

ಸಾಗರ: ಪ್ರಕೃತಿಯನ್ನು ಆರಾಧಿಸುವ ಮೂಲಕ ದೇವರನ್ನು ಕಾಣಬೇಕು. ಜಗತ್ತಿಗೆ ಉಸಿರು ನೀಡಿ ಬದುಕು ಮುನ್ನಡೆಸಲು ಸಹಕಾರಿಯಾಗಿರುವ ನಮ್ಮ ಪ್ರಕೃತಿಯನ್ನು ಉಳಿಸಿಕೊಳ್ಳಬೇಕು ಎಂದು ಆನಂದಪುರ ಮುರುಘಾಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಅತಿಶಯ ಶ್ರೀ ಸಿದ್ದಗಿರಿ ಕ್ಷೇತ್ರ ವಡನ್‌ಬೈಲ್‌ನಲ್ಲಿ ಮಾ.1ರಿಂದ 6ರವರೆಗೆ ಆಯೋಜಿಸಿರುವ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಪಂಚಕಲ್ಯಾಣ ಮಹೋತ್ಸವ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಜಗತ್ತನ್ನು ಜಯಿಸುವುದು ಮುಖ್ಯವಲ್ಲ. ತನ್ನನ್ನು ತಾನು ಮೊದಲು ಜಯಿಸಿ ಮನಸ್ಸನ್ನು ಗೆಲ್ಲಬೇಕು. ತ್ಯಾಗ ಮಾಡುವುದು ಶ್ರೇಷ್ಠವಾದದ್ದು. ಜೈನಧರ್ಮದಲ್ಲಿ ಮುನಿಧರ್ಮವನ್ನು ಗಮನಿಸಿದರೆ ತ್ಯಾಗಧರ್ಮಕ್ಕೆ ವಿಶೇಷ ಮಹತ್ವವಿದೆ ಎನ್ನುವುದು ಅರಿವಿಗೆ ಬರುತ್ತದೆ. ವಿಶ್ವಕ್ಕೆ ಜೈನಧರ್ಮ ನೀಡಿದ ಕೊಡುಗೆ ಅಪಾರ. ಆತ್ಮಸಾಕ್ಷಾತ್ಕಾರದಿಂದ ಜೀವನ ಸಾರ್ಥಕವಾಗುತ್ತದೆ. ಎಲ್ಲ ಜೀವಿಗಳಿಗೂ ಒಳ್ಳೆಯದನ್ನು ಬಯಸುವ ಧರ್ಮವೇ ಶ್ರೇಷ್ಠ ಧರ್ಮ ಎಂದರು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಪುಣ್ಯಸಾಗರ ಮುನಿಗಳು, ಬದುಕಿನಲ್ಲಿ ನಿರಂತರವಾಗಿ ಧರ್ಮಕಾರ್ಯಗಳನ್ನು ಮಾಡಬೇಕು. ದ್ವೇಷ, ಅಸೂಯೆ ಸೇರಿದಂತೆ ಅರಿಷಡ್ವರ್ಗಗಳನ್ನು ನಾಶ ಮಾಡಿದರೆ ಮಾತ್ರ ಮೋಕ್ಷದೆಡೆಗೆ ಸೇರಲು ಸಾಧ್ಯ. ಅಹಿಂಸೆಯನ್ನು ಉಸಿರಾಗಿಸಿಕೊಂಡು ಸಾರ್ಥಕ ಜೀವನ ನಡೆಸಬೇಕು. ಹಣ ಗಳಿಸುವುದೇ ಬದುಕು ಆಗಬಾರದು. ಪುಣ್ಯ ಮತ್ತು ಧರ್ಮ ಕಾರ್ಯಕ್ಕಾಗಿ ಒಂದಷ್ಟು ಸಮಯ ಮೀಸಲಿಡಬೇಕು. ಜೈನಧರ್ಮವು ಜಗತ್ತಿಗೆ ಅಹಿಂಸಾ ಸಂದೇಶವನ್ನು ನೀಡಿದೆ ಎಂದರು.
ಆರತಿಪುರ ಜೈನ ಮಠದ ಸ್ವಸ್ತಿಶ್ರೀ ಸಿದ್ಧಾಂತ ಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ಸೋಂದಾ ಜೈನಮಠದ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ವಡನಬೈಲ್ ಕ್ಷೇತ್ರದ ಧರ್ಮದರ್ಶಿ ಎಚ್.ಎಂ.ವೀರರಾಜಯ್ಯ ಜೈನ್, ಪ್ರಮುಖರಾದ ಸವಿತಾ ದೇವರಾಜ್, ಎಸ್.ಆರ್.ನಾಗರಾಜ್, ಪದ್ಮನಾಭಯ್ಯ ಹಾರಿಗೆ, ಪ್ರೇಮ್‌ಕುಮಾರ್ ಕಾರ್ಗಲ್, ಸುರೇಂದ್ರ ಮಹಾಲೆ, ಕೆ.ಟಿ.ನೇಮಯ್ಯ, ರಾಜು ಪಂಡಿತ್, ಪೂಜಾ ಬಬಿತಾ, ದೇವರಾಜ್, ಕುಮುದಾ ನಾಗಭೂಷಣ್ ಇತರರಿದ್ದರು.