ಭದ್ರಾ ಜಲಾಶಯದಿಂದ 10 ದಿನಗಳಿಗೊಮ್ಮೆ ನಾಲೆಗೆ ನೀರು ಹರಿಸಿ

01 TKE 1
ಭದ್ರಾ ಜಲಾಶಯದ ನೀರನ್ನು ಆನ್ ಆ್ಯಂಡ್ ಆಫ್ ಪದ್ಧತಿ ಮೂಲಕ ಹರಿಸಬೇಕು ಎಂದು ಆಗ್ರಹಿಸಿ ರೈತರು ನೀರಾವರಿ ನಿಗಮದ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೆ.ಟಿ.ಗಂಗಾಧರ್, ಕೆ.ಎಚ್.ಮಹೇಂದ್ರ, ಕೆ.ಪಿ.ಕುಮಾರ್, ಎಲ್.ಎಸ್.ಶಿವಯೋಗಿ, ಲವ ಕುಮಾರ್ ಇದ್ದರು.
Published on

ತರೀಕೆರೆ: ನಾಲೆಗಳಿಗೆ ಆ್ ಆ್ಯಂಡ್ ಆನ್ ಪದ್ಧತಿ ಮೂಲಕ 10 ದಿನಗಳಿಗೊಮ್ಮೆ ನೀರು ಹರಿಸಬೇಕು ಎಂದು ಆಗ್ರಹಿಸಿ ತಾಲೂಕು ಭದ್ರಾ ಜಲಾನಯನ ಅಚ್ಚುಕಟ್ಟು ಪ್ರದೇಶದ ರೈತರ ಹಿತ ರಕ್ಷಣಾ ಸಮಿತಿ ಸದಸ್ಯರು ಶುಕ್ರವಾರ ಬಿ.ಆರ್.ಪ್ರಾಜೆಕ್ಟ್ ಸಮೀಪದ ಕರ್ನಾಟಕ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿ, ಭದ್ರಾ ಅಚ್ಚಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ರೈತರು ಬೆಳೆಯುವ ಬೆಳೆಗಳ ರಕ್ಷಣೆ ಜತೆ ಅನ್ನದಾತರ ಹಿತ ಕಾಪಾಡಬೇಕಾದ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಭತ್ತದ ಬೆಳೆಗೆ ನೀರು ಹರಿಸುವ ನೆಪವೊಡ್ಡಿ ಪ್ರಸಕ್ತ ಸನ್ನಿವೇಶದಲ್ಲಿ ಜಲಾಶಯದಲ್ಲಿ ಸಂಗ್ರಹವಾಗಿರುವ ಕನಿಷ್ಠ ಪ್ರಮಾಣದ ನೀರನ್ನು ನಾಲೆ ಮೂಲಕ ಹರಿಸಿ ಪೋಲು ಮಾಡುತ್ತಿದ್ದಾರೆ. ಈ ರೀತಿಯ ನಿಲುವುಗಳಿಂದ ಅಡಕೆ ಮತ್ತು ಭತ್ತ ಬೆಳೆಗಾರರ ನಡುವೆ ಒಡಕು ಮೂಡಿಸುತ್ತಿದ್ದಾರೆ ಎಂದು ದೂರಿದರು.
ಸರ್ಕಾರ ಭದ್ರಾ ಜಲಾಶಯದಿಂದ ಭದ್ರಾ ಬಲ ಮತ್ತು ಎಡ ದಂಡೆ ನಾಲೆ ಮೂಲಕ ಸತತ 100 ದಿನಗಳ ಕಾಲ ನೀರು ಹರಿಸಲು ತೀರ್ಮಾನಿಸಿದೆ. ಸದ್ಯ ಜಲಾಶಯದಲ್ಲಿ ಸಂಗ್ರಹವಾಗಿರುವ 165 ಅಡಿ ನೀರನ್ನು ದಿನವೊಂದಕ್ಕೆ 4 ಇಂಚು ಪ್ರಮಾಣದಂತೆ ಹರಿಸಿದರೆ, ಮೂರು ದಿನಕ್ಕೆ 1ಅಡಿಯಷ್ಟು ನೀರು ಖಾಲಿಯಾಗಲಿದೆ. ಇದರಿಂದ ಬೇಸಿಗೆಯಲ್ಲಿ ಕೃತಕ ನೀರಿನ ಅಭಾವ ಸೃಷ್ಟಿಯಾಗಿ ತೋಟಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಡಕೆ, ತೆಂಗು ಸೇರಿ ವಿವಿಧ ವಾಣಿಜ್ಯ ಬೆಳೆಗಳಿಗೆ ನೀರಿನ ಸಮಸ್ಯೆ ಎದುರಾಗುವುದರಿಂದ ಇಂಥ ಬೆಳೆಗಳನ್ನು ನಂಬಿ ಬದುಕು ಕಟ್ಟಿಕೊಂಡಿರುವ ರೈತರು ಬೀದಿಗೆ ಬೀಳುವ ಆತಂಕ ಸೃಷ್ಟಿಯಾಗಲಿದೆ. ಈ ಎಲ್ಲ ಉದ್ದೇಶದಿಂದ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಇಂದಿನಿಂದಲೇ ಆನ್ ಆ್ಯಂಡ್ ಆ್ ಪದ್ಧತಿ ಮೂಲಕ ಅಂದರೆ 10 ದಿನ ಬಿಟ್ಟು ಮುಂದಿನ 10 ದಿನಕ್ಕೆ ನೀರು ಹರಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಚ್.ಮಹೇಂದ್ರ, ಜಿಪಂ ಮಾಜಿ ಸದಸ್ಯ ಕೆ.ಪಿ.ಕುಮಾರ್, ತಾಪಂ ಮಾಜಿ ಅಧ್ಯಕ್ಷ ಎಲ್.ಎಸ್.ಶಿವಯೋಗಿ, ರೈತ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳಾದ ಮೂಡಲಗಿರಿಯಪ್ಪ, ಎಲ್.ಟಿ.ಹೇಮಣ್ಣ, ಎಲ್.ಸಿ.ನಂದಕುಮಾರ್, ಲವಕುಮಾರ್, ಹರಿ, ರಮೇಶ್, ಬಾಬು, ಪರಮೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net