ಮಾನವೀಯ ಕಾಳಜಿ ಗಮನಿಸಿ ಮತ ನೀಡಿ: ಡಾ. ಸರಸ್ವತಿ ಚಿಮ್ಮಲಗಿ ಮನವಿ

19 smg Dr. Saraswathi chimmalagi
Published on

ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡಿದ್ದು ಮಹಿಳೆ ಎಂಬ ಕಾರಣಕ್ಕೆ ಮತ ಕೇಳುತ್ತಿಲ್ಲ. ಬದಲಾಗಿ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆ, ರಂಗ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ, ಸಾಮಾಜಿಕ ಸೇವೆ ಮತ್ತು ಮಹಿಳೆಯರು, ಶೋಷಿತರ ಪರ ಹೋರಾಟ ಹಾಗೂ ಮಾನವೀಯ ಕಾಳಜಿಗಳನ್ನು ಗಮನಿಸಿ ಗೆಲ್ಲಿಸುವಂತೆ ಸಾಹಿತಿ ಡಾ. ಸರಸ್ವತಿ ಚಿಮ್ಮಲಗಿ ಮನವಿ ಮಾಡಿದರು.

ಮೇ 9ರಂದು ನಡೆಯುವ ಕಸಾಪ ಚುನಾವಣೆಯಲ್ಲಿ ಏಕೈಕ ಮಹಿಳೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಸಾಹಿತ್ಯ ಪರಿಷತ್ತು ಕನ್ನಡಿಗರ ಹೆಮ್ಮೆಯ ಸಂಸ್ಥೆ. 3.20 ಲಕ್ಷ ಸದಸ್ಯರಿದ್ದು ಅದರಲ್ಲಿ 80 ಸಾವಿರ ಮಹಿಳಾ ಸದಸ್ಯರಿದ್ದಾರೆ. ಹಾಗಾಗಿ ಈ ಬಾರಿ ಮಹಿಳಾ ಸದಸ್ಯರ ಜತೆಗೆ ಪುರುಷರೂ ತನಗೆ ಮತ ನೀಡುವಂತೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿನಂತಿಸಿದರು.

ಸಂಘಟಿಯಾಗಿ, ಲೇಖಕಿಯಾಗಿ, ಕಲಾವಿದೆಯಾಗಿ ಕೆಲಸ ಮಾಡಿದ್ದೇನೆ. ನಾಡು, ನುಡಿ, ನೆಲ, ಜಲ, ಗಡಿ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದು, ಮಹಿಳೆಯರಿಗೆ ಆದ್ಯತೆ, ತಾಲೂಕು ಅಧ್ಯಕ್ಷ ಆಯ್ಕೆ ಸೇರಿ ಬೈಲಾದಲ್ಲಿ ಕೆಲ ತಿದ್ದುಪಡಿ ಮಾಡುವುದು, ಸಮ್ಮೇಳನಗಳನ್ನು ಆಯೋಜಿಸುವುದು, ಗಡಿನಾಡು ಸಮ್ಮೇಳನ ಮಾಡುವುದು, ರಾಜ್ಯ ಮಟ್ಟದಿಂದ ಹಳ್ಳಿವರೆಗೆ ಸಾಹಿತ್ಯ ಸರಸ್ವತಿಯನ್ನು ಕೊಂಡೊಯ್ಯುವುದು ನನ್ನ ಮುಂದಿನ ಆಯ್ಕೆ ಎಂದು ಹೇಳಿದರು.

ನಿವೃತ್ತ ಪ್ರಾಧ್ಯಾಪಕಿ ಪ್ರೊ. ಕಿರಣ್ ದೇಸಾಯಿ, ಅಶ್ವಿನಿ ತಳವಾರ್, ಶಾರದಾ ಮಾಳೇನವರ್, ಎಂ.ಆಶಾಲತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net