ದೇಶದಲ್ಲಿ ಕರೊನಾ ಪ್ರಕರಣಗಳ ನಿರಂತರ ಇಳಿಕೆ; ಶೇಕಡ 94.66ಕ್ಕೇರಿತು ಚೇತರಿಕೆ ಪ್ರಮಾಣ

Corona
Published on

ನವದೆಹಲಿ: ಭಾರತದಲ್ಲಿ ಕರೊನಾ ಪ್ರಕರಣ ನಿಧಾನವಾಗಿ ಇಳಿಕೆಯಾಗುತ್ತಿದ್ದು, ಚೇತರಿಕೆ ಪ್ರಮಾಣ ಹೆಚ್ಚಾಗಿದೆ. ಸೋಂಕಿತರ ಚೇತರಿಕೆ ಪ್ರಮಾಣ ಸದ್ಯ ಶೇಕಡ 94.66ಕ್ಕೆ ತಲುಪಿದ್ದು, ಈವರೆಗೆ 92.52 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ. ಪ್ರತಿದಿನ ಸರಾಸರಿ 30 ಸಾವಿರ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಬುಧವಾರ 31 ಸಾವಿರ ಪ್ರಕರಣಗಳೊಂದಿಗೆ ಒಟ್ಟು ಕೇಸ್​ಗಳ ಸಂಖ್ಯೆ 97.67 ಲಕ್ಷಕ್ಕೆ ಏರಿಕೆಯಾಗಿದೆ. 412 ಮಂದಿ ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 1.41 ಲಕ್ಷಕ್ಕೇರಿದೆ. ಹೊಸದಾಗಿ 37,700 ಸೋಂಕಿತರು ಗುಣಮುಖರಾಗಿದ್ದಾರೆ. ಪ್ರತಿದಿನದ ಹೊಸ ಪ್ರಕರಣಗಳಿಗಿಂತ ಗುಣಮುಖರ ಪ್ರಮಾಣ ಹೆಚ್ಚಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಸದ್ಯ 3.72 ಲಕ್ಷ ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ಕರೊನಾ ಪರೀಕ್ಷೆ ಸಂಖ್ಯೆ ಹೆಚ್ಚಿಸಲಾಗಿದ್ದು, ಗುರುವಾರ ಒಟ್ಟು ಪರೀಕ್ಷೆಯ ಸಂಖ್ಯೆ 15 ಕೋಟಿಗೂ ಹೆಚ್ಚಾಗಿದೆ. ಬುಧವಾರ ಒಂದೇ ದಿನ 9.22 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ. ಕಳೆದ 10 ದಿನಗಳಲ್ಲಿ 1 ಕೋಟಿಗೂ ಅಧಿಕ ಮಾದರಿಗಳನ್ನು ಪರೀಕ್ಷಿಸಲಾಗಿದೆ.

  • ಏರ್ ಬಬಲ್ ವ್ಯವಸ್ಥೆಯಡಿ ಭಾರತ-ನೇಪಾಳ ಶೀಘ್ರದಲ್ಲೇ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಪುನಃಸ್ಥಾಪಿಸಲಿವೆ.
  • ಹರಿಯಾಣದಲ್ಲಿ 10 ಮತ್ತು 12ನೇ ತರಗತಿ ಡಿಸೆಂಬರ್ 14ರಿಂದ ಪುನರಾರಂಭವಾಗಲಿದ್ದು, 9 ಮತ್ತು 11ನೇ ತರಗತಿ ಡಿಸೆಂಬರ್ 21ರಿಂದ ಶುರುವಾಗಲಿವೆ.
  • ದಕ್ಷಿಣ ಕೊರಿಯಾದಲ್ಲಿ ಕರೊನಾ ಮೂರನೇ ಅಲೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ನೂರಾರು ಕಂಟೇನರ್​ಗಳಲ್ಲಿ ತಾತ್ಕಾಲಿಕ ಬೆಡ್ ವ್ಯವಸ್ಥೆ ಮಾಡಲಾಗಿದೆ.

ಅಮೆರಿಕದಲ್ಲಿ ಮರಣ ಮೃದಂಗ

ಅಮೆರಿಕದಲ್ಲಿ ಕರೊನಾ ಎರಡನೆ ಅಲೆ ಭೀಕರವಾಗಿದೆ. ಬುಧವಾರ ಅಮೆರಿಕದಲ್ಲಿ ದಾಖಲೆ ಪ್ರಮಾಣ ಅಂದರೆ 3,200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಕಳೆದೊಂದು ವಾರದಿಂದಲೂ ಪ್ರತಿದಿನ 2 ಸಾವಿರಕ್ಕಿಂತ ಹೆಚ್ಚು ಜನರು ಕರೊನಾದಿಂದ ಮೃತಪಟ್ಟಿದ್ದಾರೆ. ಬುಧವಾರ 2.26 ಲಕ್ಷ ಹೊಸ ಪ್ರಕರಣಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1.58 ಕೋಟಿಗೆ ಏರಿಕೆಯಾಗಿದೆ. ಈವರೆಗೆ ಅಮೆರಿಕದಲ್ಲಿ 2.96 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ.

ಚೀನಾದ ವಿಮಾನ ಸಿಬ್ಬಂದಿಗೆ ಡೈಪರ್!

ಕರೊನಾ ಸೋಂಕಿಗೆ ಒಳಗಾಗುವ ಅಪಾಯವನ್ನು ತಪ್ಪಿಸುವ ಸಲುವಾಗಿ ವಿಮಾನದ ಕ್ಯಾಬಿನ್ ಸಿಬ್ಬಂದಿ ಡೈಪರ್ ಬಳಸಿ ಎಂದು ಚೀನಾದ ವಾಯುಯಾನ ನಿಯಂತ್ರಕ ಸಲಹೆ ನೀಡಿದೆ. ಟಾಯ್ಲೆಟ್​ನ್ನು ಎಲ್ಲರೂ ಬಳಸುವುದರಿಂದ ಕರೊನಾಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಕ್ಯಾಬಿನ್ ಸಿಬ್ಬಂದಿ ಡೈಪರ್ ಬಳಸುವ ಮೂಲಕ ಟಾಯ್ಲೆಟ್ ಬಳಕೆ ತಪ್ಪಿಸಿ ಎಂದು ಹೇಳಿದೆ.

ಜಾಗತಿಕ ಪ್ರಕರಣ 7 ಕೋಟಿ ಸನಿಹಕ್ಕೆ

ಹಲವು ದೇಶಗಳಲ್ಲಿ ಕರೊನಾ 2ನೇ ಅಲೆ ಉಂಟಾಗಿರುವುದರಿಂದ ಪ್ರತಿದಿನದ ಹೊಸ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗಿದೆ. ಸದ್ಯ ಪ್ರತಿದಿನ ಸರಾಸರಿ 7 ಲಕ್ಷ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 6.92 ಕೋಟಿಗೆ ಏರಿಕೆಯಾಗಿದೆ. ಬುಧವಾರ 12,300 ಮಂದಿ ಸಾವನ್ನಪು್ಪವುದರ ಜತೆಗೆ ಮೃತರ ಸಂಖ್ಯೆ 15.74 ಲಕ್ಷಕ್ಕೇರಿದೆ. ಈವರೆಗೆ 4.79 ಕೋಟಿ ಸೋಂಕಿತರು ಗುಣಮುಖರಾಗಿದ್ದು, ಇನ್ನೂ 1.96 ಕೋಟಿ ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 1.06 ಲಕ್ಷ ರೋಗಿಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net