ಭೀಕರ ರಸ್ತೆ ಅಪಘಾತ: ಎರಡು ಬೈಕ್​ಗಳಿಗೆ ಡಿಕ್ಕಿ ಹೊಡೆದ ಅಪರಿಚಿತ ವಾಹನ; ನಾಲ್ವರು ಸಾವು| Accident

Untitled design - 2025-10-02T145920.588
Published on

Accident: ಉತ್ತರ ಪ್ರದೇಶದ ಉತ್ರೌಲಾ-ಬಲರಾಂಪುರ ರಸ್ತೆಯಲ್ಲಿ ವೇಗವಾಗಿ ಬಂದ ಅಪಚಿತ ವಾಹನವೊಂದು ಎರಡು ಬೈಕ್​ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಯುವಕರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ(ಅ. 02) ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಶಾಲ್ ಪಾಂಡೆ, ಬುಧವಾರ ರಾತ್ರಿ ಕಂದ್ಭಾರಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.  ಮಹಾರಾಜಗಂಜ್ ತರೈ ಪೊಲೀಸ್ ಠಾಣೆ ವ್ಯಾಪ್ತಿಯ ಮುರದಿಹ್ ಗ್ರಾಮದ ಆರು ಯುವಕರು ಎರಡು ಮೋಟಾರ್ ಸೈಕಲ್‌ಗಳಲ್ಲಿ ದಿರ್ಗಾ ವಿಗ್ರಹಗಳನ್ನು ನೋಡಲು ಉತ್ರೌಲಾಕ್ಕೆ ಹೋಗುತ್ತಿದ್ದಾಗ, ವೇಗವಾಗಿ ಬಂದ ವಾಹನವೊಂದು ಅವರ ಮೇಲೆ ಡಿಕ್ಕಿ ಹೊಡೆದ ಪರಿಣಾಮ ಅವರೆಲ್ಲರೂ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಂಜಯ್ ಕುಮಾರ್ ವರ್ಮಾ (23), ಕಲ್ಲು (17), ಅಂಕಿತ್ (17) ಮತ್ತು ಗೋಲು (14) ಮೃತಪಟ್ಟಿದ್ದಾರೆ. 22 ವರ್ಷದ ಅರವಿಂದ್ ಮತ್ತು ದಿನೇಶ್ ಅವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಲಕ್ನೋದ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಪರಿಚಿತ ವಾಹನ ಚಾಲಕನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಎಎಸ್​ಪಿ ಪಾಂಡೆ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net