

ಅಜ್ಜಂಪುರ: ತಾಯಿ ತಂದೆ ಮತ್ತು ಶ್ರೀಗುರು ಜೀವನ ವಿಕಾಸಕ್ಕೆ ಕಾರಣೀಭೂತರು. ಭೌತಿಕ ಬದುಕಿಗೆ ಹೆತ್ತವರು ಕಾರಣರಾದರೆ; ಆಧ್ಯಾತ್ಮಿಕ ಬದುಕಿಗೆ ಗುರು ಮೂಲ. ಅಂತಹ ಗುರು ಕಾರುಣ್ಯದಿಂದ ಮನುಷ್ಯನ ಬದುಕು ಉಜ್ವಲಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಿಸಿದ್ದಾರೆ. ಅಜ್ಜಂಪುರ ತಾಲೂಕಿನ ಗೊಂಡೇದಹಳ್ಳಿ ಶ್ರೀ ಗುರುರೇಣುಕ ಜನಕಲ್ಯಾಣ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಪರಶಿವನ ಸಾಕಾರ ರೂಪವೇ ಶ್ರೀಗುರು. ಶಿವ ಮತ್ತು ಗುರುವಿನಲ್ಲಿ ಯಾವುದೇ ಭೇದವಿಲ್ಲ. ವೀರಶೈವ ಧರ್ಮದಲ್ಲಿ ಗುರುವಿಗೆ ಅಗ್ರಸ್ಥಾನವಿದೆ. ಸಮರ್ಥ ಗುರುವಿನಿಂದ ಎಲ್ಲ ಸೌಭಾಗ್ಯ ಸಂಪತ್ತು ಪ್ರಾಪ್ತಿಯಾಗುತ್ತದೆ. ಜಗದ ಕತ್ತಲೆ ಕಳೆಯಲು ಸೂರ್ಯ ಬೇಕು. ಬದುಕಿನ ಅಜ್ಞಾನ ಕಳೆಯಲು ಗುರು ಬೇಕು. ಶ್ರೀಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಶಿವಾದ್ವೈತ ಸಿದ್ಧಾಂತದಲ್ಲಿ ಶ್ರೀಗುರುವಿನ ಪಾತ್ರ ಅಮೋಘವಾಗಿದೆ. ಯುಗ ಪುರುಷರಾದ ಶ್ರೀಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವ ಸಿದ್ಧಾಂತಗಳು ಮತ್ತು ತೋರಿದ ದಾರಿ ಸಕಲರಿಗೂ ಬೆಳಕನ್ನು ತೋರಿವೆ. ನೊಂದು ಬೆಂದವರ ಧ್ವನಿಯಾಗಿ ದೀನ ದಲಿತರ ಏಳಿಗೆಗೆ ಸದಾ ಶ್ರಮಿಸಿದ ಹಾಗೂ ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ತಂದು ಕೊಟ್ಟ ಹಿರಿಮೆ ಶ್ರೀಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಅಂತಹ ಮಹಿಮಾನ್ವಿತರ ಯುಗಮಾನೋತ್ಸವ ಹಮ್ಮಿಕೊಂಡಿರುವ ಗೊಂಡೇದಹಳ್ಳಿ ಶ್ರೀಗುರು ರೇಣುಕ ಜನ ಕಲ್ಯಾಣ ಪ್ರತಿಷ್ಠಾನದ ಕಾರ್ಯ ಸ್ತುತ್ಯಾರ್ಹವೆಂದು ಅವರು ಪ್ರಶಂಸಿಸಿದರು.
ಸಮಾರಂಭದಲ್ಲಿ ಪತ್ರಕರ್ತ ಪ್ರಶಾಂತ್ ರಿಪ್ಪನ್‌ಪೇಟೆ ದತ್ತಿ ಉಪನ್ಯಾಸ ನೀಡಿದರು. ಲೆಫ್ಟಿನೆಂಟ್ ಜನರಲ್ ಬಗ್ಗುವಳ್ಳಿ ಸೋಮಶೇಖರ್ ರಾಜು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಡೆಯೂರು ಕ್ಷೇತ್ರದ ಶ್ರೀರೇಣುಕ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ತಾವರೆಕೆರೆ, ಬಿಳಕಿ, ಹುಣಸಘಟ್ಟ ಮಠದ ಶ್ರೀಗಳು ಉಪಸ್ಥಿತರಿದ್ದರು. ಸಮಾಜದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ವಿವಿಧ ಪುರಸ್ಕಾರ ನೀಡಿ ಗೌರವಿಸಲಾಯಿತು.
ವಿಶ್ವ ಬಂಧುತ್ವ ಸಾರಿದ ಜಗದ್ಗುರು ರೇಣುಕಾಚಾರ್ಯರ ಚಿಂತನಗಳು ಜನಮನವನ್ನು ತಲುಪಬೇಕೆಂಬ ಸದುದ್ದೇಶದಿಂದ ಪ್ರತಿ ವರ್ಷ ಈ ಸಮಾರಂಭ ಹಮ್ಮಿಕೊಳ್ಳಲಾಗುತ್ತಿದೆ. ಜಾತಿ ಮತ ಜಂಜಡಗಳನ್ನು ಮೀರಿ ಧಾರ್ಮಿಕ ಮತ್ತು ಸಾಮಾಜಿಕ ಸತ್ಕ್ರಾಂತಿಗೈದ ರೇಣುಕಾಚಾರ್ಯರ ಜಯಂತಿಯನ್ನು ಸರ್ವಧರ್ಮಿಯರೂ ಸೇರಿ ಮಾಡುತ್ತಿರುವುದಕ್ಕೆ ಎಡೆಯೂರು ಶ್ರೀಗಳು ಸಂತಸ ವ್ಯಕ್ತಪಡಿಸಿದರು.