

ನವದೆಹಲಿ: ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಆರಂಭಗೊಂಡಿದ್ದು, ದ್ರೌಪದಿ ಮುರ್ಮು ಅವರೇ ರಾಷ್ಟ್ರಪತಿ ಎಂಬುದು ನಿಚ್ಚಳಗೊಂಡಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಬಿಜೆಪಿ ವಲಯದಲ್ಲಿ ಸಂಭ್ರಮದ ವಾತಾವರಣ ಉಂಟಾಗಿದ್ದು, ಶುಭಾಶಯಗಳ ಸುರಿಮಳೆಯೂ ಆರಂಭಗೊಂಡಿದೆ.
ಮೂರನೇ ಸುತ್ತಿನ ಮತಎಣಿಕೆಯಲ್ಲೇ ದ್ರೌಪದಿ ಮುರ್ಮು ಅವರು ಚಲಾವಣೆ ಆಗಿರುವ ಒಟ್ಟು ಮತಗಳ ಅರ್ಧಕ್ಕಿಂತಲೂ ಅಧಿಕ ಮತ ಪಡೆದಿದ್ದು, ಯುಪಿಎ ಅಭ್ಯರ್ಥಿ ಯಶ್ವಂತ್ ಸಿನ್ಹಾ ವಿರುದ್ಧ ಅವರ ಗೆಲುವು ಬಹುತೇಕ ಖಚಿತಗೊಂಡಿದೆ. ಏಕೆಂದರೆ ದ್ರೌಪದಿ ಈಗಾಗಲೇ 5,77,777 ಮತ ಗಳಿಸಿರುವುದಾಗಿ ಮೂಲಗಳು ತಿಳಿಸಿವೆ.
ಜುಲೈ 24ಕ್ಕೆ ರಾಮನಾಥ ಕೋವಿಂದ ಅವರ ಅಧಿಕಾರಾವಧಿ ಮುಗಿಯಲಿದ್ದು, ಅದರ ಮರುದಿನ ಅಂದರೆ ಜುಲೈ 25ರಂದು ನೂತನ ರಾಷ್ಟ್ರಪತಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.