

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ದೇಶದ ಜನತೆಗೆ ಶುಭಾಶಯ ತಿಳಿಸಿದ್ದಾರೆ.
'ದೇಶದ ಎಲ್ಲ ನಾಗರಿಕರು ಮತ್ತು ವಿದೇಶದಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ಹೊಸ ವರ್ಷದ ಶುಭಾಶಯಗಳು. 2023ರ ವರ್ಷವು ನಮ್ಮ ಜೀವನದಲ್ಲಿ ಹೊಸ ಸ್ಪೂರ್ತಿ, ಗುರಿ ಮತ್ತು ಸಾಧನೆಗಳನ್ನು ತರಲಿ. ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಅಂತರ್ಗತ ಅಭಿವೃದ್ಧಿಗೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳಲು ಸಂಕಲ್ಪ ಮಾಡೋಣ' ಎಂದು ರಾಷ್ಟ್ರಪತಿಗಳು ಟ್ವೀಟ್ ಮಾಡಿದ್ದಾರೆ.
'2023ನೇ ವರ್ಷ ನಿಮ್ಮ ಪಾಲಿಗೆ ಭರವಸೆ, ಸಂತೋಷ ಮತ್ತು ಬಹಳಷ್ಟು ಯಶಸ್ಸಿನಿಂದ ತುಂಬಿರಲಿ. ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಸಿಗುವಂತಾಗಲಿ' ಎಂದು ಪ್ರಧಾನಿ ಮೋದಿ ಅವರು ಆಶಿಸಿದ್ದಾರೆ.
'2023ನೇ ವರ್ಷವು ಪ್ರತಿ ಬೀದಿ, ಪ್ರತಿ ಹಳ್ಳಿ, ನಗರದಲ್ಲೂ ಪ್ರೀತಿ ಹಂಚುವ ಅಂಗಡಿ ತೆರೆಯಲಿದೆ' ಎಂಬ ಭರವಸೆಯ ಶೀರ್ಷಿಕೆಯೊಂದಿಗೆ ಭಾರತ್ ಜೋಡೋ ಯಾತ್ರೆಯಲ್ಲಿ ಜನರೊಂದಿಗಿನ ಬೆರೆತ ಫೋಟೋಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶೇರ್ ಮಾಡಿಕೊಂಡು ಹೊಸ ವರ್ಷಾಚರಣೆಗೆ ಶುಭಾಶಯ ತಿಳಿಸಿದ್ದಾರೆ.
ಹೊಸ ವರ್ಷ 2023 ನಮಗೆಲ್ಲರಿಗೂ ಹೆಚ್ಚು ಸಂತೋಷ, ಯಶಸ್ಸು, ಶಾಂತಿಯನ್ನು ತರಲಿ. ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅವಕಾಶ ಕೊಡಿ. ಒಂದು ಜಗತ್ತು, ಒಂದು ಕುಟುಂಬ, ಒಂದು ಭವಿಷ್ಯದ ಜಿ-20 ಕನಸು ನನಸಾಗಿದೆ. ಎಲ್ಲರಿಗೂ ಶುಭಾಶಯಗಳು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹೊಸ ವರ್ಷವು ನಮಗೆ ಹೊಸ ಯೋಜನೆ ಪ್ರಾರಂಭಿಸಲು ಮತ್ತು ಜೀವನವನ್ನು ಧನಾತ್ಮಕವಾಗಿ ನೋಡಲು ಉತ್ತಮ ಅವಕಾಶ ಒದಗಿಸುತ್ತದೆ. ಈ ಅವಕಾಶವನ್ನು ಎಲ್ಲರೂ ಉತ್ತಮ ಸಂಕಲ್ಪದೊಂದಿಗೆ ಬಳಸಿಕೊಳ್ಳೋಣ. ಎಲ್ಲರಿಗೂ ಹೊಸವರ್ಷದ ಶುಭಾಶಯಗಳು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಟ್ವೀಟ್ ಮಾಡಿದ್ದಾರೆ.