಳಿವೆ ಎಂದಿಟ್ಟುಕೊಳ್ಳಿ. ಆಗ ನೀವು ಒಂದು ತಪ್ಪನ್ನು ಮಾಡಿದ್ದರೂ, ಆ ಹತ್ತು ವಿಷಯಗಳನ್ನು ಮುಂದು ವರಿಸುತ್ತಿದ್ದರೆ, ತಪ್ಪಾದದ್ದು ತಾನಾಗಿಯೇ ಸರಿಹೋಗುತ್ತದೆ!! ಕೃಪೆ ಕೆಲಸ ಮಾಡುವುದೇ ಹೀಗೆ! ಸಾಮಾನ್ಯವಾಗಿ ನಾವು ಸಂಪನ್ಮೂಲ ಗಳಿದ್ದಾಗ ಮಾತ್ರ ಬದ್ಧರಾಗಬೇಕು ಎಂದುಕೊಳ್ಳುತ್ತೇವೆ. ಆದರೆ ನೀವು ದೊಡ್ಡದಾದುದಕ್ಕೆ ಬದ್ಧರಾದಷ್ಟೂ , ಸಂಪನ್ಮೂಲಗಳು ನಿಮ್ಮ ಬಳಿಗೆ ತಾವಾಗಿಯೇ ಬರುತ್ತವೆ. ಬದ್ಧತೆಯಿಂದ ನಿಮಗೆ ಬಲ ಬರುತ್ತದೆ. ನಿಮ್ಮ ಕುಟುಂಬಕ್ಕೆ ನೀವು ಬದ್ಧರಾಗಿದ್ದರೆ, ನಿಮ್ಮ ಕುಟುಂಬವು ನಿಮಗೆ ಆಧಾರವಾಗಿ ನಿಲ್ಲುತ್ತದೆ. ಸಮಾಜಕ್ಕೆ ಬದ್ಧರಾಗಿದ್ದಲ್ಲಿ, ಸಮಾಜದ ಬೆಂಬಲ ಸಿಗುತ್ತದೆ. ಸಹಾಯ ಒದಗಿ ಬರುತ್ತದೆ.

ಬದ್ಧತೆಯು ಫಲದಾಯಕವಾಗಬೇಕಿದ್ದರೆ, ಸರಿಯಾದ ಆಲೋಚನೆಗಳು ಬೇಕು. ಸರಿಯಾದ ಕಾರ್ಯಗಳು ನಡೆಯಬೇಕು. ನೀವು ಸಾಧಿಸಬೇಕು ಎಂದುಕೊಂಡಿರುವ ವಿಷಯಗಳ ಪಟ್ಟಿಯನ್ನು ಮಾಡಿ. ವಿಶಾಲ ದೃಷ್ಟಿಯನ್ನು ಹೊಂದಿ ಮತ್ತು ನಿಜವಾಗಿಯೂ ಬೇಕಾದ ವಿಷಯಗಳನ್ನು ಆಯ್ದುಕೊಳ್ಳಿ. ಗರಿಷ್ಠ ತೃಪ್ತಿಯನ್ನು ನೀಡುವ ವಿಷಯಗಳನ್ನು, ಗುರಿಯನ್ನು ಮೇಲ್ಪಂಕ್ತಿಯಲ್ಲಿ ಇಟ್ಟರೆ, ಸಣ್ಣ ವಿಷಯಗಳು ತಾನಾಗಿಯೇ ಸರಿಯಾಗುತ್ತವೆ.

ಮನಸ್ಸು ಪೂರ್ಣವಾಗಿ ವರ್ತಮಾನದಲ್ಲಿದ್ದಾಗ, ನಿಮಗೆ ಸರಿಯಾದ ಆಲೋಚನೆಗಳು ಬರುತ್ತವೆ. ನಿಮ್ಮ ಗುರಿಗಳನ್ನು ಹೊಂದಿ, ಆದರೆ ಅದನ್ನು ಸಾಧಿಸುವ ಸಲುವಾಗಿ ಅವಶ್ಯಕವಾದ ಸಾಧನಗಳ ಬಗ್ಗೆಯೂ, ಮಾಡಬೇಕಾದ ರೀತಿಗಳ ಬಗ್ಗೆಯೂ ಯೋಜನೆಯನ್ನು ಮಾಡಿ. ಮೂರು ವರ್ಷಗಳ ನಂತರ ನಿಮ್ಮನ್ನು ನೀವು ಎಲ್ಲಿ ಕಾಣಲು ಬಯಸುತ್ತೀರಿ? 20 ವರ್ಷಗಳ ನಂತರ? 40 ವರ್ಷಗಳ ನಂತರ? ಫಲಗಳ ಬಗ್ಗೆ ಜ್ವರಪೀಡಿತರಾಗಬೇಡಿ. ನಿಮ್ಮ ನೂರು ಪ್ರತಿಶತ ಶ್ರದ್ಧೆ ಕೊಡಿ. ಸಾಮಾನ್ಯವಾಗಿ ಮನಸ್ಸಿನಲ್ಲಿ ಅವಸರವನ್ನು ಹೊಂದಿರುತ್ತೇವೆ ಮತ್ತು ಕಾರ್ಯದಲ್ಲಿ ನಿಧಾನವಾಗಿ ಇರುತ್ತೇವೆ. ಯಶಸ್ಸಿನ ಸರಿಯಾದ ಸೂತ್ರವೆಂದರೆ, ಮನಸ್ಸಿನಲ್ಲಿ ಸಹನೆ ಮತ್ತು ಕಾರ್ಯದಲ್ಲಿ ಕ್ರಿಯಾಶೀಲತೆ. ವೈರಾಗ್ಯವನ್ನು ಮತ್ತು ಅನುರಾಗವನ್ನೂ ಆಲಂಗಿಸಿ. ಗುರಿಗಳನ್ನು ಸಾಧಿಸಲು ಧೈರ್ಯದಿಂದ ಮುನ್ನಡೆಯಿರಿ. ಅವಶ್ಯಕವಾದಾಗ ಬಿಟ್ಟುಬಿಡುವುದನ್ನೂ ಕಲಿಯಿರಿ.

ನೀವು ಧ್ಯಾನ ಮಾಡಿದಾಗ ಗಮನಿಸುವ ತೀಕ್ಷ್ಣತೆಯು ಹೆಚ್ಚುತ್ತದೆ. ಪೂರ್ಣವಾಗಿ ವಿಶ್ರಾಮಿತರಾಗುತ್ತೀರಿ. ಮತ್ತದೇ ಸಮಯದಲ್ಲಿ ಬುದ್ಧಿವಂತಿಕೆಯ ಬಲವನ್ನು, ಅರಿವಿನ ಮತ್ತು ಅಂತಃಸ್ಪುರಣೆಯ ತೀಕ್ಷ್ಣತೆಯನ್ನು ಹೊಂದುತ್ತೀರಿ. ನಿಮ್ಮಲ್ಲಿ ಅರಿವಿದ್ದಾಗ ಮತ್ತು ಕಾರ್ಯವನ್ನು ಮಾಡಿದಾಗ, ಆಗ ಆದೇ ಸರಿಯಾದ ಕಾರ್ಯ. ಅಚಲವಾದ ಏಕಾಗ್ರತೆ ಮತ್ತು ಅಂತಃಸ್ಪುರಣೆಯನ್ನುಳ್ಳ ಮನಸ್ಸಿನಿಂದ ಗುರಿಗಳನ್ನು ಸಾಧಿಸಲು ಸಾಧ್ಯ. ನೀವು ಎಲ್ಲಿಗೆ ತಲುಪಬೇಕೆಂದುಕೊಂಡಿರುವಿರೋ, ಅದರ ಬಗ್ಗೆ ಸ್ಪಷ್ಟವಾದ ದೃಷ್ಟಿಕೋನವನ್ನು ಪಡೆಯುವ ದಾರಿಯೆಂದರೆ ಧ್ಯಾನ. ದೀರ್ಘಕಾಲದಲ್ಲಿ ಬದ್ಧತೆಯು ಸದಾ ನಿಮಗೆ ಹಿತವನ್ನು ತಂದು ಕೊಡುತ್ತದೆ. ಈ ಭೂಮಿಯನ್ನು ಜೀವಿಸಲು ಉತ್ತಮವಾದ ಸ್ಥಳವಾಗಿ ಮಾಡಬೇಕೆಂದು ಬದ್ಧರಾಗಿ. ಅಸಾಧ್ಯವಾದುದರ ಕನಸನ್ನು ಕಾಣಿ!

(ಪ್ರತಿಕ್ರಿಯಿಸಿ: ಜ್ಞಿಠಠಿಚಜ್ಟಚಞಃಠ್ಟಜಿಠ್ಟಜ್ಟಿಚಡಜಿಠಜಚ್ಞkಚ್ಟ.kಚ್ಞ್ಞಛಚ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net